ನಲ್ ಜಲ್ ಮಿತ್ರ ತರಬೇತಿಗೆ ಹೆಚ್ಚುವರಿ ಸಂಬಳಕ್ಕೆ ವಿರೋಧ

KannadaprabhaNewsNetwork | Published : Oct 19, 2024 12:27 AM

ಸಾರಾಂಶ

ತಾಲೂಕು ಪಂಚಾಯಿತಿಯಿಂದ ತಾವು ನಲ್ ಜಲ್ ಮಿತ್ರ ತರಬೇತಿಗೆ ಮತ್ತು ಅರಿವು ಕೇಂದ್ರದ ಸಿಬ್ಬಂದಿಗೆ ಹೆಚ್ಚುವರಿ ಸಂಬಳದ ಮೊತ್ತವನ್ನು ತಕ್ಷಣದಲ್ಲಿ ಜಿಲ್ಲಾ ಪಂಚಾಯಿತಿ ಖಾತೆಗೆ ಪಂಚಾಯಿತಿಯ ನಿಧಿ ೨ರ ಖಾತೆಯಿಂದ ವರ್ಗಾಯಿಸುವಂತೆ ಆದೇಶ ಮಾಡಲಾಗಿದೆ.

ಶಿರಸಿ: ನಲ್ ಜಲ್ ಮಿತ್ರ ತರಬೇತಿಗೆ ಮತ್ತು ಅರಿವು ಕೇಂದ್ರದ ಹೆಚ್ಚುವರಿ ಸಂಬಳ ನೀಡಲು ಗ್ರಾಮ ಪಂಚಾಯಿತಿಗಳಿಂದ ಒಪ್ಪಿಗೆ ಇಲ್ಲವೆಂದು ಚುನಾಯಿತ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟದಿಂದ ಶುಕ್ರವಾರ ತಾಲೂಕು ಪಂಚಾಯಿತಿ ಇಒ ಅವರಿಗೆ ಮನವಿ ಸಲ್ಲಿಸಲಾಯಿತು. ನಗರದ ತೋಟಗಾರಿಕಾ ಕಚೇರಿಗೆ ತೆರಳಿ ತೋಟಗಾರಿಕಾ ಹಿರಿಯ ನಿರ್ದೇಶಕರೂ ಆಗಿರುವ, ತಾಪಂ ಇಒ ಸತೀಶ ಹೆಗಡೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ತಾಲೂಕು ಪಂಚಾಯಿತಿಯಿಂದ ತಾವು ನಲ್ ಜಲ್ ಮಿತ್ರ ತರಬೇತಿಗೆ ಮತ್ತು ಅರಿವು ಕೇಂದ್ರದ ಸಿಬ್ಬಂದಿಗೆ ಹೆಚ್ಚುವರಿ ಸಂಬಳದ ಮೊತ್ತವನ್ನು ತಕ್ಷಣದಲ್ಲಿ ಜಿಲ್ಲಾ ಪಂಚಾಯಿತಿ ಖಾತೆಗೆ ಪಂಚಾಯಿತಿಯ ನಿಧಿ ೨ರ ಖಾತೆಯಿಂದ ವರ್ಗಾಯಿಸುವಂತೆ ಆದೇಶ ಮಾಡಲಾಗಿದೆ. ಆದರೆ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಅನುದಾನದ ಕೊರತೆ ಇದ್ದು, ನಮ್ಮ ತಾಲೂಕಿನ ಶೇ. ೯೦ರಷ್ಟು ಪಂಚಾಯಿತಿಯ ನಿಧಿ ೨ರಲ್ಲಿ ಸ್ವಂತ ಸಂಪನ್ಮೂಲದ ಕೊರತೆ ಇದ್ದು, ಪಂಚಾಯಿತಿಯ ನಿತ್ಯದ ವ್ಯವಹಾರಗಳಿಗೆ, ಬರಗಾಲ ಮತ್ತು ಅತಿವೃಷ್ಟಿಯಂತಹ ತುರ್ತು ಪರಿಸ್ಥಿತಿ ಯನ್ನು ನಿಭಾಯಿಸಲು ಮತ್ತು ಪಂಚಾಯಿತಿಯ ಕಾರ್ಯಕ್ರಮಗಳು, ಕಂಪ್ಯೂಟರ್ ಮತ್ತಿತರ ವಸ್ತುಗಳ ನಿರ್ವಹಣೆ ಮುಂತಾದ ಅತಿ ಅವಶ್ಯಕ ಖರ್ಚುಗಳನ್ನು ನಿಭಾಯಿಸಲು ಬೇರೆ ಅನುದಾನ ಇಲ್ಲದೆ ನಿಧಿ- ೨ಅನ್ನೇ ಅವಲಂಬಿಸಿದ್ದು, ಇಂತಹ ಹೆಚ್ಚುವರಿ ಖರ್ಚುಗಳನ್ನು ಹೇರಿದರೆ ಗ್ರಾಮದ ಅಭಿವೃದ್ಧಿಗೆ ಕಷ್ಟವಾಗುತ್ತದೆ. ಬೇರೆ ಮೂಲಗಳಿಂದ ಈ ಖರ್ಚನ್ನು ಭರಿಸಿ ಗ್ರಾಮ ಪಂಚಾಯಿತಿ ಮೇಲೆ ಆಗುತ್ತಿರುವ ಹೊರೆಯನ್ನು ಇಳಿಸಬೇಕೆಂದು ಎಂದು ಆಗ್ರಹಿಸಿದರು.ಈ ವೇಳೆ ಒಕ್ಕೂಟದ ತಾಲೂಕಾಧ್ಯಕ್ಷ ನವೀನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವೀಶ ಹೆಗಡೆ, ರಾಜ್ಯ ಸಮಿತಿ ಸದಸ್ಯ ಸಂದೇಶ ಭಟ್ ಬೆಳಖಂಡ, ಜಿಲ್ಲಾ ಸಮಿತಿಯ ಸದಸ್ಯರಾದ ಪ್ರಕಾಶ ಹೆಗಡೆ, ಪ್ರವೀಣ ಹೆಗಡೆ, ಪ್ರಮುಖರಾದ ಶ್ರೀಕಲಾ ನಾಯ್ಕ, ಮಂಜು ಪೂಜಾರಿ, ಶ್ರೀನಾಥ ಶೆಟ್ಟಿ, ರಾಜು ಮುಕ್ರಿ, ರವಿತೇಜ ರೆಡ್ಡಿ ಮತ್ತಿತರರು ಇದ್ದರು.ಆರೋಗ್ಯ ಇಲಾಖೆ ನೌಕರ ಆತ್ಮಹತ್ಯೆಗೆ ಶರಣು

ಶಿರಸಿ: ಅನಾರೋಗ್ಯದಿಂದ ಬಳಲುತ್ತಿದ್ದ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಜೀವನಗರದಲ್ಲಿ ನಡೆದಿದೆ.ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ದ್ವಿತೀಯ ದರ್ಜೆ ನೌಕರ ಇಲ್ಲಿನ ರಾಜೀವನಗರದ ಅಂತೋನ ಮೊತೇಸ ಫರ್ನಾಂಡೀಸ್(೩೯) ಆತ್ಮಹತ್ಯೆಗೆ ಶರಣಾದವರು. ಕಳೆದ ಐದು ವರ್ಷಗಳಿಂದ ಥೈರಾಯ್ಡ್ ಸಮಸ್ಯೆ ಮತ್ತು ಕಳೆದ ಮೂರು ತಿಂಗಳ ಹಿಂದೆ ಬಲಕೈಗೆ ಪಾರ್ಶ್ವವಾಯು ಪೀಡಿತರಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು.ಈ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಅ. ೧೭ರಂದು ಮನೆಯಲ್ಲಿ ಯಾರೂ ಇಲ್ಲದೇ ಇರುವ ಸಮಯದಲ್ಲಿ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪತ್ನಿ ಮೋನಿಕಾ ಅಂತೋನ ಫರ್ನಾಂಡೀಸ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಎಎಸ್‌ಐ ನಾರಾಯಣ ರಾಠೋಡ ತನಿಖೆ ಕೈಗೊಂಡಿದ್ದಾರೆ.

Share this article