ಕನ್ನಡಪ್ರಭ ವಾರ್ತೆ ರಾಮನಗರಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಬುಧವಾರ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಗರದ ಬೆಸ್ಕಾಂ ಕಚೇರಿ ಮುಂಭಾಗ ಜಮಾಯಿಸಿದ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಮಾಡುತ್ತಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಕೂಡಲೇ ಇದನ್ನು ನಿಲ್ಲಿಸುವಂತೆ ಆಗ್ರಹಿಸಿದರು.
ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಎ.ಎಲ್. ಬೈರೇಗೌಡ ಮಾತನಾಡಿ, ಈಗಾಗಲೇ ಸರ್ಕಾರ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಮಾಡಲು ನಿರ್ಧರಿಸಿದೆ. ಇದರಿಂದ ರೈತರ ಸಹಜ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ನಷ್ಟವಾಗುವ ಸಾಧ್ಯತೆಗಳಿವೆ. ಹಾಗಾಗಿ ಸರಕಾರ ಈ ಕೂಡಲೇ ರೈತರ ವಿರೋಧಿ ನಿರ್ಧಾರವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.ರೈತರ ಕಷ್ಟಕ್ಕೆ ಯಾವುದೇ ಪಕ್ಷ ಬಂದಿಲ್ಲ. ಎಲ್ಲಾ ಪಕ್ಷದ ವಿಚಾರಗಳು ಕಾರ್ಪೋರೇಟ್ ಕಂಪನಿಗಳ ಪರವಾಗಿದೆ. ವ್ಯವಸಾಯ ಮಾಡುವವರಿಗೆ ಯಾವುದೇ ಲಾಭವಾಗದಂತೆ ಸರ್ಕಾರಗಳು ಎಚ್ಚರವಹಿಸಿದೆ. ಡಾ. ಸ್ವಾಮಿನಾಥನ್ ವರದಿಯಂತೆ ಸಿ2+50 ಆಧಾರದಲ್ಲಿ ರೈತರಿಗೆ ಕನಿಷ್ಟ ಬೆಲೆ ನಿಗಧಿ ಮಾಡಿ ಎಂದು ಭಾರತ ಸರಕಾರಕ್ಕೆ ವರದಿ ನೀಡಿ 23 ವರ್ಷ ಕಳೆಯುತ್ತಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.2000 ಇಸವಿಯಲ್ಲಿ ಎಸ್.ಎಂ. ಕೃಷ್ಣ ಸರಕಾರ ಕೆಇಬಿಯನ್ನು ಖಾಸಗೀಕರಣ ಮಾಡಿತ್ತು. ಆಗ ರಾಜ್ಯ ವ್ಯಾಪ್ತಿ ರೈತ ಚಳುವಳಿ ನಡೆದಿತ್ತು. ಪರಿಣಾವಾಗಿ ಖಾಸಗಿ ವ್ಯಕ್ತಿಗಳ ಕೈಗೆ ಹೋಗಿದ್ದ ವಿದ್ಯುತ್ ಇಲಾಖೆ 5 ಭಾಗವಾಗಿ ಸರ್ಕಾರದಲ್ಲೇ ಉಳಿದಿತ್ತು . ಈ ಐದು ವಿಭಾಗಗಳನ್ನು ಖಾಸಗಿ ಕಂಪನಿಗಳಿಗೆ ವರ್ಗಾವಣೆ ಮಾಡಲು ಮೀಟರ್ ಗೆ ಆಧಾರ್ ಲಿಂಕ್ ಮಾಡಿ ಆನ್ ಲೈನ್ ಮೂಲಕ ಖಾಸಗಿ ವ್ಯವಹಾರ ನಡೆಸುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಕೃಷಿಪಂಪ್ ಸೆಟ್ ಗೆ ಕೂಡಲೇ ಆಧಾರ್ ಲಿಂಕ್ ಮಾಡುವುದನ್ನು ನಿಲ್ಲಿಸಬೇಕು. ನಗರ ಮತ್ತು ಹಳ್ಳಿ ತಾರತಮ್ಯ ಡದೆ ಸಮಾನ ವಿದ್ಯುತ್ ಸರಬರಾಜು ಮಾಡಬೇಕು. ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು. ಫಸಲು ನಷ್ಟ ಆಧರಿಸಿ ಸರಕಾರ ನಷ್ಟ ಬರಿಸಬೇಕು ಎಂದು ಹೇಳಿದರು.ರಾಮನಗರ ಜಿಲ್ಲೆಯಲ್ಲಿ ಟಿಸಿ ಹಣ ಪಡೆದ ರೈತರಿಗೆ ಕೂಡಲೆ ಟಿಸಿ ಅಳವಡಿಸಬೇಕು. ರೈತರ ಕೃಷಿ ಪಂಪ್ ಸೆಟ್ ಗೆ ವಿದ್ಯುತ್ ಸಂಪರ್ಕ ನೀಡಲು ಪಡೆಯುತ್ತಿರುವ ದುಬಾರಿ ಹಣವನ್ನು ಕೈ ಬಿಟ್ಟು ರಿಯಾಯಿತಿ ದರದಲ್ಲಿ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಬೈರೇಗೌಡ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಡಿ.ಎಂ.ಮಾದೇಗೌಡ, ಉಮೇಶ್, ಅಯಾಸ್ ಪಾಷ, ಮಂಗಳಮ್ಮ, ಗೋವಿಂದರಾಜು, ರವಿಕುಮಾರ್, ರಾಮಲಿಂಗಣ್ಣ, ನಾಗರಾಜು ಮತ್ತಿತರರು ಭಾಗವಹಿಸಿದ್ದರು.