ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ಆದರೆ ಈ ಒತ್ತಾಯಕ್ಕೆ ಮಣಿಯದ ಸಭಾಪತಿ, ಚುನಾವಣೆ ವಿಷಯ ಬಿಟ್ಟು ಬೇರೆ ಯಾವುದೇ ವಿಷಯ ಚರ್ಚೆಗೆ ಅವಕಾಶವಿಲ್ಲ. ಚುನಾವಣೆ ನಂತರ ಈ ಬಗ್ಗೆ ಮಾತನಾಡಿ ಎಂದು ತಿಳಿಸಿದರೂ ಪ್ರತಿಪಕ್ಷಗಳು ಒಪ್ಪಲಿಲ್ಲ. ಹೀಗಾಗಿ ಕೆಲ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಭಾಪತಿ ಸ್ಥಾನದ ಚುನಾವಣೆ ಅಗತ್ಯವೇನಿತ್ತು? ಆ.14ರಂದು ರಾಜೀನಾಮೆ ನೀಡುವುದಾಗಿ ಹೊರಟ್ಟಿ ಅವರೇ ತಿಳಿಸಿದ್ದರು. ಆದರೆ, ಆ.7ರಂದೇ ರಾಜೀನಾಮೆ ಏಕೆ ಪಡೆಯಲಾಗಿದೆ ಎಂಬುದರ ಬಗ್ಗೆ ಸದನ ಹಾಗೂ ಜನರಿಗೆ ತಿಳಿಸಬೇಕು. ಕೆಪಿಸಿಸಿ ಅಧ್ಯಕ್ಷರು ಸೇರಿ ಅನೇಕ ಸದಸ್ಯರು ತಮ್ಮ ಕಚೇರಿಗೆ ಬಂದು ಲೆಟರ್ ಹೆಡ್ ತರಿಸಿ ಬಲವಂತವಾಗಿ ರಾಜೀನಾಮೆ ಪಡೆದುಕೊಂಡಿರುವುದಾಗಿ ಹೊರಟ್ಟಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಹೊರಟ್ಟಿ ಅವರು ಸ್ಪಷ್ಟನೆ ನೀಡಬೇಕು, ಇಲ್ಲವೇ ಸರ್ಕಾರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ಹಿರಿಯ ಸದಸ್ಯರಾದ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಗೌರವಯುತವಾಗಿ ನಿರ್ಗಮಿಸಲು ಅವಕಾಶ ಕೊಡಲಿಲ್ಲ ಎಂಬ ಬಗ್ಗೆ ತಮಗೆ ನೋವು ಇದೆ. ಇಂತಹ ಪ್ರಸಂಗ ನಡೆಯಬಾರದು ಎಂದು ಆಶಿಸಿದರು.
ಸದಸ್ಯರ ಮಾತು ಪರಿಗಣಿಸದ ಸಭಾಪತಿ ಪುಟ್ಟಣ್ಣ. ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಬೇರೆ ಯಾವುದೇ ವಿಷಯ ಚರ್ಚೆಗೆ ಅವಕಾಶವಿಲ್ಲ. ನಿಮಗೆ ಅನ್ಯಾಯವಾಗಿದೆ. ಒತ್ತಾಯ ಮಾಡಲಾಗಿದೆ ಎಂದಾದರೆ ಪೊಲೀಸರಿಗೆ ದೂರು ನೀಡಿ ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು. ಗದ್ದಲದ ನಡುವೆಯೇ ಚುನಾವಣೆ ಪ್ರಕ್ರಿಯೆ ಆರಂಭಿಸಿದರು. ನಂತರ ಪ್ರತಿಪಕ್ಷಗಳ ಸದಸ್ಯರು ಸುಮ್ಮನಾಗಿದ್ದರಿಂದ ಚುನಾವಣೆ ಕಲಾಪ ಸುಸೂತ್ರವಾಗಿ ನಡೆಯಿತು.