ಧಾರವಾಡ: ಮಲಪ್ರಭಾ ಬಲದಂಡೆ ಕಾಲುವೆಯಿಂದ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸಿಕೊಳ್ಳಲು ಅಗತ್ಯ ನೀರು ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿನ ನವಲಗುಂದ, ಅಣ್ಣಿಗೇರಿ ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕೆರೆಗಳಿಗೆ ನೀರನ್ನು ತುಂಬಿಸಿಕೊಳ್ಳುವ ಸಲುವಾಗಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಮೇ 13 ರಿಂದ 22 ರ ವರೆಗೆ ನವಿಲುತೀರ್ಥ ಜಲಾಶಯದಿಂದ ನೀರನ್ನು ಮಲಪ್ರಭಾ ಬಲದಂಡೆ ಕಾಲುವೆಯ ಮುಖಾಂತರ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಈ ನೀರು ಸದ್ಬಳಕೆ ಆಗುವಂತೆ ನಿಗಾವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಸಲಾಗಿದೆ.ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಆದೇಶದನ್ವಯ ಜನ- ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಮತ್ತು ನರಗುಂದ ಹಾಗೂ ರೋಣ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಮತ್ತು ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ನರಗುಂದ ಶಾಖಾ ಕಾಲುವೆಗೆ ಪ್ರತಿ ದಿನ 700 ಕ್ಯುಸೆಕ್ಸ್ ನಂತೆ 10 ದಿನಗಳ ವರೆಗೆ ಹಾಗೂ ಮಲಪ್ರಭಾ ಬಲದಂಡೆ ಕಾಲುವೆಗೆ ಪ್ರತಿದಿನ 900 ಕ್ಯುಸೆಕ್ಸ್ ನಂತೆ 10 ದಿನಗಳ ವರೆಗೆ ಹೀಗೆ ಪ್ರತಿದಿನ ಒಟ್ಟು 1600 ಕ್ಯುಸೆಕ್ಸ್ ನಂತೆ 10 ದಿನಗಳ ಅವಧಿಗೆ ಒಟ್ಟು 1.036 ಟಿಎಂಸಿ ನೀರು ಬಿಡುಗಡೆಗೆ ಆದೇಶಿಸಲಾಗಿದೆ.
ಬರೀ ಕುಡಿಯಲು ಮಾತ್ರ ಆದೇಶ: ಮಲಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಕೇವಲ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳುವ ಉದ್ದೇಶಕ್ಕಾಗಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಸಮಯದಲ್ಲಿ ಕಾಲುವೆಯ ಅಚ್ಚುಕಟ್ಟು ಪ್ರದೇಶದ ಸಾರ್ವಜನಿಕರು, ರೈತರು ಈ ನೀರನ್ನು ಕೃಷಿ ಹಾಗೂ ಇನ್ನಿತರೆ ಬೇರೆ ಯಾವುದೇ ಉದ್ದೇಶಕ್ಕೆ ಪಂಪ್ ಸೆಟ್‌ನಿಂದ ಅಥವಾ ಇನ್ನಿತರ ಉಪಕರಣಗಳಿಂದ ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಎಲ್ಲ ಸಾರ್ವಜನಿಕರು, ರೈತರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ವಿನಂತಿಸಿದ್ದಾರೆ.ಕಾಲುವೆಗೆ ಬಿಡುವ ನೀರನ್ನು ಇತರ ಬಳಕೆಗೆ ಬಳಸದಂತೆ ವಿಧಿಸಿರುವ ನಿರ್ಬಂಧವನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ಅಂತಹ ಪಂಪ್ ಸೆಟ್ ಹಾಗೂ ಇತರೆ ಉಪಕರಣಗಳನ್ನು ಜಪ್ತಿ ಮಾಡಿಕೊಂಡು, ಸಂಬಂದಿಸಿದವರ ಮೇಲೆ ನಿಯಮಾನುಸಾರ ಸೂಕ್ತ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.
ಜಿಲ್ಲಾ ಹಾಗೂ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳಿಗೆ, ನೀಡಿದ ನಿರ್ದೇಶನಗಳ ಪಾಲನೆಯಲ್ಲಿ ಲೋಪ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷತೆ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಈ ಆದೇಶವು ತಕ್ಷಣದಿಂದ ಜಾರಿಯಲ್ಲಿದ್ದು ಮುಂದಿನ ಆದೇಶದವರೆಗೆ ಅಸ್ತಿತ್ವದಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.