ಶಿರಹಟ್ಟಿ: ಆನ್‌ಲೈನ್ ಮೂಲಕ ಔಷಧ ವ್ಯಾಪಾರಕ್ಕೆ ಸರ್ಕಾರ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು. ಕಾರ್ಪೋರೇಟ್ ವಲಯದ ಔಷಧ ಮಳಿಗೆಗಳು ಡಿಸ್ಕೌಂಟ್ ವ್ಯಾಪಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ಬುಧವಾರ ಔಷಧ ವ್ಯಾಪಾರಸ್ಥರು ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಡಾ. ಸುನೀಲ ಬುರಬುರೆ ಮಾತನಾಡಿ, ಸರ್ಕಾರ ಆರೋಗ್ಯಕರ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಆನ್‌ಲೈನ್ ಔಷಧ ವ್ಯಾಪಾರಕ್ಕೆ ನೀಡಿರುವ ಆದೇಶ ಜಿಎಸ್‌ಆರ್ ೮೧೭ ವಾಪಸ್ ಪಡೆಯಬೇಕು. ನಕಲಿ ಮತ್ತು ಆರೋಗ್ಯಕ್ಕೆ ಹಾನಿ ಮಾಡುವ ಔಷಧಗಳ ಮಾರಾಟ ನಿಲ್ಲಿಸಿ ಸರಳ ಕಾನೂನುಗಳೊಡನೆ, ನಮ್ಮೊಂದಿಗೆ ಸಹಕರಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.ವಿವಿಧ ಆ್ಯಪ್‌ಗಳಿಂದ ಔಷಧಿಗಳ ಮಾರಾಟ ಆಗುತ್ತಿದೆ. ಇದು ನೋಂದಣಿ ಪಡೆದ ಮೆಡಿಕಲ್ ಮಾಲೀಕರಿಗೆ ಹೊಡೆತ ಬೀಳುತ್ತಿದೆ. ಔಷಧಿ ಮಾರಾಟಕ್ಕೆ ಇವರಿಗೆ ಯವುದೇ ನಿರ್ಬಂದ ಕೂಡ ಇರುವುದಿಲ್ಲ. ಮೆಡಿಕಲ್ ಶಾಪ್ ಮಾಲೀಕರು ಎಲ್ಲ ಷರತ್ತುಗಳಿಗೆ ಹೊಂದಿಕೊಂಡು ಇಂತದ್ದೇ ಔಷಧಿ ಮಾರಾಟ ಮಾಡಬೇಕು ಎನ್ನುವ ನಿರ್ಬಂಧಕ್ಕೆ ಒಳಗಾಗಿದ್ದು, ಕೇಂದ್ರ ಸರ್ಕಾರ ಕೋವಿಡ್ ಸಮಯದಲ್ಲಿ ಆನ್‌ಲೈನ್ ಔಷಧಿ ಮಾರಾಟಕ್ಕೆ ನೀಡಿದ ಅನುಮತಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಪವನ ನರಗುಂದೆ ಮತನಾಡಿ, ನಿಯಂತ್ರಣವಿಲ್ಲದ ಆನ್‌ಲೈನ್ ಮಾರಾಟದಿಂದ ಸ್ಥಳೀಯ ಔಷಧ ಅಂಗಡಿಗಳಿಗೆ ನಷ್ಟವಾಗುತ್ತಿದೆ ಹಾಗೂ ನಕಲಿ ಅಥವಾ ವೈದ್ಯರ ಪರಿಚಯ ಇಲ್ಲದೆ ಔಷಧ ವಿತರಣೆ ನಡೆಯುವ ಆತಂಕ ಇದೆ. ಮೆಡಿಕಲ್ ಶಾಪ್ ಮಾಲೀಕರ ಸಂಘದ ಪ್ರತಿನಿಧಿಗಳು ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಆನ್‌ಲೈನ್ ಔಷಧ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಜತೆಗೆ, ರೋಗಿಗಳ ಸುರಕ್ಷತೆ ಹಾಗೂ ಕಾನೂನುಬದ್ಧ ಔಷಧ ವಿತರಣೆ ವ್ಯವಸ್ಥೆಯನ್ನು ಕಾಪಾಡಲು ಮೆಡಿಕಲ್ ಅಂಗಡಿಗಳ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದರು.ಗ್ರೇಡ್-೨ ತಹಸೀಲ್ದಾರ ವಿ.ಎ. ಮುಳಗುಂದಮಠ ಮನವಿ ಸ್ವೀಕರಿಸಿದರು. ಮೆಡಿಕಲ್ ಶಾಪ್ ಮಾಲೀಕರಾದ ಶ್ರೀಕಾಂತ ಕೊಪ್ಪದ, ಜೀನದತ್ತ ಹಿರೇಗೌಡರ, ಸಾಗರಕುಮಾರ ಮಹೇಂದ್ರಕರ, ಈಶ್ವರಪ್ಪ ಗೌಳಿ, ಪಿ. ನಾಗರತ್ನ ಅಣ್ಣಿಗೇರಿ, ಭೊಪಾಲ ಆಲೂರ, ಡಾಲಾಯತ, ಬಸವರಾಜ ಗೋನಾಳ, ಸಿ.ಎಸ್. ಕಲ್ಯಾಣಮಠ, ಪವನಕುಮಾರ ಮಹೇಂದ್ರಕರ, ಅರುಣ ಮುಳ್ಳೂರ, ದತ್ತಾತ್ರೆಯ ವಿಜಾಪೂರ, ಸಿದ್ಧಲಿಂಗೇಶ ಕುಬುಸದ, ಫಕ್ಕೀರಡ್ಡಿ ಮರಡ್ಡಿ, ಶಂಭುಲಿಂಗನಗೌಡ ಪಾಟೀಲ, ಸುಮಿತ್ರಾ ಸಜ್ಜನರ, ರಾಘವೇಂದ್ರ ಯರಕದ, ರಮೇಶ ಗೋವಣ್ಣವರ, ಸಾಗರ ಹಿರೇಗೌಡ್ರ, ಪ್ರಕಾಶ ಸಂಶಿ ಇದ್ದರು.