ಕಂಪ್ಲಿ: ಪಟ್ಟಣದ ಸಕ್ಕರೆ ಕಾರ್ಖಾನೆ ಪ್ರದೇಶದ ಸಹಿಪ್ರಾ ಶಾಲಾವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೌಲಾನಾ ಆಜಾದ್ ಮಾದರಿ ಶಾಲೆ ಕಟ್ಟಡಕ್ಕೆ ಸಂಬಂಧಿಸಿದಂತೆ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಮಾತನಾಡಿ, ಶಾಸಕರ ನಿರ್ದೇಶನದಂತೆ ಪ್ರಸ್ತಾವಿತ ಸ್ಥಳವನ್ನು ವೀಕ್ಷಿಸಲು ಬಂದಿದ್ದೇವೆ. ಸ್ಥಳೀಯ ನಿವಾಸಿಗಳು, ಪಾಲಕ-ಪೋಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ ಬಳಿಕ ಶಾಲೆ ಕಟ್ಟಡ ನಿರ್ಮಾಣ ಕುರಿತು ಅಂತಿಮ ತೀರ್ಮಾನವನ್ನು ಶಾಸಕರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ಸಿ.ಆರ್. ಹನುಮಂತ ಮಾತನಾಡಿ, ಮೌಲಾನಾ ಆಜಾದ್ ಶಾಲೆ ಕಟ್ಟಡ ನಿರ್ಮಾಣ ವಿಷಯದಲ್ಲಿ ಕೆಲವರು ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ. ವಿಜಯ ಪ್ರೌಢಶಾಲೆಯ ಆಡಳಿತ ಮಂಡಳಿಯವರು ಜನರಲ್ಲಿ ಭೀತಿ ಮೂಡಿಸಿ ಮನೆಗಳನ್ನು ತೆರವುಗೊಳಿಸಲಾಗುತ್ತದೆ ಎಂಬ ಭಾವನೆ ಮೂಡಿಸುತ್ತಿದ್ದಾರೆ. ಆದರೆ, ನಮ್ಮ ಉದ್ದೇಶ ಅದು ಅಲ್ಲ. ಈ ಶಾಲೆಯು ಹರಪನಹಳ್ಳಿಯ ಶರಣಬಸವ ಬುದ್ಧ ಭೀಮಾಜಿ ವಿದ್ಯಾಸಂಸ್ಥೆಗೆ ಸೇರಿದದ್ದು, ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್ ಮಾತನಾಡಿ, ಮೌಲಾನಾ ಆಜಾದ್ ಶಾಲೆ ಆಂಗ್ಲ ಮಾಧ್ಯಮದ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿದೆ. ಆರ್ಥಿಕವಾಗಿ ಹಿಂದುಳಿದ ಶೇ.75ರಷ್ಟು ಅಲ್ಪಸಂಖ್ಯಾತರ ಮಕ್ಕಳಿಗೆ ಹಾಗೂ ಶೇ.25ರಷ್ಟು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರೆ ವರ್ಗದ ಮಕ್ಕಳಿಗೆ ಇದು ದೊಡ್ಡ ಅವಕಾಶವಾಗಿದೆ. ಜಾತಿ-ಧರ್ಮದ ಹೆಸರಿನಲ್ಲಿ ಯೋಜನೆಗೆ ಅಡ್ಡಿ ಪಡಿಸುವುದು ಸರಿಯಲ್ಲ. ಶಿಕ್ಷಣದ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.
ಸ್ಥಳ ವೀಕ್ಷಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ. ಸಿದ್ದಪ್ಪ, ಕೆ. ಮಸ್ತಾನ್‌ಸಾಬ್, ಎಂ. ಉಸ್ಮಾನ್, ಲಡ್ಡು ಹೊನ್ನೂರವಲಿ, ಆರ್.ಪಿ. ಶಶಿಕುಮಾರ್, ಕೆ. ಕೃಷ್ಣ, ಎಚ್. ನಾಗರಾಜ, ಐ. ಹೊನ್ನೂರಸಾಬ್ ಹಾಗೂ ಎಂ. ರಾಜಭಕ್ಷಿ ಸೇರಿದಂತೆ ಹಲವರು ಭಾಗವಹಿಸಿದ್ದರು.