ಹೊಸದುರ್ಗ ಬಿಜೆಪಿ ತಾಲೂಕು ಪದಾಧಿಕಾರಿಗಳ ನೇಮಕಕ್ಕೆ ವಿರೋಧ

KannadaprabhaNewsNetwork |  
Published : Mar 23, 2026, 01:15 AM IST
ಪೊಟೋ, 22ಎಚ್‌ಎಸ್‌ಡಿ1: ಹೊಸದುರ್ಗ ಬಿಜೆಪಿ ಮಂಡಲದ  ಪದಾಧಿಕಾರಿಗಳ ನೇಮಕಕ್ಕೆ ವಿರೋಧ ವ್ಯಕ್ತ ಪಡಿಸಿ ಮಂಡಲದ ಮಾಜಿ ಅಧ್ಯಕ್ಷ ಗೂಳೀಹಟ್ಟಿ ಜಗದೀಶ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹೊಸದುರ್ಗ ಬಿಜೆಪಿ ಮಂಡಲದ ಪದಾಧಿಕಾರಿಗಳ ನೇಮಕಕ್ಕೆ ವಿರೋಧ ವ್ಯಕ್ತ ಪಡಿಸಿ ಮಂಡಲದ ಮಾಜಿ ಅಧ್ಯಕ್ಷ ಗೂಳೀಹಟ್ಟಿ ಜಗದೀಶ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಂಡಲದ ಅಧ್ಯಕ್ಷನಾಗಿ 9 ತಿಂಗಳಾದರೂ ಪಕ್ಷದ ಜವಬ್ದಾರಿ ತೆಗೆದುಕೊಳ್ಳದ ಅಣ್ಣಪ್ಪಸ್ವಾಮಿ, ಪಕ್ಷದ ಹಿರಿಯರನ್ನು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾರ್ಯಕರ್ತರ ಗಮನಕ್ಕೂ ಬಾರದೆ ಏಕಾಏಕೀ ತಾಲೂಕು ಘಟಕಕ್ಕೆ ವಿವಿಧ ಪದಾಧಿಕಾರಿಗಳನ್ನು ಘೋಷಣೆ ಮಾಡಿರುವುದನ್ನು ಮಂಡಲದ ಮಾಜಿ ಅಧ್ಯಕ್ಷ ಗೂಳೀಹಟ್ಟಿ ಜಗದೀಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಪರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಜವಬ್ದಾರಿ ತೆಗೆದುಕೊಳ್ಳದೆ ಮಂಡಲದ ಜವಬ್ದಾರಿಯನ್ನೂ ಹೇಗೆ ಹಂಚಿಕೆ ಮಾಡಿದ್ದೀರಾ, ಒಂದು ತಾಲೂಕಿಗೆ ಮೂರು ಪ್ರಧಾನ ಕಾರ್ಯದರ್ಶಿ ಹುದ್ದೆ ಸೃಷ್ಟಿಸಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದರು.

ಪಕ್ಷದ ಅಧ್ಯಕ್ಷರಾಗುವುದಕ್ಕೆ ಹಲವು ನಿಯಮಗಳಿವೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ರಾಜೇಶ್ ಬುರುಡೆಕಟ್ಟೆ, ಹೇರೂರು ಮಂಜುನಾಥ್, ಶಿವನೇಕಟ್ಟೆ ಶಶಿ ಹೆಸರು ಮುಂಚೂಣಿಯಲ್ಲಿತ್ತು. ಪಕ್ಷದ ನಿಯಮಗಳ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆಯೆ ಇಲ್ಲದ ಅಣ್ಣಪ್ಪ ಸ್ವಾಮಿಯನ್ನೂ ಒತ್ತಡಕ್ಕೆ ಮಣಿದು ಅಧ್ಯಕ್ಷರನ್ನಾಗಿ ನೇಮಿಸಿ ಇಂದಿಗೆ 9 ತಿಂಗಳಾಗಿದೆ. ಆದರೂ ಪಕ್ಷದ ತೀರ್ಮಾನ ಎಂದು ಒಪ್ಪಿಕೊಂಡು ಸುಮ್ಮನಿದ್ದೆವು. ಅಧ್ಯಕ್ಷರಾಗಬೇಕಾದರೆ, ಮುಂಚಿತವಾಗಿ ಕಾರ್ಯದರ್ಶಿಯಾಗಿ ಕೆಲಸ ಮಾಡಿರಬೇಕು. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗಬೇಕಾದರೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕೆಲಸ ಮಾಡಬೇಕು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಆಗಬೇಕಾದರೆ, ಸಕ್ರಿಯ ಸದಸ್ಯರಾಗಿರಬೇಕು. ಸಕ್ರಿಯ ಆಗಬೇಕಾದರೆ, ಮೊದಲು ಪಕ್ಷದಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆದಿರಬೇಕು. ಇವೆಲ್ಲಾ ನಿಯಮಗಳನ್ನು ಧಿಕ್ಕರಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ದೂರಿದರು.

ವಿಧಾನಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಮಾಡದಕೆರೆ, ಕಸಬಾ ಹೋಬಳಿಗಳಲ್ಲಿ ಬಿಜೆಪಿ ಪಕ್ಷಕ್ಕೆ ಒಳ್ಳೆಯ ಲೀಡ್ ಬರುತ್ತದೆ. ಆದರೆ ಶ್ರೀರಾಂಪುರ ಮತ್ತು ಮತ್ತೋಡು ಹೋಬಳಿಗಳಲ್ಲಿ ಮತ ಪ್ರಮಾಣ ಕಡಿಮೆಯಾಗಿ ಸೋತು ಮನೆ ಕಡೆಗೆ ಹೋಗುತ್ತಿದ್ದೇವೆ. ಶ್ರೀರಾಂಪುರ ಭಾಗಕ್ಕೆ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ಆ ಭಾಗದ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಬೇಕಿತ್ತು. ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ನಮ್ಮ ಕೆಲವು ನಾಯಕರ ನಡೆಗಳಿಂದ ಪಕ್ಷದ ಕಾರ್ಯಕರ್ತರು ಮನೆ ಸೇರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದಾಗಿನಿಂದಲೂ ಬೂತ್ ಪ್ರವಾಸ ಕೈಗೊಂಡಿಲ್ಲ. ಬೂತ್ ಅಧ್ಯಕ್ಷರ ನೇಮಕ ಆಗಿಲ್ಲ. ಬಿಎಲ್ಒಗಳ ನೇಮಕ ಮಾಡಿಲ್ಲ. ಇದ್ಯಾವುದೇ ಪಕ್ಷದ ಕಾರ್ಯಗಳನ್ನು ಮಾಡದೆ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಗಿದೆ. ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳಿಗೆ ಉತ್ತರಿಸದೆ ಹೋದಲ್ಲಿ ನಿಮ್ಮ ಸರ್ವಾಧಿಕಾರಿ ಧೋರಣೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರಿಗೆ ದೂರು ನೀಡಲಾಗುವುದು ಎಂದು ಹೇಳಿದರು.

ಈ ವೇಳೆ ಓಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಹೇರೂರು ಮಂಜುನಾಥ್, ಮಂಡಲ ಉಪಾಧ್ಯಕ್ಷ ಸಾಚಾ ಮಂಜಯ್ಯ, ಯುವ ಮೋರ್ಚಾ ಅಧ್ಯಕ್ಷ ಕಲ್ಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಪ, ಗೂಳಿಹಟ್ಟಿ ರಮೇಶ್, ಸುಮಂತ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳ ಮೀಸಲು ವರದಿ ವಿರೋಧಿಸಿ ಬಲಗೈಜಾತಿಗಳ ಒಕ್ಕೂಟದಿಂದ ನಾಳೆ ಪ್ರತಿಭಟನೆ
ಕಾಡುಗೊಲ್ಲರ ಹಟ್ಟಿಗಳಿಲ್ಲ ಅದ್ಧೂರಿ ರಾಮನವಮಿಗೆ ಸಿದ್ಧತೆ