ಕುರುಬ ಸಮಾಜ ಎಸ್ಟಿಗೆ ಸೇರ್ಪಡೆ ವಿರೋಧ

KannadaprabhaNewsNetwork |  
Published : Sep 25, 2025, 01:01 AM IST
ಹೂವಿನಹಡಗಲಿಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾದಿಂದ ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರ್ಪಡೆ ವಿರೋಧಿಸಿ ಪ್ರತಿಭಟನೆ ಮಾಡಿ ತಹಸೀಲ್ದಾರ್‌ ಜಿ.ಸಂತೋಷಕುಮಾರ ಇವರಿಗೆ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಗೆ ಸದೃಢವಾಗಿ ಮುಂದುವರೆದಿರುವ ಕುರುಬ ಸಮಾಜವನ್ನು ಸೇರ್ಪಡೆ ಮಾಡಲು ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯಬೇಕು.

ಹೂವಿನಹಡಗಲಿ: ರಾಜ್ಯದ ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರ್ಪಡೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧವಾಗಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾ ಪ್ರತಿಭಟನೆ ಮಾಡಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ವಾಲ್ಮೀಕಿ ಸಮಾಜದ ತಾಲೂಕ ಗೌರವಾಧ್ಯಕ್ಷ ಊಳಿಗದ ಹನುಮಂತಪ್ಪ, ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಗೆ ಸದೃಢವಾಗಿ ಮುಂದುವರೆದಿರುವ ಕುರುಬ ಸಮಾಜವನ್ನು ಸೇರ್ಪಡೆ ಮಾಡಲು ಸರ್ಕಾರ ಕೈಗೆತ್ತಿಕೊಳ್ಳುತ್ತಿರುವ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಸಂವಿಧಾನದ ಆಶಯದಂತೆ ಹಾಲಿ ಇರುವ ಪರಿಶಿಷ್ಟ ಪಂಗಡ ಪಟ್ಟಿರುವ ಜಾತಿಯ ಸಮಾಜದವರಿಗೆ ವಿವಿಧ ರೀತಿಯ ಸೌಲಭ್ಯಗಳು ಸಿಗುವಲ್ಲಿ ತುಂಬಲಾರದಷ್ಟು ಘೋರ ಅನ್ಯಾಯವಾಗುತ್ತಿದೆ. ಸಂವಿಧಾನದ ಹಿತವನ್ನು ಕಾಪಾಡುವ ಪ್ರಭುದ್ಧತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಗಾರವ ಪೂರ್ವಕವಾಗಿ ಈ ನಿರ್ಧಾರವನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.

ವಾಲ್ಮೀಕಿ ಮುಖಂಡ ಗೋಣೆಪ್ಪ ಕಂದಗಲ್ಲು ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅಹಿಂದ ನಾಯಕನೆಂದು ಬಿಂಬಿಸಿಕೊಂಡು, ಕಾಂಗ್ರೆಸ್‌ನಲ್ಲಿರುವ ವಾಲ್ಮೀಕಿ ಸಮಾಜದ ನಾಯಕರನ್ನು, ತುಳಿಯುವ ಕೆಲಸ ಮಾಡುತ್ತಿದ್ದಾರೆ, ಅಹಿಂದ ಎಂದು ಹೇಳಿಕೊಳ್ಳುವ ನೈತಿಕತೆ ಇವರಿಗೆ ಇಲ್ಲ. ಕೂಡಲೇ ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರ್ಪಡೆ ಮಾಡುವ ನಿಮ್ಮ ಕ್ರಮ ಸರಿಯಲ್ಲ ಎಂದರು.

ವಾಲ್ಮೀಕಿ ಸಮಾಜದ ಬಳ್ಳಾರಿ ಶಾಸಕ ನಾಗೇಂದ್ರ ಇವರ ವಿರುದ್ಧ ಆರೋಪಗಳನ್ನು ಮಾಡಿ ಸಚಿವ ಸ್ಥಾನದಿಂದ ಕಿತ್ತು ಹಾಕಿದ್ದೀರಿ, ಸಚಿವರಾಗಿದ್ದ ಕೆ.ಎನ್‌.ರಾಜಣ್ಣ ಇವರನ್ನು ಸಚಿವ ಸಂಪುಟದಿಂದ ಹೊರಗೆ ಹಾಕಿದ್ದೀರಿ ಹೀಗೆ ಸಾಲು ಸಾಲು ವಾಲ್ಮೀಕಿ ಸಮಾಜದವರನ್ನು ಹೊರಗೆ ಹಾಕಿ ವಾಲ್ಮೀಕಿ ಸಮಾಜವನ್ನು ತುಳಿಯುವ ಕೆಲಸ ಮಾಡುತ್ತಿದ್ದೀರಿ ಎಂದು ದೂರಿದರು.

ವಾಲ್ಮೀಕಿ ಸಮಾಜದ ಮುಖಂಡ ಪರಸಪ್ಪ ಮಾತನಾಡಿ, ರಾಜ್ಯದಲ್ಲಿ ಎಸ್ಟಿ ಸಮಾಜಕ್ಕೆ ಸೇರದೇ ಇರುವ ಜಾತಿಯವರಿಗೆ, ನಕಲಿ ಎಸ್ಟಿ ಜಾತಿ ಪ್ರಮಾಣ ಪತ್ರವನ್ನು ಪಡೆಯುತ್ತಿರುವ ಹಾಗೂ, ಎಸ್ಟಿ ಪ್ರಮಾಣ ಪತ್ರವನ್ನು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲೂಕ ಅಧ್ಯಕ್ಷ ಎಲ್‌.ಜಿ.ಹೊನ್ನಪ್ಪನವರ್‌, ಹಂಪಸಾಗರ ಎನ್‌.ಕೋಟೆಪ್ಪ, ಬಂಗಾರಿ ಶಿವಾನಂದಪ್ಪ, ಬಸವರಾಜ ಸಂಶಿ ಸೇರಿದಂತೆ ನೂರಾರು ವಾಲ್ಮೀಕಿ ಸಮಾಜ ಭಾಂದವರು ಪ್ರತಿಭಟನೆಯಲ್ಲಿ ತಹಸೀಲ್ದಾರ್‌ ಜಿ.ಸಂತೋಷಕುಮಾರ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಪಟ್ಟಣದ ತೇರು ಹನುಮಪ್ಪ ದೇವಸ್ಥಾನದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ