ಕನ್ನಡಪ್ರಭ ವಾರ್ತೆ ಉಳ್ಳಾಲ
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಸೋಮವಾರ ಉಳ್ಳಾಲ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಉಳ್ಳಾಲದ ಕೋಟೆಪುರ, ಮೊಗವೀರಪಟ್ಣ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಕಡಲ್ಕೊರೆತ ಹಾನಿಯನ್ನು ವೀಕ್ಷಿಸಿ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿದರು.ಈ ವೇಳೆ ಸ್ಥಳೀಯರ ಅಹವಾಲುಗಳನ್ನು ಆಲಿಸಿದ ಅವರು, ಕಡಲ್ಕೊರೆತದಿಂದ ಆಗುವ ಹಾನಿಯನ್ನು ಕಡಿಮೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಡಲ್ಕೊರೆತ ನಿಯಂತ್ರಿಸಲು ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್, ಉಳ್ಳಾಲ ತಹಸೀಲ್ದಾರ್ ಪುಟ್ಟರಾಜು ಮತ್ತಿತರರು ಇದ್ದರು.ಗುಡ್ಡ ಕುಸಿತ ಸಂದರ್ಭ ಸಂಚಾರ ಬಂದ್ ಮಾಡದೆ ನಿರ್ವಹಿಸಲು ಸೂಚನೆ: ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಒಳಗಾದ ಮಂಗಳೂರಿನ ಕೆತ್ತಿಕಲ್, ಶಿರಾಡಿ ಘಾಟ್ ಹಾಗೂ ಚಾರ್ಮಾಡಿ ಘಾಟ್ ಪ್ರದೇಶಕ್ಕೆ ರಾಜ್ಯ ಲೋಕೋಪಯೋಗಿ ಇಲಾಖಾ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವ ಕುಮಾರ್ ಹಾಗೂ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೋಮವಾರ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಶಿರೂರು ಕುಸಿತ ಪ್ರದೇಶದಲ್ಲಿರುವ ತಜ್ಞರ ತಂಡವನ್ನು ಕೆತ್ತಿಕಲ್, ಶಿರಾಡಿ, ಚಾರ್ಮಾಡಿ ಪ್ರದೇಶಕ್ಕೆ ಕರೆತಂದು ಪರಿಶೀಲನೆ ನಡೆಸಬೇಕು. ಪರಿಹಾರಗಳ ಕುರಿತು ತಜ್ಞರಿಂದ ವರದಿ ಪಡೆಯುವಂತೆ ಡಾ.ಸೆಲ್ವ ಕುಮಾರ್ ಸೂಚನೆ ನೀಡಿದರು.
ಮಂಗಳೂರಿನಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಸೂಚನೆ ಬಳಿಕ ಹೆದ್ದಾರಿ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸೆಲ್ವ ಕುಮಾರ್, ಬಳಿಕ ಕೆತ್ತಿಕಲ್‌ಗೆ ಭೇಟಿ ನೀಡಿದರು. ಅಲ್ಲಿ ಗುಡ್ಡ ಕುಸಿತದ ಆತಂಕವನ್ನು ಪರಿಶೀಲಿಸಿದ ಡಾ.ಸೆಲ್ವ ಕುಮಾರ್, ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದರು.ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಆನಂದ್, ನಗರ ಪೊಲೀಸ್ ಕಮಿಷನರ್ ಅನುಪಮ ಅಗರ್‌ವಾಲ್ ಕಂದಾಯ ಅಧಿಕಾರಿಗಳು, ಎನ್‌ಎಚ್‌ಎಐ, ಹೆದ್ದಾರಿ ವಿಭಾಗದ ಅಧಿಕಾರಿಗಳು ಇದ್ದರು.