ಹಾನಗಲ್ಲ ಮಠದ ಆಸ್ತಿ ವಿವಾದ ತನಿಖೆಗೆ ಆದೇಶ: ವಕೀಲ ಬಿ.ಎಸ್. ದಳವಾಯಿ

KannadaprabhaNewsNetwork |  
Published : Feb 02, 2026, 02:00 AM IST
ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲ ಬಿ.ಎಸ್. ದಳವಾಯಿ. | Kannada Prabha

ಸಾರಾಂಶ

ಪಟ್ಟಣದ ಕುಮಾರೇಶ್ವರ ವಿರಕ್ತಮಠದ ಆಸ್ತಿ ಮಾರಾಟವಾದ ಬಗ್ಗೆ ತನಿಖೆಗೆ ನ್ಯಾಯಾಲಯ ಆದೇಶಿಸಿದ್ದು, ₹೧.೬೦ ಕೋಟಿಗೂ ಅಧಿಕ ಹಣ ದುರುಪಯೋಗವಾಗಿದೆ. ಈ ಬಗ್ಗೆ ನಮ್ಮಿಂದ ಕಾನೂನು ಹೋರಾಟ ನಿರಂತರವಾಗಿದೆ, ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ವಕೀಲ ಬಿ.ಎಸ್. ದಳವಾಯಿ ಹೇಳಿದರು.

ಹಾನಗಲ್ಲ: ಪಟ್ಟಣದ ಕುಮಾರೇಶ್ವರ ವಿರಕ್ತಮಠದ ಆಸ್ತಿ ಮಾರಾಟವಾದ ಬಗ್ಗೆ ತನಿಖೆಗೆ ನ್ಯಾಯಾಲಯ ಆದೇಶಿಸಿದ್ದು, ₹೧.೬೦ ಕೋಟಿಗೂ ಅಧಿಕ ಹಣ ದುರುಪಯೋಗವಾಗಿದೆ. ಈ ಬಗ್ಗೆ ನಮ್ಮಿಂದ ಕಾನೂನು ಹೋರಾಟ ನಿರಂತರವಾಗಿದೆ, ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ವಕೀಲ ಬಿ.ಎಸ್. ದಳವಾಯಿ ಹೇಳಿದರು.ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾನಗಲ್ಲ ಕುಮಾರೇಶ್ವರ ವಿರಕ್ತಮಠಕ್ಕೆ ಸಂಬಂಧಿಸಿದ ಹಾನಗಲ್ಲ ತಾಲೂಕಿನ ೧೦ ಹಾಗೂ ಹುಬ್ಬಳ್ಳಿಯಲ್ಲಿನ ೫೧ ಆಸ್ತಿಗಳ ಮಾರಾಟದಿಂದ ₹೧.೬೦ ಕೋಟಿಗೂ ಅಧಿಕ ಹಣ ಮಠಕ್ಕೆ ಬಂದಿದೆ. ಆದರೆ ಈ ಹಣ ಮಠದ ಅಭಿವೃದ್ಧಿಗೆ ಬಳಕೆಯಾಗಿಲ್ಲ. ಎಲ್ಲದಕ್ಕೂ ಮೊದಲು ಆಸ್ತಿ ಮಾರಾಟವೂ ಕಾನೂನುಬಾಹಿರವಾಗಿದೆ. ಹಾನಗಲ್ಲ ಮಠದ ಮಠಾಧೀಶ ಕುಮಾರಮಹಾಸ್ವಾಮಿಗಳು ತಾವು ಸೋಲ್‌ ಟ್ರಸ್ಟಿ ಎಂದು ಕಾನೂನುಬಾಹಿರವಾಗಿ ಮಠದ ಆಸ್ತಿ ಮಾರಾಟ ಮಾಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಇದು ಅಪರಾಧ. ಶ್ರೀಮಠದ ಶ್ರೀಗಳು ಸೋಲ್‌ ಟ್ರಸ್ಟಿ ಎಂದಾದರೂ ಆಸ್ತಿ ಮಾರಾಟದ ಹಕ್ಕು ಅವರಿಗಿಲ್ಲ. ಅವರು ಮಠದ ಆಸ್ತಿ ನಿರ್ವಹಣೆ ಮಾಡುವವರು ಮಾತ್ರ ಆಗಿದ್ದಾರೆ. ಹೀಗಾಗಿ ಮಠದ ಆಸ್ತಿಗಳ ಪರಭಾರೆಗೆ ಅವರಿಗೆ ಕಾನೂನು ಅನ್ವಯ ಅಧಿಕಾರವಿಲ್ಲ ಎಂದರು.ಈ ಬಗ್ಗೆ ಪೊಲೀಸ್ ಇಲಾಖೆಗೆ ತನಿಖೆಗಾಗಿ ನಾವು ಮನವಿ ಮಾಡಿದ್ದೆವು. ಆದರೆ ಅಲ್ಲಿ ತನಿಖೆ ನಡೆಯದ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಹಾನಗಲ್ಲ ನ್ಯಾಯಾಲಯ ಈ ಆಸ್ತಿಗಳಿಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದೆ. ಬರುವ ಏಪ್ರಿಲ್ ೨ರ ಒಳಗಾಗಿ ತನಿಖೆ ನಡೆಸಿ ಅಂತಿಮ ವರದಿಗೆ ನ್ಯಾಯಾಲಯ ಹಾನಗಲ್ಲ ಪೊಲೀಸ್ ಇಲಾಖೆಗೆ ತಿಳಿಸಿದೆ. ಈ ಮೂಲಕ ಹಾನಗಲ್ಲ ಮಠದ ಆಸ್ತಿ ಉಳಿಸುವ ವಿಷಯಕ್ಕೆ ನ್ಯಾಯ ಸಿಗುವ ಎಲ್ಲ ಭರವಸೆ ಇದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಶಾಂತ ಮುಚ್ಚಂಡಿ, ಜಯಲಿಂಗಪ್ಪ ಹಳಕೊಪ್ಪ, ರವೀಂದ್ರ ಚಿಕ್ಕೇರಿ, ಶಾಂತವೀರ ನೆಲೋಗಲ್ಲ ಇದ್ದರು.ಎಲ್ಲ ರೀತಿಯ ತನಿಖೆಗೆ ಸಿದ್ಧ- ಮೂಜಗು ಶ್ರೀ: ಈ ತನಿಖೆಯ ಕುರಿತು ಪ್ರತಿಕ್ರಿಯೆ ನೀಡಿದ ಹಾನಗಲ್ಲ ಕುಮಾರೇಶ್ವರ ವಿರಕ್ತಮಠದ ಕುಮಾರಮಹಾಸ್ವಾಮಿಗಳು ಹಾಗೂ ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಪೂರ್ವಾಗ್ರಹ ಪೀಡಿತವಾಗಿ ಕೆಲವರು ಶ್ರೀಮಠದ ಆಸ್ತಿ ವಿಷಯದಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯಾವುದೋ ಯಾರದೋ ದ್ವೇಷಕ್ಕಾಗಿ ಇಂತಹ ಆಪಾದನೆಗಳನ್ನು ಮಾಡುತ್ತಿದ್ದಾರೆ. ನ್ಯಾಯಾಲಯದ ಆದೇಶವನ್ನೊಳಗೊಂಡು ಆಸ್ತಿ ಮಾರಾಟದ ಬಗ್ಗೆ ತನಿಖೆ ನಡೆಯುವುದಾದರೆ ಅದಕ್ಕೆ ಸರಿಯಾದ ಸಮಯದಲ್ಲಿ ಸರಿಯಾದ ದಾಖಲೆಯೊಂದಿಗೆ ನಮ್ಮ ಹೇಳಿಕೆ ನೀಡುತ್ತೇವೆ. ತನಿಖೆಯಿಂದ ಸತ್ಯಾಂಶವೂ ತಿಳಿಯಲಿದೆ. ಶ್ರೀಮಠದ ಆಸ್ತಿ ವಹಿವಾಟಿನಲ್ಲಿ ಯಾವುದೇ ರೀತಿಯ ಕ್ರಮಬದ್ಧತೆ ತಪ್ಪಿಲ್ಲ. ಶ್ರೀಮಠಕ್ಕೆ ಸಂಬಂಧಿಸಿದ ಅಭಿವೃದ್ಧಿಗೆ ಹಣವನ್ನು ವಿನಿಯೋಗ ಮಾಡಲಾಗಿದೆ. ನ್ಯಾಯಕ್ಕಾಗಿ ತನಿಖೆಯನ್ನು ಅತ್ಯಂತ ಪ್ರಾಂಜಲವಾಗಿ ಸ್ವಾಗತಿಸುತ್ತೇವೆ. ಹಾನಗಲ್ಲ ಕುಮಾರೇಶ್ವರ ಮಠದ ಆಸ್ತಿ ವಿಷಯದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ವ್ಯವಹಾರ ನಡೆದಿಲ್ಲ. ಈ ಬಗ್ಗೆ ಎಲ್ಲ ರೀತಿಯ ತನಿಖೆಗೆ ಬದ್ಧ ಎಂದು ಅವರು ಪುನರುಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ