ಕನ್ನಡಪ್ರಭ ವಾರ್ತೆ ತುಮಕೂರು
ಕರ್ನಾಟಕ ಪ್ರಾಂತ ರೈತ ಸಂಘ,ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್), ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು, ಗ್ರಾಮಸ್ಥರು, ಮಾಚೇನಹಳ್ಳಿ ಗ್ರಾಮದ ತಿರುಮಲ ರಂಗನಾಥಸ್ವಾಮೀ ದೇವಾಲಯದ ಬಳಿಯಿಂದ ಟೂಡಾ ನಿವೇಶನಕ್ಕೆ ಶಂಕು ಸ್ಥಾಪನೆ ನೆರವೇರಿದ ಜಾಗದವರೆಗೂ ಮೆರವಣಿಗೆ ನಡೆಸಿ, ತದನಂತರ ಜಿಲ್ಲಾಡಳಿತ ಮತ್ತು ಟೂಡಾದ ನಡೆ ಖಂಡಿಸಿ ಸಮಾವೇಶ ನಡೆಸಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಐಕೆಎಸ್‌ನ ಕೆಂಬೇಗೌಡ,ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಮಾಚೇನಹಳ್ಳಿ, ಸಿಂಗನಹಳ್ಳಿ ಮತ್ತು ಬೊಮ್ಮೇನಹಳ್ಳಿ ಗ್ರಾಮಗಳಲ್ಲಿ 70 ಎಕರೆ ಸರಕಾರಿ ಭೂಮಿಯೂ ಸೇರಿದಂತೆ,ಸುಮಾರು 200 ಎಕರೆಗೂ ಹೆಚ್ಚು ಭೂಮಿಯನ್ನು ವಶಪಡಿಸಿಕೊಂಡು ನಿವೇಶನಗಳಾಗಿ ಅಭಿವೃದ್ದಿ ಪಡಿಸಿ, 50:50ರ ಅನುಪಾತದಲ್ಲಿ ಹಂಚಿಕೆ ಮಾಡಲು ಯೋಜನೆ ರೂಪಿಸಿದೆ. ಆದರೆ ಇದಕ್ಕೆ ರೈತರ ಒಪ್ಪಿಗೆ ಪಡೆದಿಲ್ಲ. ಅಲ್ಲದೆ ಸರಕಾರಿ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರನ್ನು ಸಹ ಪರಿಗಣಿಸಿಲ್ಲ. ಹಾಗಾಗಿ ಮೂರು ಗ್ರಾಮಗಳ ರೈತರು ಒಗ್ಗೂಡಿ, ಹೋರಾಟ ರೂಪಿಸಿದರೆ, ಈ ಯೋಜನೆಗೆ ರೈತರು ತಮ್ಮ ಫಲವತ್ತಾದ ಭೂಮಿ ಕಳೆದುಕೊಳ್ಳುವುದು ತಪ್ಪುತ್ತದೆ. ಹಾಗಾಗಿ ಹೋರಾಟಗಾರರು ತಮ್ಮಲ್ಲಿ ಒಡಕು ಉಂಟು ಮಾಡುವ ಶಕ್ತಿಗಳಿಂದ ದೂರವಿದ್ದು, ಇಂದೇ ಜಿಲ್ಲಾಡಳಿತ ಮತ್ತು ಟೂಡಾಗೆ ನಿಮ್ಮ ಯೋಜನೆಗೆ ನಮ್ಮ ಭೂಮಿ ನೀಡುವುದಿಲ್ಲ ಎಂದು ದೂರು ಸಲ್ಲಿಸುವಂತೆ ಸಲಹೆ ನೀಡಿದರು.ಜಿಲ್ಲಾ ಸಂಚಾಲಕ ಸಿ.ಯತಿರಾಜು, ಐದು, ಹತ್ತು ಗುಂಟೆ, ಅರ್ಧ ಎಕರೆ,ಒಂದು ಎಕರೆ ಭೂ ಹಿಡುವಳಿ ಹೊಂದಿರುವವರ ಸಂಖ್ಯೆಯೇ ಹೆಚ್ಚು.ಇರುವ ಜಮೀನಿನನ್ನು ಕಿತ್ತುಕೊಂಡು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಪರಿಹಾರ ನೀಡುವುದರಿಂದ ರೈತರು ತಮ್ಮ ಫಲವತ್ತಾದ ಭೂಮಿ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ.ಹಾಗಾಗಿ ಎಲ್ಲರೂ ಧೀರ್ಘ ಕಾಲದ ಹೋರಾಟಕ್ಕೆ ಸಜ್ಜಾಗುವಂತೆ ಕರೆ ನೀಡಿದರು.
-----------------------
-ರೈತರ ಒಪ್ಪಿಗೆ ಇಲ್ಲದೆ ಹಾಕಿರುವ ಅಡಿಗಲ್ಲನ್ನು ಹಿಂಪಡೆಯಬೇಕು
- ಖಾಸಗಿ ಲೇಔಟ್‌ಗಳಲ್ಲಿ ಖಾಲಿ ಇರುವ ನಿವೇಶನಗಳನ್ನು ವಶಪಡಿಸಿಕೊಂಡು ನಿವೇಶನ ಅಗತ್ಯ ಇರುವವರಿಗೆ ಹಂಚಿಕೆ ಮಾಡಬೇಕು.
ಸರ್ಕಾರಿ ಭೂಮಿಯನ್ನು ಸರ್ಕಾರದ ಯೋಜನೆಗಳಾದ ಆಸ್ಪತ್ರೆ, ಶಾಲೆ,ಕಾಲೇಜು ನಿರ್ಮಾಣಕ್ಕೆ ಮೀಸಲಿಡಬೇಕು.