ನದಿ ತಿರುವು ಯೋಜನೆ ವಿರೋಧಕ್ಕೆ ಬೇಕು ಏಕಧ್ವನಿ: ಅನಂತ ಹೆಗಡೆ ಅಶೀಸರ

KannadaprabhaNewsNetwork |  
Published : Jan 02, 2026, 03:30 AM IST
ಫೋಟೋ : ೧ಕೆಎಂಟಿ_ಜೆಎಎನ್_ಕೆಪಿ೧ : ಹವ್ಯಕ ಸಭಾಭವನದಲ್ಲಿ ಗುರುವಾರ ಅಘನಾಶಿನಿ ನದಿ ಕಣಿವೆ ಉಳಿಸಿ ಸಮಾಲೋಚನಾ ಸಭೆ ಉದ್ದೇಶಿಸಿ ಪರಿಸರ ತಜ್ಞ ಅನಂತ ಹೆಗಡೆ ಅಶೀಸರ ಮಾತನಾಡಿದರು. ಶಾಸಕ ದಿನಕರ ಶೆಟ್ಟಿ, ಡಾ, ಸುಭಾಷಚಂದ್ರನ್, ಬಾಲಚಂದ್ರ ಸಾಯಿಮನೆ, ಡಾ.ಸುರೇಶ ಹೆಗಡೆ, ಡಾ. ಜಿ.ಜಿ.ಹೆಗಡೆ, ಗಾಯತ್ರಿ ಇತರರು ಇದ್ದರು.  | Kannada Prabha

ಸಾರಾಂಶ

ಕಳೆದ ೩೫ ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಪರಿಸರ ಮಾರಕ ದೊಡ್ಡ ಯೋಜನೆಗಳನ್ನು ಜನಾಂದೋಲನದ ಮೂಲಕ ಸಫಲವಾಗಿ ಆರಂಭಿಕ ಹಂತದಲ್ಲೇ ತಡೆಯುತ್ತಾ ಬಂದಿದ್ದೇವೆ.

ಕನ್ನಡಪ್ರಭ ವಾರ್ತೆ ಕುಮಟಾ

ಕಳೆದ ೩೫ ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಪರಿಸರ ಮಾರಕ ದೊಡ್ಡ ಯೋಜನೆಗಳನ್ನು ಜನಾಂದೋಲನದ ಮೂಲಕ ಸಫಲವಾಗಿ ಆರಂಭಿಕ ಹಂತದಲ್ಲೇ ತಡೆಯುತ್ತಾ ಬಂದಿದ್ದೇವೆ. ಇದೇ ರೀತಿ ಇಡೀ ಜಿಲ್ಲೆ ಏಕಧ್ವನಿಯಿಂದ ಅಘನಾಶಿನಿ-ವೇದಾವತೀ ನದಿ ಹಾಗೂ ಬೇಡ್ತಿ-ವರದಾ ನದಿ ಜೋಡಣೆ ಮಾಡದಂತೆ ರಾಜ್ಯ ಹಾಗೂ ಕೇಂದ್ರವನ್ನು ತಡೆಯಬೇಕು ಎಂದು ಪರಿಸರ ತಜ್ಞ ಹಾಗೂ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅನಂತ ಹೆಗಡೆ ಅಶೀಸರ ಹೇಳಿದರು.

ಹವ್ಯಕ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಅಘನಾಶಿನಿ ನದಿ ಕಣಿವೆ ಉಳಿಸಿ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯ ವಿಪರ್ಯಾಸವೆಂದರೆ ಬೇಸಿಗೆಯಲ್ಲಿ ಗಂಗಾವಳಿ, ಅಘನಾಶಿನಿ ಮುಂತಾದ ನದಿಯಲ್ಲಿ ನೀರಿನ ಹರಿವು ಕ್ಷೀಣವಾಗಿ ಕುಡಿಯುವ ನೀರಿನ ಯೋಜನೆಗಾಗಿ ನದಿಪಾತ್ರದ ರೈತರ ಪಂಪುಗಳನ್ನು ಬಂದ್‌ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಮಾಡುತ್ತಾರೆ. ಆದರೆ ನದಿ ತಿರುವಿನ ಮೂಲಕ ೩೫ ಟಿಎಂಸಿಗೂ ಹೆಚ್ಚು ನೀರನ್ನು ಬೇರೆಡೆ ಒಯ್ಯುವುದಕ್ಕೆ ಅದೇ ನದಿಗಳಿಗೆ ಯೋಜನೆ ತರುತ್ತಾರೆ. ೧೬,೦೦೦ ಕೋಟಿ ಖರ್ಚುಮಾಡಿ ಎತ್ತಿನಹೊಳೆ ಯೋಜನೆಯಲ್ಲೂ ಎಷ್ಟು ನೀರು ಪೂರೈಕೆಯಾಗುತ್ತಿದೆ. ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಬಹಳ ದೊಡ್ಡ ಪ್ರಮಾಣದಲ್ಲಿ ಕುಮಟಾ ತಾಲೂಕಿನ ಜನರು ಧ್ವನಿ ಎತ್ತಬೇಕಾದ ಅಗತ್ಯವಿದೆ.

ಅಘನಾಶಿನಿ ನದಿಯ ಅಳಿವೆಯು ರಾಮಸಾರ ಕ್ಷೇತ್ರವಾಗಿ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಪಶ್ಚಿಮಘಟ್ಟವು ಸಂರಕ್ಷಿತ ಪ್ರದೇಶವೂ ಆಗಿದ್ದು ಇಲ್ಲಿ ಪರಿಸರ ತಜ್ಞರ ಮೂರನೇ ವರದಿಯೂ ದೊಡ್ಡ ಯೋಜನೆಗಳಿಗೆ ಅವಕಾಶ ನೀಡಬಾರದೆಂದಿದೆ. ಹೀಗಾಗಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಬೃಹತ್ ಜನ ಸಮಾವೇಶಕ್ಕೆ ಕರೆ ನೀಡಿದ್ದೇವೆ. ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟ ಹಾಗೂ ನದಿಕಣಿವೆಗಳ ಸಂರಕ್ಷಣೆಗೆ ಹಕ್ಕೊತ್ತಾಯಕ್ಕಾಗಿ ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು ಆಗ್ರಹಿಸಿ ಜ. ೧೧ರಂದು ಶಿರಸಿಯ ಎಮ್.ಇ.ಎಸ್. ಕಾಲೇಜು ಮೈದಾನದಲ್ಲಿ ಜನಸಮಾವೇಶ ಆಯೋಜಿಸಲಾಗಿದೆ. ಈ ಮಹತ್ವದ ಸಮಾವೇಶದಲ್ಲಿ ಜಿಲ್ಲೆಯ ಎಲ್ಲೆಡೆಯಿಂದ ಸಾರ್ವಜನಿಕರು ಭಾಗವಹಿಸಿ, ತಮ್ಮ ಹಕ್ಕು ಹಾಗೂ ಪರಿಸರ ಸಂರಕ್ಷಣೆಯ ಕೂಗನ್ನು ಹಾಕಬೇಕಿದೆ ಎಂದರು.

ರಾಜ್ಯದಲ್ಲಿ ಈವರೆಗಿನ ಬಹುತೇಕ ನೀರಿನ ಯೋಜನೆಗಳು ಬ್ರಷ್ಟಾಚಾರದ ಕೂಪಗಳಾಗಿದೆ. ಸರ್ಕಾರ ಈವರೆಗಿನ ನೀರಿನ ಯೋಜನೆಗಳ ಬಗ್ಗೆ ಸಮಗ್ರ ವಿವರದೊಂದಿಗೆ ಶ್ವೇತಪತ್ರ ಹೊರಡಿಸಲಿ. ಅಘನಾಶಿನಿ ನದಿ ತಿರುವು ಯೋಜನೆ ಕೂಡಾ ಎತ್ತಿನಹೊಳೆ ಯೋಜನೆಯಂತೆಯೇ ಆಗಲಿದೆ. ಎತ್ತಿನಹೊಳೆ ಯೋಜನೆ ಬಳಿಕ ಕ್ಷೇತ್ರದಲ್ಲಿ ಈ ಬಾರಿ ೨೦ಕ್ಕೂ ಹೆಚ್ಚು ಕಡೆ ಭೂಕುಸಿತವಾಗಿದೆ. ಅಘನಾಶಿನಿ ನದಿ ನದಿ ತಿರುವು ಯೋಜನೆಯಲ್ಲೂ ಉಂಚಳ್ಳಿಯಿಂದ ತಾಳಗುಪ್ಪಾವರೆಗೆ ಭೂಮಿಯನ್ನು ಕೊಚ್ಚಿಹಾಕಲಿದ್ದಾರೆ ಎಂದರು.

ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ, ಪಶ್ಚಿಮಘಟ್ಟವನ್ನು ಉಳಿಸಿಕೊಳ್ಳುವುದು ನಮಗೆ ಅನಿವಾರ್ಯ. ಜಿಲ್ಲೆಯ ನದಿಕಣಿವೆಗಳು ಪರಿಸರದ ಸಮತೋಲನ, ಜೀವವೈವಿಧ್ಯ ಮತ್ತು ಜನಜೀವನಕ್ಕೆ ಅತ್ಯಂತ ಮಹತ್ವವುಳ್ಳದ್ದಾಗಿದೆ. ನದಿ ಜೋಡಣೆ ಯೋಜನೆಗಳಿಂದ ಪರಿಸರಕ್ಕೆ ಅಪಾರ ಹಾನಿಯಾಗುವ ಸಾಧ್ಯತೆ ಇದೆ. ಈಗಾಗಲೇ ಶರಾವತಿ ಪಂಪ್ಡ್‌ ಸ್ಟೋರೇಜ್ ಯೋಜನೆಯನ್ನು ಕಟುವಾಗಿ ವಿರೋಧಿಸಿದ್ದು ಸದನದಲ್ಲೂ ಧ್ವನಿ ಎತ್ತಿದ್ದೇನೆ. ಇಂತಹ ಪರಿಸರ ವಿರೋಧಿ ಯೋಜನೆಗಳನ್ನು ರದ್ದುಗೊಳಿಸುವವರೆಗೂ ಹೋರಾಟ ನಡೆಸಬೇಕಿದೆ ಎಂದರು.

ಡಾ. ಸುಭಾಷಚಂದ್ರನ್ ಮಾತನಾಡಿ, ೨೦೧೮ರಲ್ಲಿ ಹಸಿರು ಪೀಠದ ಆದೇಶದಂತೆ ನಾನು ಮತ್ತು ಇತರ ವಿಜ್ಞಾನಿಗಳು, ತಜ್ಞರು ಸಿದ್ಧಪಡಿಸಿದ ವರದಿಯನ್ನೂ ಧಿಕ್ಕರಿಸಲಾಗುತ್ತಿದೆ. ಇಂಥ ಯೋಜನೆಗಳು ಪರಿಸರಕ್ಕೆ ಮಾತ್ರವಲ್ಲದೇ ಜನ ವಿರೋಧಿಯೂ ಆಗಿದೆ ಎಂದರು.

ಸಮಿತಿಯ ಡಾ. ಸುರೇಶ ಹೆಗಡೆ, ಪರಿಸರ ತಜ್ಞ ಬಾಲಚಂದ್ರ ಸಾಯಿಮನೆ, ಜೀವವೈವಿಧ್ಯ ತಜ್ಞೆ ಗಾಯತ್ರಿ, ಡಾ. ಜಿ.ಜಿ. ಹೆಗಡೆ, ಉದ್ಯಮಿ ಮದನ ನಾಯಕ ಇತರರಿದ್ದರು. ಅಘನಾಶಿನಿ ನದಿ ಅವಲಂಬಿತ ಕರಾವಳಿ ಭಾಗದ ರೈತರು, ಮೀನುಗಾರರು, ನಾಗರಿಕ ಪ್ರಮುಖರಿಗಾಗಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಬೆರಳೆಣಿಕೆಯ ಮಂದಿ ಮಾತ್ರ ಪಾಲ್ಗೊಂಡಿರುವುದು ಸಮಿತಿಯ ಪ್ರಮುಖರನ್ನು ಹುಬ್ಬೇರಿಸುವಂತೆ ಮಾಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು