ಮುಂಡರಗಿ: ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಜಮೀನು ನೀಡಿದ್ದರೂ ಪರಿಹಾರ ಕೊಡದಿದ್ದಕ್ಕೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಚೇರಿಯನ್ನೇ ಜಪ್ತಿ ಮಾಡುವಂತೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ರೈತರು 2023- 24ರಲ್ಲಿ ಸೂಕ್ತ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ರೈತರಿಗೆ ಪ್ರತಿ ಎಕರೆಗೆ ₹6 ಲಕ್ಷ ಪರಿಹಾರ ನೀಡುವಂತೆ ಆದೇಶಿಸಲಾಗಿತ್ತು. ಈವರೆಗೆ ಶೇ. 15ರಷ್ಟು ಬಡ್ಡಿ ಹಣ ಹಾಕಿ ಒಟ್ಟು ಪ್ರತಿ ಎಕರೆಗೆ ₹45ರಿಂದ ₹50 ಲಕ್ಷದವರೆಗೆ ಪರಿಹಾರ ನೀಡಬೇಕು ಎಂದು ಆದೇಶಿಸಲಾಗಿತ್ತು. ಆದರೂ ಪರಿಹಾರ ಕೊಡದ ಹಿನ್ನೆಲೆ ನ್ಯಾಯಾಲಯವು ಕಳೆದ ಜ. 22ರಂದು ಕಚೇರಿ ಜಪ್ತಿ ಮಾಡಲು ಆದೇಶ ನೀಡಿತ್ತು.
ಆದೇಶದನ್ವಯ ಗುರುವಾರ ಕಚೇರಿ ಜಪ್ತಿಗೆ ನ್ಯಾಯಾಲಯದ ಸಿಬ್ಬಂದಿ, ನ್ಯಾಯವಾದಿಗಳು ಮತ್ತು ರೈತರೊಂದಿಗೆ ಆಗಮಿಸಿದ್ದರು. ಆಗ ಅಧಿಕಾರಿಗಳು ದೂರವಾಣಿ ಮೂಲಕ ನ್ಯಾಯಾಲಯ ಸಿಬ್ಬಂದಿ ಜತೆ ಮಾತನಾಡಿ, 15 ದಿನಗಳೊಳಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಹೀಗಾಗಿ ಜಪ್ತಿ ಕಾರ್ಯ ಕೈಬಿಡಲಾಯಿತು. 15 ದಿನದೊಳಗೆ ಪರಿಹಾರ ನೀಡದಿದ್ದರೆ ಮತ್ತೆ ಜಪ್ತಿ ಕಾರ್ಯ ಮಾಡಲಾಗುವುದು ಎಂದು ನ್ಯಾಯವಾದಿಗಳು ಮತ್ತು ಮತ್ತು ರೈತರು ಎಚ್ಚರಿಸಿದರು.ನ್ಯಾಯವಾದಿಗಳಾದ ಜೆ.ಎಸ್. ಇಟಗಿ, ಎಂ.ಬಿ. ನಾಡಗೌಡ್ರ, ಎಂ.ಎಸ್. ಸೂಡಿ ಹಾಗೂ ರೈತರಾದ ದೇವೇಂದ್ರಪ್ಪ ಪಾಟೀಲ ಮಾತನಾಡಿದರು. ರೈತರಾದ ಸಿದ್ದಪ್ಪ ಬರದೂರ, ಶಾರುಖ ದೋಟಿಹಾಳ, ರಮೇಶ ಲಕ್ಕುಂಡಿ, ವೀರಣ್ಣ ಸಜ್ಜನರ, ನ್ಯಾಯಾಲಯ ಸಿಬ್ಬಂದಿ ಉಪಸ್ಥಿತರಿದ್ದರು.