
ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಗರದಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಯಿತು.ಸರ್ಕಾರವು ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಗಾಗಿ ಸಾವಿರಾರು ಕೋಟಿ ರು.ಗಳ ವೆಚ್ಚ ನಿಗದಿಪಡಿಸಿದ್ದು, ಯೋಜನೆಯಡಿ ನೀರನ್ನು ರಾಮನಗರ ಸೇರಿದಂತೆ ಇತರೆ ಪ್ರದೇಶಗಳಿಗೆ ವರ್ಗಾಯಿಸುವ ಉದ್ದೇಶ ಹೊಂದಿದೆ. ತುಮಕೂರು ಜಿಲ್ಲೆ ಈಗಾಗಲೇ ನಿರಂತರ ಬರಗಾಲ, ಅಂತರ್ಜಲ ಕುಸಿತ ಹಾಗೂ ನೀರಾವರಿ ಕೊರತೆಯಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜಿಲ್ಲೆಯ ರೈತರಿಗೆ ಸಿಗಬೇಕಾದ ನೀರಿನ ಮೇಲೆಯೇ ಕಣ್ಣಿಟ್ಟಿರುವುದು ಅತ್ಯಂತ ಖಂಡನೀಯ ಎಂದರು.
ಈ ಹಿಂದೆ ಭಾರತೀಯ ಜನತಾ ಪಕ್ಷದ ಸರ್ಕಾರದ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತುಮಕೂರು ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಹಾಗೂ ಜಿಲ್ಲೆಯ ಭವಿಷ್ಯದ ನೀರಿನ ಅಗತ್ಯವನ್ನು ಮನಗಂಡು ಹೇಮಾವತಿ ಕೆನಾಲ್ ಅಭಿವೃದ್ಧಿಗೆ ರು. 500 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಅದರ ಪರಿಣಾಮವಾಗಿ ಕಾಮಗಾರಿಯು ಶೇಕಡ 80ರಷ್ಟು ಪೂರ್ಣಗೊಂಡಿತ್ತು. ಆದರೆ ಪ್ರಸ್ತುತ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯಡಿ ಬೃಹತ್ ಗಾತ್ರದ ಪೈಪ್‌ಲೈನ್ ಮೂಲಕ ನೀರನ್ನು ಬೇರೆಡೆಗೆ ಕೊಂಡೊಯ್ಯಲು ಮುಂದಾಗಿರುವುದು ಜಿಲ್ಲೆಯ ಹಿತಾಸಕ್ತಿಗೆ ಗಂಭೀರ ಧಕ್ಕೆಯಾಗಿದೆ. ಇದರಿಂದ ಜಿಲ್ಲೆಯ ಕೃಷಿಗೆ ಮಾತ್ರವಲ್ಲದೆ, ಭವಿಷ್ಯದಲ್ಲಿ ಕುಡಿಯುವ ನೀರಿಗೂ ತೀವ್ರ ಸಂಕಷ್ಟ ಎದುರಾಗಲಿದ್ದು, ಈ ಯೋಜನೆಯು ಅಕ್ಷರಶಃ ತುಮಕೂರು ಜಿಲ್ಲೆಯ ಪಾಲಿಗೆ ಮರಣಶಾಸನವಾಗಲಿದೆ ಎಂದರು.ಈ ಅವೈಜ್ಞಾನಿಕ ಯೋಜನೆಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷವು ಜಿಲ್ಲೆಯ ರೈತರೊಂದಿಗೆ ಕೈಜೋಡಿಸಿ ಈಗಾಗಲೇ ಹಲವಾರು ಬಾರಿ ಬೃಹತ್ ಪ್ರತಿಭಟನೆಗಳು, ಪಾದಯಾತ್ರೆಗಳು ಹಾಗೂ ವಿವಿಧ ಹೋರಾಟಗಳನ್ನು ಸಂಘಟಿಸಿ, ಕಾಮಗಾರಿಯನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದೆ. ಮುಂದೆಯೂ ಸಹ ತುಮಕೂರು ಜಿಲ್ಲೆಯ ರೈತರ ಹಾಗೂ ಜಿಲ್ಲೆಯ ನೀರಿನ ಹಕ್ಕಿನ ರಕ್ಷಣೆಗೆ ಭಾರತೀಯ ಜನತಾ ಪಕ್ಷವು ಸಂಪೂರ್ಣ ಬದ್ಧವಾಗಿದ್ದು, ಅಗತ್ಯವಿದ್ದಲ್ಲಿ ಜಿಲ್ಲೆಯ ರೈತರೊಂದಿಗೆ ಸೇರಿ ನಿರಂತರ ಹಾಗೂ ತೀವ್ರ ಹೋರಾಟವನ್ನು ಸಂಘಟಿಸಲಿದೆ ಎಂದರು.