ಬರಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ಮನವಿ

KannadaprabhaNewsNetwork |  
Published : Aug 15, 2026, 02:45 AM IST
14ಬಿಜಿಪಿ-2 | Kannada Prabha

ಸಾರಾಂಶ

ತಾಲೂಕಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಇದರಿಂದ ಈ ಭಾಗದ ರೈತರು ಬಿತ್ತನೆ ಸಮಯ ಮುಗಿಯುತ್ತಿದ್ದರೂ ಬಿತ್ತನೆ ಅಗತ್ಯ ಮಳೆ ಆಗುತ್ತಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ. ಪ್ರಭು ಅವರಿಗೆ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರಿಂದ ಒತ್ತಾಯ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ಜಿಲ್ಲಾ ಸಹಕಾರ ಬ್ಯಾಂಕ್‍ಗಳಿಂದ ರೈತರಿಗೆ ಬಡ್ಡಿ ರಹಿತ ಬೆಳೆ ಸಾಲ ಒದಗಿಸಬೇಕು, ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿನ ರೈತರ ಬೆಳೆ ಸಾಲ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪುರಸಭೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಜಿ. ಪ್ರಭು ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಇದರಿಂದ ಈ ಭಾಗದ ರೈತರು ಬಿತ್ತನೆ ಸಮಯ ಮುಗಿಯುತ್ತಿದ್ದರೂ ಬಿತ್ತನೆ ಅಗತ್ಯ ಮಳೆ ಆಗುತ್ತಿಲ್ಲ. ಕೇವಲ ಶೆ.10 ರಷ್ಟು ಮಾತ್ರ ಬಿತ್ತನೆಯಾಗಿದೆ, ಈಗ ಬಿತ್ತನೆ ಮಾಡಿದರೂ ಸಹ ಯಾವುದೇ ಬೆಳೆ ಆಗದಂತಹ ಪರಿಸ್ಥಿತಿ. ಮಳೆಯ ಅಭಾವದಿಂದಾಗಿ ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಆಗಿದೆ. ಲಭ್ಯವಿರುವ ಕೊಳವೆ ಬಾವಿಗಳಲ್ಲಿನ ನೀರಿನಿಂದ ವ್ಯವಸಾಯ ಮಾಡಲು ಕಷ್ಟವಾಗುತ್ತಿದೆ. ಡೀಸಲ್ ಧರ ಹೆಚ್ಚಳದಿಂದಾಗಿ ಭೂಮಿ ಉಳಿಮೆ ಮಾಡುವ ಟ್ರ್ಯಾಕ್ಟರ್ ಬಾಡಿಗೆ ಹೆಚ್ಚಾಗಿದೆ ಅಲ್ಲದೆ ವ್ಯವಸಾಯಕ್ಕೆ ಅಗತ್ಯವಿರುವ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಕನಿಷ್ಠ ಹಾಕಿರುವ ಬಂಡವಾಳವೂ ಸಹ ಕೈಗೆ ಸಿಗದಂತ ಪರಿಸ್ಥಿತಿಯಿಂದ ರೈತರು ಕಂಗಾಲಾಗಿದ್ದಾರೆ ಎಂದರು.

ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಕಾರ್ಮಿಕರಿಗೆ ಕೆಲಸವಿಲ್ಲದೆ ಪರದಾಡುವಂತಹ ಸ್ಥಿತಿ ಎದುರಿಸುವಂತಾಗಿದೆ. ನರೇಗಾ ಯೋಜನೆ ಬದಲಿಗೆ ವಿಬಿ ಗ್ರಾಮ್ ಜಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ರೈತರ, ಕೃಷಿ ಕಾರ್ಮಿಕರಿಗೆ ಇದುವರೆವಿಗೂ ಕೆಲಸ ಸಿಕ್ಕಿಲ್ಲ. ನರೇಗ ಯೋಜನೆ ಗ್ರಾಮೀಣ ಪ್ರದೇಶದವರಿಗೆ ಆಸರೆಯಾಗಿತ್ತು. ಈಗ ಅದೂ ಸಹ ಇಲ್ಲವಾಗಿದ್ದು ಕೂಲಿಗಾಗಿ ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ತೀವ್ರ ಅಭಾವದಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈಗಿನ ಸದ್ಯದ ಪರಿಸ್ಥಿತಿಯಲ್ಲಿ ರೈತರು ಯಾವುದೇ ಆದಾಯವಿಲ್ಲದೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಪರಿಸ್ಥಿತಿಯಲ್ಲಿಯೂ ಸಹ ಕೆಲ ಬ್ಯಾಂಕ್‍ಗಳು ಮತ್ತು ಸಹಕಾರ ಬ್ಯಾಂಕ್‍ಗಳ ರೈತರ ನೆರವಿಗೆ ಬರುವ ಬದಲಿಗೆ ರೈತರ ಸಾಲ ವಸೂಲಾತಿಗೆ ಒತ್ತಡ ಹೇರುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಮಳೆಯ ಕೊರತೆಯಿಂದ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬಾಗೇಪಲ್ಲಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ ಘೋಷಣೆ ಮಾಡಿ ರೈತರಿಗೆ ಬೆಳೆ ನಷ್ಠ ಪರಿಹಾರ ಮತ್ತು ಕೃಷಿ ಕಾರ್ಮಿಕರಿಗೆ ಬರ ಪರಿಹಾರ ಕಾಮಗಾರಿಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದು, ನರೇಗಾ ಯೋಜನೆಯನ್ನು ಮರುಸ್ಥಾಪಿಸಲು ಕ್ರಮಕೈಗೊಳ್ಳಬೇಕು, ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಸಾಲ ಮನ್ನಾ ಮಾಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಿಪಿಐ (ಎಂ) ತಾಲೂಕು ಕಾರ್ಯದರ್ಶಿ ರಘುರಾಮರೆಡ್ಡಿ, ಜಿ.ಕೃಷ್ಣಪ್ಪ, ರಾಮಾಂಜಿ, ವಾಲ್ಮೀಕಿ ಅಶ್ವಥಪ್ಪ ಸೇರಿದಂತೆ ಕೆಪಿಆರ್‌ಎಸ್ ಕಾರ್ಯಕರ್ತರು ಇದ್ದರು.

14ಬಿಜಿಪಿ-2: ಬಾಗೇಪಲ್ಲಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಾದ ಜಿ. ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೌಧದಲ್ಲಿ ಕಾಗದ ರಹಿತ ಆಡಳಿತ ಜಾರಿಗೆ ಕ್ರಮ: ಜಿ.ಎಸ್‌.ಪಾಟೀಲ್‌
ಚಕ್ಕೆರೆ ಕೆಪಿಎಸ್‌ನಲ್ಲಿ ವಿದ್ಯಾರ್ಥಿಗಳಿಂದ ಅಣಬೆ ಬೇಸಾಯ