ಗೋಕರ್ಣ: ಧರ್ಮಶಾಸ್ತ್ರದಲ್ಲಿ ನೀರಿನ ಶುದ್ಧತೆಗೆ ವಿಶೇಷ ಒತ್ತನ್ನು ನೀಡಲಾಗಿದ್ದು, ನೀರಿಗೆ ಉಗುಳಬಾರದು ಎಂದು ಶಾಸ್ತ್ರ ಸೂಚಿಸುತ್ತದೆ. ಗಂಗೆಯಲ್ಲಿ ಆಚಮನ ಮಾಡಬಾರದು ಎಂಬ ನಿಯಮವೂ ಇದೆ. ನೀರನ್ನು ಮಲಿನ ಮಾಡುವವರಿಗೆ ನರಕಗಳನ್ನು ಹೇಳಲಾಗಿದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.
ಆಯುರ್ವೇದದಲ್ಲಿ ಚಂದ್ರಕಾಂತ ಮಣಿಯ ನೀರು ಬಳಕೆಗೆ ಒಳ್ಳೆಯದು ಎನ್ನಲಾಗಿದೆ. ಆದರೆ ಇಂದು ಚಂದ್ರಕಾಂತ ಮಣಿಯ ಲಭ್ಯತೆಯೇ ಕಷ್ಟಕರವಾಗಿದೆ. ನಮ್ಮ ಶಾಸ್ತ್ರಗಳಲ್ಲಿ ಸೂಚಿಸಿರುವ ಎಲ್ಲ ಸುವಸ್ತುಗಳು ಇಂದು ಕಣ್ಮರೆಯಾಗುತ್ತಿವೆ. ಸುವಸ್ತುಗಳನ್ನು ನಾವು ಬಳಸದೇ ಇದ್ದರೆ ಅವು ಕಣ್ಮರೆಯಾಗುತ್ತದೆ ಎಂದು ಪರಂಪರೆ ಹೇಳುತ್ತದೆ. ಹಾಗಾಗಿ ನಮ್ಮ ಪಾರಂಪರಿಕ ಗ್ರಂಥಗಳಲ್ಲಿ ಹೆಸರಿಸಿರುವ ಅನೇಕ ಸುವಸ್ತುಗಳು ಇಂದು ನಮಗೆ ಕಾಣಸಿಗುವುದಿಲ್ಲ. ಹಾಗೆಯೆ ಇನ್ನು ಕೆಲವನ್ನು ಅಭಿವೃದ್ಧಿಯ ಹೆಸರಿನಲ್ಲಿ ದುರಾಕ್ರಮಣಗಳ ಮೂಲಕ ಹಾಳು ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಋತುಗಳಿಗೂ ನೀರಿಗೆ ಸಂಬಧವಿದ್ದು, ಹೇಮಂತ ಋತುವಿನ ನೀರು ಬಲವನ್ನು ಕೊಡುತ್ತದೆ. ಆದರೆ ಅದು ಜೀರ್ಣಕ್ಕೆ ಕಷ್ಟ, ಶಿಶಿರ ಕಾಲದ ನೀರು ಜೀರ್ಣಕ್ಕೆ ಸ್ವಲ್ಪ ಲಘು ಮತ್ತು ಕಫ ಹಾಗೂ ವಾತಗಳನ್ನು ಕಡಿಮೆ ಮಾಡುತ್ತದೆ. ವಸಂತ ಋತುವಿನ ನೀರು ಸ್ವಲ್ಪ ಸಿಹಿ ಸ್ವಲ್ಪ ಒಗರು ಹಾಗೂ ಗ್ರೀಷ್ಮ ಕಾಲದ ನೀರು ತುಂಬಾ ಒಳ್ಳೆಯದು ಎಂದು ಆಯುರ್ವೇದ ಸೂಚಿಸಿದೆ ಎಂದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ದಂಪತಿಗಳು, ಉದ್ಯಮಿ ಆನಂದ್, ಹೈದರಾಬಾದಿನ ರಾಘವಲು, ಧಾರವಾಡದ ಸಿದ್ಧ ಸಮಾಧಿ ಯೋಗ ಸಮಾಜದ ಸದಸ್ಯರು ಶ್ರೀಗಳ ಆಶೀರ್ವಾದ ಪಡೆದರು. ಶೇಷಗಿರಿ ಹೆಬ್ಬಾರ್ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ಗುರುಪ್ರಕಾಶ ಹೆಗಡೆ ಕೂಜಳ್ಳಿ ದಂಪತಿಗಳು ಉಪಸ್ಥಿತರಿದ್ದರು.
ಶ್ರೀರಾಮಚಂದ್ರಾಪುರ ಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುವ ಸಿದ್ದಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಸಿದರು. ಪಾದುಕಾ ಪೂಜೆಯನ್ನು ಸ್ವೀಕರಿಸಿ ಮಾತನಾಡಿದ ಶ್ರೀಗಳು, ಸಿದ್ದಿ ಸಮಾಜದ ಜತೆಗೆ ಶ್ರೀಮಠ ಇರಲಿದ್ದು, ಗುರು ಪರಂಪರೆಯ ಅನುಗ್ರಹದಿಂದ ಸಮಾಜದ ಕಷ್ಟಗಳು ಕರಗಲಿ ಎಂದು ಆಶೀರ್ವದಿಸಿದರು. ಶಿವಾನಂದ ಸಿದ್ದಿ, ನರಸಿಂಹ ಸಿದ್ದಿ, ಕೃಷ್ಣ ಸಿದ್ದಿ, ನಾರಾಯಣ ಸಿದ್ದಿ ಸೇರಿದಂತೆ ಸಮಾಜದ ಪ್ರಮುಖರು, ಗುರುಬಂಧುಗಳು ಉಪಸ್ಥಿತರಿದ್ದರು.