ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಇದು ನಮ್ಮ ವಕೀಲರ ಹೋರಾಟವಲ್ಲ. ಉತ್ತರ ಕರ್ನಾಟಕದ ಭಾಗವಾದ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠಕ್ಕೆ ಸೇರಿಸಿದರೆ ಅದಕ್ಕೆ ವಿರೋಧವಿದೆ.
ಶಿರಸಿ: ಉತ್ತರ ಕನ್ನಡ ಜಿಲ್ಲೆಯನ್ನು ಧಾರವಾಡ ಹೈಕೋರ್ಟ್ ವ್ಯಾಪ್ತಿಯನ್ನು ಕಡಿತಗೊಳಿಸಿ ಮಂಗಳೂರಿನಲ್ಲಿ ಪ್ರಸ್ತಾಪಿತ ಹೈಕೋರ್ಟ್ ಪೀಠದಲ್ಲಿ ಜೋಡಿಸುವ ಪ್ರಕ್ರಿಯೆಗೆ ವಿರೋಧವಿದೆ ಎಂದು ಧಾರವಾಡ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ತಿಳಿಸಿದರು.
ಶುಕ್ರವಾರ ನಗರದ ಡಾ. ಅಂಬೇಡ್ಕರ್ ಸಭಾಭವನದಲ್ಲಿ ವಕೀಲರ ಸಂಘ ಹಾಗೂ ಉತ್ತರ ಕನ್ನಡ ಜಿಲ್ಲಾ ವಕೀಲರ ಸಂಘ ಮತ್ತು ಶಿರಸಿ ತಾಲೂಕು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲಾ ಕಕ್ಷಿದಾರರ ಪ್ರಕರಣಗಳ ಉಚ್ಚ ನ್ಯಾಯಾಲಯ ವಿಚಾರಣಾ ನ್ಯಾಯ ವ್ಯಾಪ್ತಿಯನ್ನು ಧಾರವಾಡ ಹೈಕೋರ್ಟ್‌ನಿಂದ ಪ್ರಸ್ತಾಪಿತ ಮಂಗಳೂರು ಉಚ್ಚ ನ್ಯಾಯಾಲಯಪೀಠದ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆ ವಿರೋಧಿಸಿ ಸತ್ಯಾಪನಾ ಸತ್ಯಾಗ್ರಹ ಬೃಹತ್ ಚಳವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ನಮ್ಮ ವಿರೋಧವಿಲ್ಲ. ಇದು ನಮ್ಮ ವಕೀಲರ ಹೋರಾಟವಲ್ಲ. ಉತ್ತರ ಕರ್ನಾಟಕದ ಭಾಗವಾದ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠಕ್ಕೆ ಸೇರಿಸಿದರೆ ಅದಕ್ಕೆ ವಿರೋಧವಿದೆ ಎಂದು ಆಕ್ಷೇಪಿಸಿದರು.ಪೀಠ ಸ್ಥಾಪನೆಗೆ ಯಶವಂತ್ ಸಿಂಗ್ ಆಯೋಗದಲ್ಲಿ ತಿಳಿಸಿದಂತೆ 1/3 ಅಂಶ ಸಂಖ್ಯೆಯ ಪ್ರಕರಣಗಳಿರಬೇಕು. 1/4 ಅಂಶ ಭೂಪ್ರದೇಶವನ್ನು ಹೊಂದಿರಬೇಕು. ಇದನ್ನೆಲ್ಲ ಕಡೆಗಣಿಸಿ ಉತ್ತರ ಕನ್ನಡ ಜಿಲ್ಲೆಯನ್ನು ಧಾರವಾಡ ಹೈಕೋರ್ಟ್ ವ್ಯಾಪ್ತಿಯಿಂದ ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸಿದರೆ ಉತ್ತರ ಕರ್ನಾಟಕದಲ್ಲಿ ಕ್ರಾಂತಿಯಾಗುತ್ತದೆ ಎಂದು ಅಕ್ರೋಶ ಹೊರಹಾಕಿದರು.ಕಡಿಮೆ ಖರ್ಚಿನಲ್ಲಿ ಬಡವನ ಮನೆಯ ಬಾಗಿಲಗೆ ನ್ಯಾಯದಾನ ನೀಡಬೇಕೆಂಬ ಕಾರಣದಿಂದ ಉತ್ತರ ಕನ್ನಡ ಜಿಲ್ಲೆಯನ್ನು ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲಿ ಉಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಸ್ಪಷ್ಟಪಡಿಸಿದರು.ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
ಇದಕ್ಕೂ ಮುನ್ನ ನಗರದ ಅಂಚೆ ವೃತ್ತದಲ್ಲಿ ವಕೀಲರು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಕಾನೂನು ವಿದ್ಯಾರ್ಥಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ರಸ್ತೆ ಉದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಈ ವೇಳೆ ಮಾತನಾಡಿದ ಹೈಕೋರ್ಟ್ ನ್ಯಾಯವಾದಿ ಎ.ಪಿ. ಹೆಗಡೆ ಜಾನ್ಮನೆ ಅವರು, ಉತ್ತರ ಕನ್ನಡ ಜಿಲ್ಲೆಗೆ ಹಿಂದಿನಿಂದಲೂ ಅನ್ಯಾಯವಾಗುತ್ತಾ ಬಂದಿದೆ. ಉತ್ತರ ಕನ್ನಡ ಜಿಲ್ಲೆಗೆ ಹಲವಾರು ಯೋಜನೆಗಳು ಬಂದರೂ ಅದನ್ನು ಪ್ರಬಲವಾಗಿ ವಿರೋಧಿಸಲು ಯಾರೂ ಮುಂದೆ ಬರುವುದಿಲ್ಲ. ಆದ್ದರಿಂದ ಜಿಲ್ಲೆಗೆ ಬೇಡವಾದದ್ದೆಲ್ಲ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕಾರವಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಉಪೇಂದ್ರ ಪೈ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡ ಅವರು ಉತ್ತರ ಕನ್ನಡ ಜಿಲ್ಲೆ ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲಿ ಉಳಿಯಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಶಿರಸಿ ವಕೀಲರ ಸಂಘದ ಅಧ್ಯಕ್ಷ ಸಿಎಫ್ ಈರೇಶ್, ಧಾರವಾಡ ಹೈಕೋರ್ಟ್ ವಕೀಲರು, ಮಾಜಿ ನಗರಸಭೆ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಮಾಜಿ ನಗರಸಭೆ ಸದಸ್ಯ ಶ್ರೀಧರ್ ಮುಗೇರ, ದೀಪಕ್ ಹೆಗಡೆ ದೊಡ್ಡೂರು, ಅಶೋಕ್ ಹಾಸ್ಯಗಾರ್ ಸೇರಿದಂತೆ ಅನೇಕರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.