ಕಾರಿಗೆ ಅದಿರು ಲಾರಿ ಡಿಕ್ಕಿ- ಗರ್ಭಿಣಿ ಸೇರಿ ಐವರ ಸಾವು

KannadaprabhaNewsNetwork |  
Published : May 27, 2025, 12:51 AM ISTUpdated : May 27, 2025, 12:52 AM IST
ಚಿತ್ರ: ೨೬ಎಸ್.ಎನ್.ಡಿ.೦೧- ಸಂಡೂರು- ಹೊಸಪೇಟೆ ಮಾರ್ಗಮಧ್ಯ ಜೈಸಿಂಗ್‌ಪುರದ ಬಳಿಯಲ್ಲಿ ಸೋಮವಾರ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ಹೊಸಪೇಟೆಯ ಕಡೆಗೆ ಹೊರಟಿದ್ದ ಕಾರೊಂದು ನುಜ್ಜುಗುಜ್ಜಾಗಿರುವುದು. ೨೬ಎಸ್.ಎನ್.ಡಿ.೦೨- ದುರ್ಘಟನೆಯಲ್ಲಿ ಮೃತಪಟ್ಟ ತಾಲೂಕಿನ ಲಕ್ಷ್ಮೀಪುರದ ಕುಟುಂಬದ ಸದಸ್ಯರು. ೨೬ಎಸ್.ಎನ್.ಡಿ.೦೨೩- ಸಂಡೂರು ತಾಲೂಕಿನ ಜೈಸಿಂಗ್‌ಪುರದ ಬಳಿಯಲ್ಲಿ ನಡೆದ ದುರ್ಘಟನೆಯಲ್ಲಿ ಮೃತರ ದೇಹಗಳನ್ನು ಸಂಡೂರಿನ ಸಾರ್ವಜನಿಕ ಆಸ್ಪತ್ರೆಗೆ ತಂದ ಸಂದರ್ಭ ಕುಟುಂಬಸ್ಥರ ಆಕ್ರಂದರ ಮುಗಿಲು ಮುಟ್ಟಿತ್ತು. | Kannada Prabha

ಸಾರಾಂಶ

ಅದಿರು ಸಾಗಣೆ ಟಿಪ್ಪರ್ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 5 ಜನ ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ಸಿದ್ದಾಪುರ ಹಾಗೂ ಜೈಸಿಂಗ್‌ಪುರದ ಮಧ್ಯ ಸೋಮವಾರ ಬೆಳಗ್ಗೆ ಜರುಗಿದೆ.

ಮಹಿಳೆಯ ಗರ್ಭದಲ್ಲಿದ್ದ ಮಗುವೂ ಸಾವು

ಸಂಡೂರು ತಾಲೂಕಿನ ಸಿದ್ದಾಪುರ- ಜೈಸಿಂಗ್‌ಪುರದ ಮಧ್ಯ ಘಟನೆ

ಕನ್ನಡಪ್ರಭ ವಾರ್ತೆ ಸಂಡೂರು

ಅದಿರು ಸಾಗಣೆ ಟಿಪ್ಪರ್ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 5 ಜನ ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ಸಿದ್ದಾಪುರ ಹಾಗೂ ಜೈಸಿಂಗ್‌ಪುರದ ಮಧ್ಯ ಸೋಮವಾರ ಬೆಳಗ್ಗೆ ಜರುಗಿದೆ.

ನಂದೀಶ್ (೨೮), ನಂದೀಶ್ ಅವರ ಗರ್ಭಿಣಿ ಪತ್ನಿ ಜಯಲಕ್ಷ್ಮೀ (೨೫), ನಂದೀಶ್ ಅವರ ಸಹೋದರಿ ಆಶಾ (೩೨), ಆಶಾ ಅವರ ಮಕ್ಕಳಾದ ಸಾಯಿ ಸಾತ್ವಿಕ್ (೫), ಬಿಂಧುಶ್ರೀ (೯ ತಿಂಗಳು) ಮೃತರು. ಇವರೆಲ್ಲ ಸಂಡೂರು ಬಳಿಯ ಲಕ್ಷ್ಮೀಪುರ ಗ್ರಾಮದವರು.

ಘಟನೆಯ ವಿವರ:

ವೃತ್ತಿಯಲ್ಲಿ ಚಾಲಕನಾಗಿದ್ದ ನಂದೀಶ್ ಜಯಲಕ್ಷ್ಮೀ ಅವರನ್ನು ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಜಯಲಕ್ಷ್ಮೀ ೮ ತಿಂಗಳ ಗರ್ಭಿಣಿಯಾಗಿದ್ದ ಹಿನ್ನೆಲೆ ನಂದೀಶ್ ತನ್ನ ಪತ್ನಿಯನ್ನು ಹೊಸಪೇಟೆಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಬರಲು ಕಾರಿನಲ್ಲಿ ಸೋಮವಾರ ಬೆಳಗ್ಗೆ ಕರೆದೊಯ್ದಿದ್ದಾನೆ. ಹೋಗುವಾಗ ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ಸಹೋದರಿ ಆಶಾ ಮತ್ತು ಅಕ್ಕನ ಮೂವರು ಮಕ್ಕಳನ್ನು ಜೊತೆಗೆ ಕಾರಿನಲ್ಲಿ ಕರೆದೊಯ್ದಿದ್ದಾನೆ.ಹೊಸಪೇಟೆಗೆ ಹೋಗುವ ಮಾರ್ಗಮಧ್ಯೆ ಹೊಸಪೇಟೆ ಕಡೆಯಿಂದ ಸಂಡೂರು ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಕಾರು ನುಜ್ಜುಗುಜ್ಜಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಜಯಲಕ್ಷ್ಮೀ, ಆಶಾ, ಬಿಂಧುಶ್ರೀ ಹಾಗೂ ಸಾಯಿ ಸಾತ್ವಿಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರನ್ನು ಚಲಾಯಿಸುತ್ತಿದ್ದ ನಂದೀಶ್ ಮತ್ತು ಸಹೋದರಿ ಆಶಾ ಅವರ ಮಗಳಾದ ಮಹಾಲಕ್ಷ್ಮೀ ತೀವ್ರವಾಗಿ ಗಾಯಗೊಂಡಿದ್ದ ಕಾರಣ, ಅವರನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಿಸದೆ ನಂದೀಶ್ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ನಂತರ ಗಾಯಗೊಂಡಿದ್ದ ಮಹಾಲಕ್ಷ್ಮೀಯನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ಬಿಮ್ಸ್‌ಗೆ ಕಳುಹಿಸಿಕೊಡಲಾಗಿದೆ. ಬಾಲಕಿಯ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕುಟುಂಬಸ್ಥರ ಆಕ್ರಂದನ:

ಅಪಘಾತದ ಸುದ್ದಿ ತಿಳಿದು ಮೃತರ ಪಾಲಕರು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖೆಯಲ್ಲಿ ಸಂಡೂರಿನ ಸಾರ್ವಜನಿಕ ಆಸ್ಪತ್ರೆಯ ಬಳಿ ಸೇರಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ನಂದೀಶ್ ಅವರ ತಂದೆ ಅಶೋಕ್ ಮೋರಗೇರಿ ಪಾರ್ಶ್ವವಾಯು ಪೀಡಿತರು. ಪಾರ್ಶ್ವವಾಯು ಹಾಗಿದ್ದಾಗ್ಯೂ ಗ್ರಾಮದಲ್ಲಿ ಒಂದು ಚಿಕ್ಕ ಅಂಗಡಿಯನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದರು. ನಂದೀಶ್ ಅವರ ತಾಯಿ ಲಕ್ಷ್ಮೀಯವರು ಕೂಲಿ ಕೆಲಸ ಮಾಡುತ್ತಾ ಪತಿಗೆ ಸಾಥ್‌ ನೀಡಿದ್ದಾರೆ. ಇವರ ಮಗ ನಂದೀಶ್ ಚಾಲಕನಾಗಿ ದುಡಿಯುತ್ತಾ ಕುಟುಂಬಕ್ಕೆ ಆಸರೆಯಾಗಿದ್ದ. ಸೋಮವಾರ ನಡೆದ ಈ ದುರ್ಘಟನೆ ಮೊದಲೇ ಸಂಕಷ್ಟದ ಜೀವನವನ್ನು ನಡೆಸುತ್ತಿದ್ದ ಅಶೋಕ್ ಮತ್ತು ಲಕ್ಷ್ಮೀ ದಂಪತಿಯ ಕುಟುಂಬಕ್ಕೆ ಬರ ಸಿಡಿಲಿನಂತೆ ಬಂದು ಅಪ್ಪಳಿಸಿದೆ. ಕುಟುಂಬಸ್ಥರನ್ನು ಕಳೆದುಕೊಂಡ ಕುಟುಂಬದ ದು:ಖ ಹೇಳತೀರದಾಗಿದೆ.

ಕಣ್ಣಾಲಿ ತೇವ:

ಪ್ರೀತಿಸಿ ಮದುವೆಯಾಗಿ ಸುಂದರ ಜೀವನವನ್ನು ಕಟ್ಟಿಕೊಂಡಿದ್ದ ಜೋಡಿ, ತವರು ಮನೆಗೆ ಬಂದಿದ್ದ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಇಹಲೋಕದ ಯಾತ್ರೆ ಮುಗಿಸಿದ್ದು, ಹೊರ ಪ್ರಪಂಚವನ್ನು ಕಾಣುವ ಮೊದಲೇ ತಾಯಿಯ ಗರ್ಭದಲ್ಲಿಯೇ ತಾಯಿತಂದೆಯೊಂದಿಗೆ ಮಗುವೊಂದು ಮೃತಪಟ್ಟಿದ್ದನ್ನು ತಿಳಿದ ಜನತೆ ದಿಗ್ಭ್ರಮೆ ವ್ಯಕ್ತಪಡಿಸಿದರು. ನೆರೆದಿದ್ದ ಹಲವರ ಕಣ್ಣಾಲಿಗಳು ತೇವವಾಗಿದ್ದವು. ಲಾರಿಗಳಿಗೆ ಯಾವಾಗ?:

ಲಾರಿಗಳ ಆರ್ಭಟಕ್ಕೆ ಎಷ್ಟು ಜನರು ಬಲಿಯಾಗಬೇಕಿದೆ? ಎಂದು ನೆರೆದಿದ್ದ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರ್ಘಟನೆಗೆ ಕಾರಣವಾದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ತೋರಣಗಲ್ಲು ವಿಭಾಗದ ಡಿವೈಎಸ್‌ಪಿ ಪ್ರಸಾದ್ ಗೋಖಲೆ, ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್‌ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

PREV

Recommended Stories

ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ : ಮಧು ಬಂಗಾರಪ್ಪ
ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ