ಮಾಲಿನ್ಯಕಾರಿ ೮ ಕಾರ್ಖಾನೆಗಳ ಬಂದ್‌ಗೆ ಆದೇಶ, ವಿಜಯೋತ್ಸವ

KannadaprabhaNewsNetwork |  
Published : Nov 20, 2026, 02:00 AM IST
ಕಾರ್ಖಾನೆಗಳ ಬಂದ್‌ಗೆ ಆದೇಶವಾಗಿರುವ ಹಿನ್ನೆಲೆಯಲ್ಲಿ ಹೋರಾಟಗಾರರು ವಿಜಯೋತ್ಸವ ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಿದರು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಪರಿಸರ ಮಾಲಿನ್ಯ ಉಂಟುಮಾಡಿ ಜನಜೀವನಕ್ಕೆ ಕುತ್ತು ತಂದಿರುವ ಹಾಗೂ ಪರಿಸರ ನಿಯಮಗಳನ್ನು ಉಲ್ಲಂಘಿಸಿರುವ ಎಂಟು ಕಾರ್ಖಾನೆಗಳನ್ನು ತಕ್ಷಣ ಮುಚ್ಚುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಹೋರಾಟಗಾರರು ವಿಜಯೋತ್ಸವ ಆಚರಿಸಿದ್ದಾರೆ.

ಕೊಪ್ಪಳ: ಜಿಲ್ಲೆಯಲ್ಲಿ ಪರಿಸರ ಮಾಲಿನ್ಯ ಉಂಟುಮಾಡಿ ಜನಜೀವನಕ್ಕೆ ಕುತ್ತು ತಂದಿರುವ ಹಾಗೂ ಪರಿಸರ ನಿಯಮಗಳನ್ನು ಉಲ್ಲಂಘಿಸಿರುವ ಎಂಟು ಕಾರ್ಖಾನೆಗಳನ್ನು ತಕ್ಷಣ ಮುಚ್ಚುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಅಲ್ಲದೆ, ಈ ಕಾರ್ಖಾನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೂ ಸೂಚನೆ ನೀಡಿದೆ.

ಬಲ್ಡೋಟ ಸೇರಿದಂತೆ ಜಿಲ್ಲೆಯ ವಿವಿಧ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಈ ಆದೇಶ ಹೊಸ ಬಲ ನೀಡಿದೆ. ಕಳೆದೊಂದು ವರ್ಷದಿಂದ ಕೊಪ್ಪಳದಲ್ಲಿ ಕಾರ್ಖಾನೆಗಳ ಮಾಲಿನ್ಯದ ವಿರುದ್ಧ ಜನರು ನಿರಂತರವಾಗಿ ಹೋರಾಟ ನಡೆಸುತ್ತಿದ್ದವರು ವಿಜಯೋತ್ಸವ ಆಚರಣೆ ಮಾಡಿದ್ದಾರೆ.

ಮನೆಗಳ ಮೇಲ್ಛಾವಣಿ, ಅಂಗಳ ಸೇರಿದಂತೆ ಎಲ್ಲೆಡೆ ಕರಿ ಬೂದಿ ಸಂಗ್ರಹವಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಖಾನೆಗಳ ವಿಸ್ತರಣೆಗಿಂತ ಇರುವ ಕೈಗಾರಿಕೆಗಳು ಮೊದಲು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳೂ ಈಗಿರುವ ಕಾರ್ಖಾನೆಗಳಿಂದಲೇ ಕೊಪ್ಪಳ ಮಲಿನವಾಗಿದೆ. ಹೊಸ ಕಾರ್ಖಾನೆಗಳ ವಿಸ್ತರಣೆ ಬೇಡ, ಇರುವ ಕಾರ್ಖಾನೆಗಳು ಮಾಲಿನ್ಯ ನಿಯಂತ್ರಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ನಡುವೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲೆಯ ಕೈಗಾರಿಕೆಗಳ ಕಾರ್ಯವೈಖರಿ ಪರಿಶೀಲಿಸಿ, ಪರಿಸರ ನಿಯಮಗಳ ಉಲ್ಲಂಘನೆ ಕುರಿತು ಎಚ್ಚರಿಕೆ ನೀಡಿತ್ತು. ಆದರೂ ನಿಯಮ ಪಾಲನೆಯಲ್ಲಿ ಸುಧಾರಣೆ ಕಂಡುಬಾರದ ಹಿನ್ನೆಲೆಯಲ್ಲಿ ಎಂಟು ಕಾರ್ಖಾನೆಗಳನ್ನು ಮುಚ್ಚಲು ಇದೀಗ ಆದೇಶಿಸಿದೆ.

ಯಾವ ಕಾರ್ಖಾನೆಗಳಿಗೆ ಬೀಗ?: ಕೊಪ್ಪಳ ತಾಲೂಕಿನ ಕುಣಕೇರಿ ಸಮೀಪದ ಐಎಲ್‌ಸಿ ಐರನ್ ಆ್ಯಂಡ್ ಸ್ಟೀಲ್ ಇಂಡಸ್ಟ್ರಿ, ಹಾಲವರ್ತಿ ಸಮೀಪದ ಪಿಬಿಎಸ್ ಸ್ಟೀಲ್ ಇಂಡಸ್ಟ್ರಿ, ಎಸ್.ಕೆ. ಸ್ಟೀಲ್ ಇಂಡಸ್ಟ್ರಿ, ತನುಷಾ ಇಸ್ಪಾತ್ ಇಂಡಸ್ಟ್ರಿ ಘಟಕ-1, ತನುಷಾ ಇಸ್ಪಾತ್ ಘಟಕ-2, ಬಾಬಾ ಅಖಿಲ ಸಾಯಿ ಜ್ಯೋತಿ ಇಂಡಸ್ಟ್ರಿ, ಭದ್ರಶ್ರೀ ಸ್ಟೀಲ್ ಪವರ್ ಲಿಮಿಟೆಡ್ ಹಾಗೂ ಧ್ರುವದೇಶ ಮೆಟಾಸ್ಟೀಲ್ ಇಂಡಸ್ಟ್ರಿಗಳಿಗೆ ಬಂದ್ ಆದೇಶ ನೀಡಲಾಗಿದೆ.

ಎಂಟೂ ಕಾರ್ಖಾನೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದು, ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ತಕ್ಷಣ ಬಂದ್ ಕ್ರಮ ಕೈಗೊಳ್ಳಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ. ಇದರ ಜತೆಗೆ ಕಾರ್ಖಾನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವಂತೆ ಗುಲ್ಬರ್ಗಾ ಜೆಸ್ಕಾಂಗೂ ಆದೇಶಿಸಿದೆ.

ಹೋರಾಟಗಾರರಿಂದ ವಿಜಯೋತ್ಸವ: ಎಂಟು ಕಾರ್ಖಾನೆಗಳ ಬಂದ್ ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಹೋರಾಟದ ವೇದಿಕೆಯಲ್ಲಿ ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಇದು ನಮ್ಮ ಹೋರಾಟಕ್ಕೆ ದೊಡ್ಡ ಬಲ ನೀಡಿದೆ. ಮುಂದಿನ ಹೋರಾಟಕ್ಕೆ ದಿಕ್ಸೂಚಿಯಾಗಲಿದೆ. ಪರಿಸರ ಹಾಳುಮಾಡುವ ಕಾರ್ಖಾನೆಗಳು ಬಂದ್ ಆಗಲಿವೆ ಎಂಬ ವಿಶ್ವಾಸ ಮೂಡಿದೆ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.

2-3 ದಿನಗಳಲ್ಲಿ ಕ್ರಮ: ಎಡಿಸಿ: ಕಾರ್ಖಾನೆಗಳ ಬಂದ್ ಆದೇಶದ ಕುರಿತು ಪ್ರತಿಕ್ರಿಯಿಸಿರುವ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಪರಿಸರ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲನೆ ನಡೆಸಿ ಕ್ರಮಕ್ಕೆ ಆದೇಶಿಸಿದೆ. ಪ್ರತಿಯೊಂದು ಕಾರ್ಖಾನೆಯೂ ಒಂದೊಂದು ರೀತಿಯ ನಿಯಮ ಉಲ್ಲಂಘಿಸಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಆದೇಶ ನಮ್ಮ ಕೈಸೇರಿದ್ದು, ಅದರಂತೆ ಜೆಸ್ಕಾಂ ಹಾಗೂ ಕಂದಾಯ ಉಪವಿಭಾಗಾಧಿಕಾರಿಗಳಿಗೆ ಆಂತರಿಕವಾಗಿ ಸೂಚನೆ ನೀಡಲಾಗುವುದು. ಮುಂದಿನ ಎರಡು-ಮೂರು ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ