ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕ‌ನ ಅಂಗಾಂಗ ದಾನ

KannadaprabhaNewsNetwork |  
Published : Feb 14, 2026, 03:30 AM IST
ಮೆದಳು ನಿಷ್ಕ್ರಿಯಗೊಂಡಿದ್ದ ಯುವಕ‌ನ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು | Kannada Prabha

ಸಾರಾಂಶ

ಫೆ.9ರಂದು ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ನಗರದ ಶಹಾಪುರ ಅಗಸಿ ನಿವಾಸಿ ಬಲರಾಮ ಬಾಗಲಕೋಟ (30) ಯುವಕ‌ನ ಅಂಗಾಂಗವನ್ನು ಕುಟುಂಬಸ್ಥರು ನಗರದ ಬಿಎಲ್‌ಡಿಇ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಫೆ.9ರಂದು ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ನಗರದ ಶಹಾಪುರ ಅಗಸಿ ನಿವಾಸಿ ಬಲರಾಮ ಬಾಗಲಕೋಟ (30) ಯುವಕ‌ನ ಅಂಗಾಂಗವನ್ನು ಕುಟುಂಬಸ್ಥರು ನಗರದ ಬಿಎಲ್‌ಡಿಇ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಅಂದು ನಡೆದ ರಸ್ತೆ ಅಪಘಾತದಲ್ಲಿ ಬಲರಾಮ ತೀವ್ರವಾಗಿ ಗಾಯಗೊಂಡು ಬಿಎಲ್‌ಡಿಇ ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ದಾಖಲಾಗಿದ್ದರು. ಹಿಂಬದಿ ಸವಾರ ಸಿದ್ದು ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದನು.

ಈ ವೇಳೆ ಬಲರಾಮನ ತಪಾಸಣೆ ನಡೆಸಿದ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ಆತನ ಸಂಬಂಧಿಕರಿಗೆ ತಿಳಿಸಿ ಅಂಗಾಂಗ ದಾನಕ್ಕಾಗಿ ಕುಟುಂಬದ ಸದಸ್ಯರ ಒಪ್ಪಿಗೆ ಪಡೆದಿದ್ದರು. ಈ ಹಿನ್ನೆಲೆ ವಿಜಯಪುರ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗೆ ಬಲರಾಮರ ಒಂದು ಕಿಡ್ನಿ ಕಸಿ ಮಾಡಲು, ಮತ್ತೊಂದು ಕಿಡ್ನಿಯನ್ನು ಕಲಬುರಗಿಯ ರೋಗಿಯೊಬ್ಬರಿಗೆ ಕಸಿ ಮಾಡಲು ಕಳುಹಿಸಿಕೊಡಲು ನಿರ್ಧರಿಸಲಾಗಿತ್ತು.

ಅದರಂತೆ ಗುರುವಾರ ಅಂಗಾಂಗಳನ್ನು ಕಸಿಗಾಗಿ ತೆಗೆದು, ಒಂದು ಕಿಡ್ನಿಯನ್ನು ವಿಜಯಪುರದಿಂದ ಕಲಬುರಗಿ ವರೆಗೆ ಝೀರೋ ಟ್ರಾಫಿಕ್‌ನಲ್ಲಿ ಕಳುಹಿಸಿ ಕೊಡಲಾಯಿತು. ಮತ್ತೊಂದು ಶುಕ್ರವಾರ ಬೆಳಗಿನ ಜಾವದವರೆಗೆ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಇಲ್ಲಿನ ರೋಗಿಗೆ ಕಿಡ್ನಿ ಕಸಿ ಮಾಡಲಾಯಿತು. ನಂತರ ಬಲರಾಮನ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಶ್ರೀ ಬಿ.ಎಂ.ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ವಿಜಯಕುಮಾರ ಕಲ್ಯಾಣಪ್ಪಗೊಳ ಮಾತನಾಡಿ, ಬಲರಾಮ ಬಾಗಲಕೋಟ ಎರಡು ಕಿಡ್ನಿಗಳು ಮತ್ತು ಎರಡು ಕಣ್ಣಿನ ಕಾರ್ನಿಯಾ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯೆ ಡಾ.ತೇಜಶ್ವಿನಿ ವಲ್ಲಭ ಮಾತನಾಡಿ, ಬಲರಾಮ ಬಾಗಲಕೋಟ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ನಾನಾ ಅಂಗಾಂಗಗಳ ವೈಫಲ್ಯಕ್ಕೆ ತುತ್ತಾಗಿರುವ ರೋಗಿಗಳ ಬಾಳಿಗೆ ವರದಾನವಾಗಿದ್ದಾರೆ ಎಂದರು.

ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಡಾ.ಎಸ್.ಬಿ.ಪಾಟೀಲ ನೇತೃತ್ವದಲ್ಲಿ ಡಾ.ದಿಲೀಪ ಜವಳಿ, ಡಾ.ವಿನಯ ಕುಂದರಗಿ, ಡಾ.ಸಂತೋಷ ಪಾಟೀಲ, ಡಾ.ಸಂತೋಷ ಅಲಾಲಮಠ, ಡಾ.ಮಂಜು ಪ್ರಸಾದ ಇತರರು ನೆರವೇರಿಸಿದರು. ಆಸ್ಪತ್ರೆ ವೈದ್ಯರ ಕಾರ್ಯವನ್ನು ಸಂಸ್ಥೆ ಅಧ್ಶಕ್ಷ ಎಂ.ಬಿ.ಪಾಟೀಲ, ಡೀಮ್ಡ್ ವಿವಿ ಕುಲಾಧಿಪತಿ ಬಿ.ಎಂ.ಪಾಟೀಲ, ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ, ಕುಲಪತಿ ಡಾ.ಅರುಣ ಇನಾಮದಾರ, ಕುಲಸಚಿವ ಡಾ.ಆರ್‌.ವಿ.ಕುಲಕರ್ಣಿ ಶ್ಲಾಘಿಸಿದ್ದಾರೆ. ಬಾಗಲಕೋಟ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ್ದಾರೆ.

ತುರ್ತು ಚಿಕಿತ್ಸೆ ಘಟಕದ ಆಡಳಿತಾಧಿಕಾರಿ ಡಾ.ಶರಣಪ್ಪ ಕಟ್ಟಿ, ಫಾರೆನಿಸಿಕ್ ಮೆಡಿಸಿನ್ ತಜ್ಞ ಡಾ.ಉದಯಕುಮಾರ ನುಚ್ಚಿ, ಡಾ.ಸಂತೋಷ ಗಲಗಲಿ, ಡಾ.ಉಮೇಶ, ಡಾ.ಸಂತೋಷ ಪಾಟೀಲ, ಡಾ.ಸಂದೀಪ ಪಾಟೀಲ, ಡಾ.ಬಸವರಾಜ ಸಜ್ಜನ, ಅಂಗಾಂಗ ದಾನ ಆಪ್ತ ಸಮಾಲೋಚಕ ಶಾಂತೇಶ ಸಲಗರೆ, ನರ್ಸಿಂಗ್ ಸಿಬ್ಬಂದಿ, ಬಾಗಲಕೋಟ ಕುಟುಂಬಸ್ಥರು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿಗಳಲ್ಲಿ ಮೇಲು ಕೀಳು ಎಂಬುವುದಿಲ್ಲ
ಗೃಹ ರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನೀಡಿ