ಬಂಡೀಪುರ ರಕ್ಷಿತಾರಣ್ಯದಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ವಿರೋಧ

KannadaprabhaNewsNetwork |  
Published : Feb 01, 2026, 02:15 AM IST
Palace Ground 5 | Kannada Prabha

ಸಾರಾಂಶ

ಕೇರಳಕ್ಕೆ ಸಂಪರ್ಕ ಕಲ್ಪಿಸುವ ಸಂಬಂಧ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಿರುವುದಕ್ಕೆ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸುರಂಗ ಮಾರ್ಗ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಂಡರೂ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇರಳಕ್ಕೆ ಸಂಪರ್ಕ ಕಲ್ಪಿಸುವ ಸಂಬಂಧ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಿರುವುದಕ್ಕೆ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸುರಂಗ ಮಾರ್ಗ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಂಡರೂ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಿಂದ ಕೇರಳಕ್ಕೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯದೊಳಗೆ ರಾತ್ರಿ ವೇಳೆ ಸಂಚಾರಕ್ಕೆ ಅನುವು ಮಾಡಿಕೊಡಲು ಸುರಂಗ ಮಾರ್ಗ ನಿರ್ಮಿಸಬಹುದೇ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಿದೆ. ಈ ಹಿಂದೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅದಾದ ನಂತರ ಇದೀಗ ಸುರಂಗ ಮಾರ್ಗ ನಿರ್ಮಾಣ ಸಾಧ್ಯವೆ ಎಂಬುದನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗೆ ಪದೇಪದೇ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿನ ಜೀವ ವೈವಿಧ್ಯಕ್ಕೆ ಧಕ್ಕೆ ಬರುವಂತಹ ಯೋಜನೆ ಪ್ರಸ್ತಾವನೆಗೆ ಪರಿಸರವಾದಿಗಳು, ವನ್ಯಜೀವಿ ತಜ್ಞರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಚರ್ಚೆ ಮತ್ತು ಚಿಂತನೆಗಳನ್ನು ಕೂಡಲೇ ನಿಲ್ಲಿಸುವಂತೆಯೂ ಆಗ್ರಹಿಸಿದ್ದಾರೆ.

ಸುಪ್ರೀಂಕೋರ್ಟ್‌ ಆದೇಶಕ್ಕೂ ಇಲ್ಲ ಬೆಲೆ:

ಬಂಡೀಪುರ ಹುಲಿ ಸಂರಕ್ಷಿತಾರಣ್ಯದೊಳಗೆ ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಸರ್ವೋಚ್ಛ ನ್ಯಾಯಾಲಯದ ತಡೆಯಿದೆ. ಜತೆಗೆ ಅದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಚಾಲ್ತಿಯಲ್ಲಿದೆ. ಹೀಗಿರುವಾಗಲೇ ಬಂಡೀಪುರ ಹುಲಿ ಸಂರಕ್ಷಿತಾರಣ್ಯದೊಳಗೆ ವಾಹನಗಳು ರಾತ್ರಿ ವೇಳೆಯಲ್ಲೂ ಸಂಚರಿಸುವುದಕ್ಕೆ ಅನುವು ಮಾಡಿಕೊಡಲು ಮೇಲ್ಸೇತುವೆ, ಸುರಂಗ ಮಾರ್ಗ ನಿರ್ಮಾಣದ ಕುರಿತು ಚರ್ಚೆ ನಡೆಸಲಾಗುತ್ತಿದೆ. ಇದು ಸುಪ್ರೀಂಕೋರ್ಟ್‌ ಆದೇಶದ ವಿರುದ್ಧವಾಗಿದೆ. ಅಲ್ಲದೆ, ಕೇಂದ್ರ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಬಂಡೀಪುರ ಹುಲಿ ಸಂರಕ್ಷಿತಾರಣ್ಯವನ್ನು ಕೇರಳ ಚುನಾವಣೆಗಾಗಿ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತ್ಯೇಕ ರಸ್ತೆಯಿದ್ದರೂ ಬಂಡೀಪುರದ ಮೇಲೆ ಕಣ್ಣು:

ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೂಲಕ ತಮಿಳುನಾಡು ಮತ್ತು ಕೇರಳವನ್ನು ಸಂಪರ್ಕಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ರಾತ್ರಿ ವೇಳೆ ಅರಣ್ಯ ಪ್ರದೇಶದಲ್ಲಿ ವಾಹನಗಳು ಸಂಚರಿಸುವ ಕಾರಣದಿಂದಾಗಿ ಅಪಘಾತ ಹೆಚ್ಚಾಗಿ ಆನೆ, ಚಿರತೆ, ಜಿಂಕೆ, ಹುಲಿ ಸೇರಿದಂತೆ ಮತ್ತಿತರ ವನ್ಯಜೀವಿಗಳು ಸಾವೀಗೀಡಾಗುತ್ತಿದ್ದವು. ಆ ಕಾರಣದಿಂದಾಗಿ 2009ರಿಂದ ರಾತ್ರಿ ವೇಳೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸಂಚರಿಸುವುದಕ್ಕೆ ನಿಷೇಧವಿದೆ. ಅಲ್ಲದೆ, ಕೇರಳಕ್ಕೆ ಸಾಗಲು ರಾಜ್ಯದಿಂದ ಪ್ರತ್ಯೇಕ ರಸ್ತೆಯನ್ನೂ ನಿರ್ಮಿಸಲಾಗಿದೆ. ಆದರೂ, ಕೇರಳ ಪದೇಪದೇ ಬಂಡೀಪುರ ಹುಲಿ ಸಂರಕ್ಷಿತಾರಣ್ಯದೊಳಗೇ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯ ಹೇರುತ್ತಿದೆ.

ಕಾನೂನುಬಾಹಿರ ಕೆಲಸ ಮಾಡುವವರಿಗೆ ಆಸಕ್ತಿ:

ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಪ್ರತಿಕ್ರಿಯಿಸಿ, ಬಂಡೀಪುರ ಹುಲಿ ಸಂರಕ್ಷಿತಾರಣ್ಯದೊಳಗಿನ ಹೆದ್ದಾರಿಯನ್ನು ರಾತ್ರಿ ವಾಹನ ಸಂಚಾರ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೂ ನ್ಯಾಯಾಲಯದ ಹೊರಗೆ ತಗಾದೆ ತೆಗೆಯುತ್ತಿರುವುದು ನ್ಯಾಯಾಲಯಕ್ಕೆ ಮಾಡುತ್ತಿರುವ ಅಗೌರವ. ಅಲ್ಲದೆ, ಕೇರಳ ಸರ್ಕಾರದ ಮನವಿಯಂತೆ ರಾಜ್ಯ ಸರ್ಕಾರವು ₹75 ಕೋಟಿ ವೆಚ್ಚ ಮಾಡಿ ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಿದೆ. ಹೀಗಿದ್ದರೂ ಕೇರಳ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರದ ವಿಚಾರದಲ್ಲಿ ಪದೇಪದೇ ಕ್ಯಾತೆ ತೆಗೆಯುತ್ತಿದೆ. ಈಗಾಗಲೇ ರಾತ್ರಿ ಸಂಚಾರ ನಿಷೇಧಕ್ಕೆ ಎಲ್ಲರೂ ಒಗ್ಗಿಕೊಂಡಿದ್ದಾರೆ. ಕಾನೂನು ಬಾಹಿರ ಕೆಲಸ ಮಾಡುವವರಿಗೆ ಮಾತ್ರ ರಾತ್ರಿ ವೇಳೆ ಸಂಚಾರದ ಬಗ್ಗೆ ಆಸಕ್ತಿ ಇದ್ದ ಹಾಗೆ ಕಾಣುತ್ತದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಣೆ ಹಾಕಬಾರದು ಎಂದು ಆಗ್ರಹಿಸಿದ್ದಾರೆ.

ಪರಿಸರ ವ್ಯವಸ್ಥೆಗೆ ಮಾರಕ:

ಕೇಂದ್ರ ಸರ್ಕಾರದ ಪ್ರಯತ್ನದ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ವನ್ಯಜೀವಿ ತಜ್ಞ ಜೋಸೆಫ್ ಹೂವರ್‌, ಸುಪ್ರೀಂಕೋರ್ಟ್‌ ಆದೇಶದಂತೆಯೇ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಹಾಗಿದ್ದರೂ, ಒಂದೊಮ್ಮೆ ಮೇಲ್ಸೇತುವೆ, ಸುರಂಗ ರಸ್ತೆ ನಿರ್ಮಾಣದ ಚರ್ಚೆ ಮಾಡುತ್ತಿರುವುದು ಸರಿಯಲ್ಲ. ಸುರಂಗ ಮಾರ್ಗ ನಿರ್ಮಿಸಲು ಮುಂದಾದರೂ ಅದರಿಂದ ಭೂಮಿಯೊಳಗಿನ ಜಲಮೂಲಗಳಿಗೆ ಹಾನಿಯಾಗುತ್ತದೆ ಹಾಗೂ ಇಡೀ ಪರಿಸರ ವ್ಯವಸ್ಥೆಯೇ ನಾಶವಾಗುತ್ತದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯದೊಳಗೆ ಸಾಗುವ ರಸ್ತೆಯನ್ನೇ ಸಂಪೂರ್ಣ ಬಂದ್‌ ಮಾಡಬೇಕು. ಒಂದು ವೇಳೆ ಕೇಂದ್ರ ಸರ್ಕಾರ ಸುರಂಗ ಮಾರ್ಗ ನಿರ್ಮಾಣಕ್ಕೆ ಮುಂದಾದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ