ಔಷಧಿ ಅಷ್ಟೇ ಅಲ್ಲ, ಫಿನಾಯಿಲ್‌ನಲ್ಲೂ ಗೋಲ್‌ಮಾಲ್!

KannadaprabhaNewsNetwork |  
Published : Nov 20, 2026, 02:00 AM IST
ಕೊಪ್ಪಳ ಕಿಮ್ಸ್ ಆಸ್ಪತ್ರೆಯಲ್ಲಿ ಬಳಕೆಯಾಗದೆ ತ್ಯಾಜ್ಯಕ್ಕೆ ಸುರಿಯಲಾಗಿದೆ ಎನ್ನಲಾದ ಫಿನಾಯಿಲ್. | Kannada Prabha

ಸಾರಾಂಶ

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಆಸ್ಪತ್ರೆಯಲ್ಲಿ ನಡೆದಿರುವ ಔಷಧಿ ಅಕ್ರಮ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗ ಫಿನಾಯಿಲ್ ಖರೀದಿ ಹಾಗೂ ವಿಲೇವಾರಿಯಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) ಆಸ್ಪತ್ರೆಯಲ್ಲಿ ನಡೆದಿರುವ ಔಷಧಿ ಅಕ್ರಮ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಕೇವಲ ಔಷಧಿಗಳ ಖರೀದಿ ಮತ್ತು ವಿಲೇವಾರಿಯಲ್ಲಷ್ಟೇ ಅಲ್ಲ, ಫಿನಾಯಿಲ್ ಖರೀದಿ ಹಾಗೂ ವಿಲೇವಾರಿಯಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬಳಕೆಯಾಗದ ಫಿನಾಯಿಲ್‌ ಅನ್ನು ಬೃಹತ್ ಪ್ರಮಾಣದಲ್ಲಿ ತ್ಯಾಜ್ಯಕ್ಕೆ ಸುರಿದಿರುವ ದೃಶ್ಯಾವಳಿಗಳು ''''ಕನ್ನಡಪ್ರಭ''''ಕ್ಕೆ ಲಭ್ಯವಾಗಿವೆ.

ಚರಂಡಿ ನೀರು ಹರಿಯುವಂತೆ ಫಿನಾಯಿಲ್ ನೆಲದ ಮೇಲೆ ಹರಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹಾಗಾದರೆ ಅಷ್ಟೊಂದು ಪ್ರಮಾಣದಲ್ಲಿ ಖರೀದಿ ಮಾಡಿದ್ದೇಕೆ? ಅಗತ್ಯದ ಅಂದಾಜು ಮಾಡದೆ ಖರೀದಿಸಲಾಗಿತ್ತೇ ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ.

ಈಗಾಗಲೇ ಸುಮಾರು 10 ಕ್ವಿಂಟಲ್ ಔಷಧಿಗಳನ್ನು ತ್ಯಾಜ್ಯಕ್ಕೆ ಸುರಿದಿರುವ ಲೆಕ್ಕ ಅಧಿಕೃತವಾಗಿ ಮುನ್ನೆಲೆಗೆ ಬಂದಿದೆ. ಆದರೆ, ಲೆಕ್ಕಕ್ಕೆ ಸಿಗದ ಇನ್ನೆಷ್ಟು ಔಷಧಿಗಳನ್ನು ವಿಲೇವಾರಿ ಮಾಡಲಾಗಿದೆ ಎಂಬ ಅನುಮಾನಗಳ ನಡುವೆಯೇ, ಫಿನಾಯಿಲ್ ಸೇರಿದಂತೆ ಇತರ ಬಳಕೆಯ ವಸ್ತುಗಳೂ ತ್ಯಾಜ್ಯಕ್ಕೆ ಸೇರಿರುವ ಮಾಹಿತಿ ಹೊರಬರುತ್ತಿದೆ. ಇವುಗಳ ಮೌಲ್ಯ ಕೋಟ್ಯಂತರ ರುಪಾಯಿ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

ತೆರೆಯದ ನೂರಾರು ಬಾಕ್ಸ್‌ಗಳು: ಫಿನಾಯಿಲ್ ತುಂಬಿದ ನೂರಾರು ಬಾಕ್ಸ್‌ಗಳನ್ನು ತೆರೆಯದೆಯೇ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ. ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಫಿನಾಯಿಲ್ ಅನ್ನು ನೇರವಾಗಿ ನೆಲಕ್ಕೆ ಸುರಿಯಲಾಗಿದೆ. ಬಳಕೆಗೆ ಬಾರದಷ್ಟು ಪ್ರಮಾಣದಲ್ಲಿ ಖರೀದಿ ಮಾಡಿದ್ದೇಕೆ? ಖರೀದಿ ಪ್ರಕ್ರಿಯೆಯಲ್ಲಿ ಬೇಡಿಕೆ ಮತ್ತು ದಾಸ್ತಾನು ಪರಿಶೀಲನೆ ನಡೆದಿತ್ತೇ? ಖರೀದಿಗೆ ಅನುಮೋದನೆ ನೀಡಿದವರು ಯಾರು? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.

ದೊಡ್ಡ ಗೋಲ್‌ಮಾಲ್ ಶಂಕೆ: ಈ ಹಿಂದೆ ಕಿಮ್ಸ್‌ನ ನಿರ್ದೇಶಕರೊಬ್ಬರ ಅವಧಿಯಲ್ಲಿ ನಡೆದಿದ್ದ ದುರ್ಬಳಕೆಗೆ ಸಂಬಂಧಿಸಿದಂತೆ ಸುಮಾರು ₹60 ಲಕ್ಷ ದಂಡ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಪ್ರಕರಣವು ಇನ್ನೂ ಪ್ರಗತಿಯಲ್ಲಿದೆ. ಇದೀಗ ಔಷಧಿಗಳ ಜತೆಗೆ ಫಿನಾಯಿಲ್ ಕೂಡ ತ್ಯಾಜ್ಯಕ್ಕೆ ಸುರಿದಿರುವ ವಿಡಿಯೋಗಳು ಲಭ್ಯವಾಗಿರುವುದು ಆಸ್ಪತ್ರೆಯ ಖರೀದಿ ಮತ್ತು ವಿಲೇವಾರಿ ವ್ಯವಸ್ಥೆಯ ಬಗ್ಗೆ ಗಂಭೀರ ಅನುಮಾನ ಮೂಡಿಸಿದೆ.

ವಿಕೆಟ್ ಪತನ: ಕಿಮ್ಸ್‌ನಲ್ಲಿನ ಔಷಧಿ ಅಕ್ರಮದ ಕುರಿತು ''''ಕನ್ನಡಪ್ರಭ''''ದಲ್ಲಿ ಸರಣಿ ವರದಿಗಳು ಪ್ರಕಟವಾಗುತ್ತಿದ್ದಂತೆ ಆಸ್ಪತ್ರೆಯ ಮೆಡಿಕಲ್ ಅಧಿಕ್ಷಕ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಆದರೆ, ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ ಎನ್ನಲಾಗಿದೆ. ಪ್ರಕರಣದ ಗಂಭೀರತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆಯೂ ಮಹತ್ವ ಪಡೆದುಕೊಂಡಿದೆ.

ಲಕ್ಷಾಂತರ ರುಪಾಯಿ ಲೆಕ್ಕ ಎಲ್ಲಿ?: ಆಸ್ಪತ್ರೆಯಲ್ಲಿ ತುರ್ತು ಸಂದರ್ಭದಲ್ಲಿ ಲಭ್ಯವಿಲ್ಲದ ಔಷಧಿಗಳನ್ನು ಖಾಸಗಿ ಔಷಧಿ ಮಳಿಗೆಗಳಿಂದ ಖರೀದಿಸಲು ಅವಕಾಶವಿದೆ. ಇದಕ್ಕಾಗಿ ವಿಶೇಷ ಅನುದಾನವೂ ಮೀಸಲಿರುತ್ತದೆ. ಅಗತ್ಯಕ್ಕೆ ತಕ್ಕಂತೆ ನಿತ್ಯ ಸಾವಿರಾರು ರುಪಾಯಿ ವೆಚ್ಚ ಮಾಡಲು ಅವಕಾಶವಿದ್ದು, ಖರೀದಿಸಿದ ಔಷಧಿಗಳ ಬಿಲ್ ಸಲ್ಲಿಸುವುದು ಕಡ್ಡಾಯವಾಗಿದೆ.

ಆದರೆ, ಕಳೆದ ಐದು ವರ್ಷಗಳಿಂದ ಈ ವ್ಯವಸ್ಥೆಯಡಿ ಲಕ್ಷಾಂತರ ರುಪಾಯಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಖಾಸಗಿಯಾಗಿ ಔಷಧಿ ಖರೀದಿಸಿದ ದಾಖಲೆ ಹಾಗೂ ಬಿಲ್‌ಗಳಿಲ್ಲದೆ ಹಣ ಪಡೆದಿರುವ ಆರೋಪಗಳೂ ಕೇಳಿಬಂದಿವೆ. ಈ ಎಲ್ಲ ವ್ಯವಹಾರಗಳ ಸಮಗ್ರ ತನಿಖೆ ನಡೆದರೆ ಇನ್ನಷ್ಟು ಅಕ್ರಮಗಳು ಬಯಲಾಗುವ ಸಾಧ್ಯತೆಯಿದೆ.

ತನಿಖೆ ಪ್ರಗತಿಯಲ್ಲಿದೆ. ವರದಿ ಬಂದ ಬಳಿಕವೇ ಏನಾಗಿದೆ ಎಂಬುದು ತಿಳಿಯಲಿದೆ. ಈಗಲೇ ಈ ಕುರಿತು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಕಿಮ್ಸ್ ನಿರ್ದೇಶಕ ಡಾ. ಅಂಬ್ರೇಶ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ