ಕನ್ನಡಪ್ರಭ ವಾರ್ತೆ ಹಾಸನ
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ 13 ವರ್ಷದ ಬಾಲಕಿಯ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಆಕೆಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಬಾಲಕಿಯು ತನ್ನ ಸಾವಿನಲ್ಲೂ 6 ಜನರನ್ನು ಬದುಕಿಸಿ ಅವರ ಬಾಳಿಗೆ ಬೆಳಕಾಗಿದ್ದಾಳೆ.ನಗರದ ಹಿಮ್ಸ್ ನಿರ್ದೇಶಕರ ಸಭಾಂಗಣದಲ್ಲಿ ಈ ಕುರಿತಂತೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಹಿಮ್ಸ್ ನಿರ್ದೇಶಕ ಡಾ. ರಾಜಣ್ಣ ಅವರು, ತಿಪಟೂರು ತಾಲೂಕಿನ ಹಳೇ ಪಾಳ್ಯದ 13 ವರ್ಷದ ಏಳನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಚಂದನ ಜುಲೈ ೨೩ ರಂದು ಸೈಕಲ್‌ನಲ್ಲಿ ಶಾಲೆಗೆ ಹೋಗುವಾಗ ತಿಪಟೂರಿನಲ್ಲಿ ರಸ್ತೆ ಅಪಘಾತದಿಂದ ಗಂಭೀರ ಗಾಯಗೊಂಡು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಿದರೂ ಆಕೆಯ ಮೆದುಳು ನಿಷ್ಕ್ರಿಯಗೊಂಡಿತ್ತು. ಆಕೆಯ ತಂದೆ- ತಾಯಿ ಅತ್ಯಂತ ಸಂದಿಗ್ಧತೆಯಲ್ಲೂ ಉತ್ತಮವಾಗಿ ಕೆಲಸ ಮಾಡುತ್ತಿದ್ದ ಆಕೆಯ ಹೃದಯ, ಲಿವರ್, ಕಿಡ್ನಿ ಮತ್ತು ಇತರೆ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದರು. ಜುಲೈ ೨೭ ರಂದು ಬಾಲಕಿ ಚಂದನಾಳನ್ನು ಹಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಿ ಅಂಗಾಂಗ ದಾನಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲಾಯಿತು. ಸೋಮವಾರದಂದು ಬೆಳಗ್ಗೆ ೩.೩೦ ರಿಂದ ೬.೩೦ ತನಕ ಅಂಗಾಂಗಗಳನ್ನು ದೇಹದಿಂದ ಬೇರ್ಪಡಿಸುವ ಪ್ರಕ್ರಿಯೆ ನಡೆಯಿತು. ಹಿಮ್ಸ್ ಸಂಸ್ಥೆಯಲ್ಲಿ ನಡೆದ ಪ್ರಪ್ರಥಮ ಅಂಗಾಂಗ ದಾನ ಇದಾಗಿದೆ. ಈ ಹಿಂದೆ ಹಲವು ಬಾರಿ ಹಿಮ್ಸ್ ತಂಡವು ಪ್ರಯತ್ನ ನಡೆಸಿದ್ದರೂ ಸಫಲವಾಗಿರಲಿಲ್ಲ ಎಂದು ತಿಳಿಸಿದರು.
ಹಿಮ್ಸ್ ತಂಡದ ಅರಿವಳಿಕೆ ವಿಭಾಗದ ತಜ್ಞರ ಅವಿರತ ಪ್ರಯತ್ನ ಮತ್ತು ಡಾ. ರಾಜೇಗೌಡರ ನೇತೃತ್ವದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕಿಡ್ನಿ ಮತ್ತು ಲಿವರ್ ವಿಫಲ ಆಗಿರುವ ರೋಗಿಗಳಿಗೆ ಜೋಡಣೆ ಮಾಡಲು ಅತೀ ಶೀಘ್ರದಲ್ಲಿ ಈ ಅಂಗಾಂಗಗಳನ್ನು ಕಳುಹಿಸಿಕೊಡಲಾಗುವುದು. ಇದರಿಂದಾಗಿ ಕುಮಾರಿ ಚಂದನಳ ತಂದೆ-ತಾಯಿಗಳು ತಮ್ಮ ಮಗಳನ್ನು ಬೇರೆಯವರ ಮೂಲಕ ನೋಡಬಹುದು ಮತ್ತು ಇವರ ಈ ಉದಾರತೆಯಿಂದಾಗಿ ಅಂಗಾಂಗ ದಾನ ಪಡೆದ ಕುಟುಂಬದವರು ತಮ್ಮ ಮನೆಯಲ್ಲಿ ಹೊಸಬೆಳಕು ಕಾಣಲಿದ್ದಾರೆ. ಈ ಮೂಲಕ ಚಂದನ ತಂದೆ- ತಾಯಿಗಳು ಬೇರೆ ಕುಟುಂಬದವರಿಗೆ ಹೊಸಜೀವನ ಮತ್ತು ಹೊಸಬೆಳಕು ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.ಹಿಮ್ಸ್ ಪ್ರಾಂಶುಪಾಲರಾದ ಡಾ. ಬಿ.ಸಿ. ರವಿಕುಮಾರ್, ಆಡಳಿತಾಧಿಕಾರಿ ರೇಖಾ, ಅರಿವಳಿಕೆ ಮುಖ್ಯಸ್ಥ ಡಾ. ಹನುಮಂತಪ್ಪ, ಡಾ. ರಾಮನಾಥ್, ರಾಘವೇಂದ್ರ ಪ್ರಸಾದ್, ಡಾ ಅನುಪಮಾ, ಡಾ. ವಿಶ್ವನಾಥ್, ಡಾ. ಹಾಲೇಶ್ ಇತರರು ಇದ್ದರು.