ಅಂಗಾಂಗ ದಾನ ಮಾನವೀಯತೆಯ ಅತ್ಯುನ್ನತ ರೂಪ: ಶಾಸಕ ಎಚ್.ಕೆ. ಪಾಟೀಲ

KannadaprabhaNewsNetwork |  
Published : Aug 17, 2026, 02:30 AM IST
ಟ್ರಾನ್ಸ್‌ಪ್ಲಾಂಟ್ ಗೇಮ್ಸ್ 2026 ರಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿರುವ ವ್ಯಕ್ತಿ ಗುಂಡು ಎಸೆತ ಮಾಡುತ್ತಿರುವುದು. | Kannada Prabha

ಸಾರಾಂಶ

ಗದಗ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಗದಗ ಟ್ರಾನ್ಸ್‌ಪ್ಲಾಂಟ್ ಗೇಮ್ಸ್ 2026 ಕ್ರೀಡಾಕೂಟ ಆಯೋಜಿಸಲಾಗಿತ್ತು. ಅಂಗಾಂಗ ವೈಫಲ್ಯ ಮತ್ತು ಕಸಿ ಶಸ್ತ್ರಚಿಕಿತ್ಸೆಯಂತಹ ಕಠಿಣ ಸವಾಲುಗಳನ್ನು ಮೀರಿ ಸಹಜ ಹಾಗೂ ಆರೋಗ್ಯಕರ ಜೀವನಕ್ಕೆ ಮರಳಿದವರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಗದಗ: ಅಂಗಾಂಗ ದಾನವು ಮಾನವೀಯತೆಯ ಅತ್ಯುನ್ನತ ರೂಪಗಳಲ್ಲಿ ಒಂದಾಗಿದ್ದು, ಒಬ್ಬ ವ್ಯಕ್ತಿಯ ದಾನದ ದೃಢ ನಿರ್ಧಾರವು ಹಲವು ಜೀವಗಳಿಗೆ ಹೊಸ ಬೆಳಕು ನೀಡಬಲ್ಲದು. ಈ ಮಹತ್ವದ ಸಂದೇಶವು ಸಮಾಜದ ಪ್ರತಿಯೊಂದು ಹಂತಕ್ಕೂ ತಲುಪಬೇಕು ಎಂದು ಗದಗ ಶಾಸಕ ಎಚ್. ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಗದಗ ಟ್ರಾನ್ಸ್‌ಪ್ಲಾಂಟ್ ಗೇಮ್ಸ್ 2026 ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.

ಅಂಗಾಂಗ ವೈಫಲ್ಯ ಮತ್ತು ಕಸಿ ಶಸ್ತ್ರಚಿಕಿತ್ಸೆಯಂತಹ ಕಠಿಣ ಸವಾಲುಗಳನ್ನು ಮೀರಿ ಸಹಜ ಹಾಗೂ ಆರೋಗ್ಯಕರ ಜೀವನಕ್ಕೆ ಮರಳಿ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವುದು ಇಡೀ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದೆ. ಕಸಿ ಎಂದರೆ ಜೀವನದ ಅಂತ್ಯವಲ್ಲ, ಅದು ಬದುಕಿನ ಎರಡನೇ ಇನ್ನಿಂಗ್ಸ್‌ನ ಆರಂಭ ಎಂದರು.

ಜೀವ ಸಾರ್ಥಕತೆಯ ನೊಡಲ್ ಅಧಿಕಾರಿ ಡಾ. ಅರುಣ್ ಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಅಂಗಾಂಗ ದಾನವನ್ನು ಬಲಪಡಿಸಲು ಮತ್ತು ಮೃತ ದಾನಿಗಳಿಂದ ಅಂಗಾಂಗ ದಾನದ ಪ್ರಮಾಣ ಹೆಚ್ಚಿಸಲು ಸಾರ್ವಜನಿಕರಲ್ಲಿ ವೈಜ್ಞಾನಿಕ ಅರಿವು ಮೂಡಿಸುವುದು ಅತ್ಯಗತ್ಯ ಎಂದರು.

ಲಿವರ್‌ಪೂಲ್‌ನಿಂದ ಆಗಮಿಸಿದ್ದ ವಿಶೇಷ ಅತಿಥಿ ಅಜಯ್ ಶರ್ಮಾ ಮಾತನಾಡಿ, ಕಸಿ ಪಡೆದ ವ್ಯಕ್ತಿ ಮತ್ತೆ ಸಮಾಜದಲ್ಲಿ ಸಕ್ರಿಯನಾಗಿ ಸ್ವಾವಲಂಬಿ ಜೀವನ ನಡೆಸುವುದು ಚಿಕಿತ್ಸೆಯ ನೈಜ ಯಶಸ್ಸು ಎಂದು ಅಭಿಪ್ರಾಯಪಟ್ಟರು.

ಸಂಕಲ್ಪ್ ಕಿಡ್ನಿ ಕೇರ್ ಫೌಂಡೇಶನ್ ಅಧ್ಯಕ್ಷ ಆನಂದ್ ಪೊತ್ನಿಸ್ ಸಂಸ್ಥೆಯ ವತಿಯಿಂದ ರೋಗಿಗಳಿಗೆ ನೀಡಲಾಗುತ್ತಿರುವ ನೆರವು ಮತ್ತು ಜಾಗೃತಿ ಕಾರ್ಯಗಳ ಬಗ್ಗೆ ವಿವರಿಸಿದರು.

ಡಾ. ಅವಿನಾಶ್ ಓದುಗೌಡರ್ ಮಾತನಾಡಿ, ಕ್ರೀಡಾಂಗಣದಲ್ಲಿ ಸ್ಪರ್ಧಿಸುತ್ತಿರುವ ಪ್ರತಿಯೊಬ್ಬರೂ ಅಂಗಾಂಗ ದಾನದ ಜೀವಂತ ರಾಯಭಾರಿಗಳು. ಅವರ ಪ್ರತಿಯೊಂದು ನಗು ಮತ್ತು ಹೆಜ್ಜೆಯ ಹಿಂದೆ ಅಂಗಾಂಗ ದಾನಿಗಳು ಹಾಗೂ ಅವರ ಕುಟುಂಬಗಳ ನಿಸ್ವಾರ್ಥ ತ್ಯಾಗವಿದೆ. ಈ ಕ್ರೀಡಾಕೂಟ ಕೇವಲ ಆಟವಲ್ಲ, ಬದುಕಿನ ಮಹೋನ್ನತ ಸಂಭ್ರಮವಾಗಿದೆ, ಇದು ರಾಜ್ಯದ ಇತಿಹಾಸದಲ್ಲಿಯೇ ಮಹತ್ವದ ದಿನವಾಗಿ ದಾಖಲಾಯಿತು ಎಂದರು.

ವಿವಿಧ ಸಂಸ್ಥೆ ಸಹಯೋಗ: ಎಚ್. ಕೆ. ಪಾಟೀಲ ಪ್ರತಿಷ್ಠಾನ, ಟ್ರಾನ್ಸ್‌ಪ್ಲಾಂಟ್ ಆ್ಯಂಡ್‌ ಯುರೋಜೆನಿಟಲ್ ಸೊಸೈಟಿ, ಕೆ.ಎಚ್. ಪಾಟೀಲ ಕಿಡ್ನಿ ಕೇರ್, ಜೀವಸಾರ್ಥಕತೆ ಹಾಗೂ ಸಂಕಲ್ಪ್ ಆಸ್ಪತ್ರೆ, ಸ್ಥಳೀಯ ಜೇಸಿ ಹೈಸ್ಕೂಲ್, ಲಯನ್ಸ್ ಸ್ಕೂಲ್, ಎ.ಎಸ್.ಎಸ್. ಕಾಲೇಜಿನ ಆಡಳಿತ ಮಂಡಳಿ ಮತ್ತು ದೈಹಿಕ ಶಿಕ್ಷಣ ಸಿಬ್ಬಂದಿಯ ಸಹಕಾರದೊಂದಿಗೆ ಈ ವಿಶಿಷ್ಟ ಕ್ರೀಡಾಕೂಟವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಕ್ರೀಡಾಕೂಟಕ್ಕೆ ಆಗಮಿಸಿದ್ದ ಅಂಗಾಗ ದಾನ ಪಡೆದವರು ಮತ್ತು ನೀಡಿದರು ಸಮ್ಮಿಳಿತ ರಾಜ್ಯದ ಅಂಗಾಗ ದಾನದ ಒಂದು ಗಟ್ಟಿ ಬಾಂಧವ್ಯಕ್ಕೆ ಸಾಕ್ಷಿಯಾಯಿತು.

ಜೀವಂತ ಗೌರವ: ಅಂಗಾಂಗ ದಾನವೆಂದರೆ ಕೇವಲ ಚಿಕಿತ್ಸೆಯಲ್ಲ, ಅದು ಇನ್ನೊಂದು ಜೀವಕ್ಕೆ ನೀಡುವ ಪುನರ್ಜನ್ಮ. ತಮ್ಮ ದುಃಖದ ಕ್ಷಣದಲ್ಲೂ ಮತ್ತೊಬ್ಬರ ಬಾಳಿಗೆ ಬೆಳಕಾಗಲು ನಿರ್ಧರಿಸಿದ ದಾನಿಗಳು ಮತ್ತು ಅವರ ಕುಟುಂಬಗಳ ತ್ಯಾಗ ಅತ್ಯುನ್ನತ ಮಾನವೀಯತೆಯ ಪ್ರತೀಕ. ಕ್ರೀಡಾಂಗಣದಲ್ಲಿ ಕಾಣುತ್ತಿರುವ ಈ ಪ್ರತಿಯೊಂದು ನಗು ಮತ್ತು ಉತ್ಸಾಹದ ಹೆಜ್ಜೆಯೂ ಆ ಮಹಾನ್ ದಾನಿಗಳ ಅಮರ ತ್ಯಾಗಕ್ಕೆ ಸಲ್ಲುತ್ತಿರುವ ಜೀವಂತ ಗೌರವ ಎಂದು ಶಾಸಕ ಎಚ್. ಕೆ. ಪಾಟೀಲ ಹೇಳಿದರು.

ಸಮಾಜಕ್ಕೆ ಮಾದರಿ: ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 60ಕ್ಕೂ ಹೆಚ್ಚು ಅಂಗಾಂಗ ಕಸಿ ಪಡೆದವರು ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಅದಮ್ಯ ಮನೋಬಲವನ್ನು ಪ್ರದರ್ಶಿಸಿದರು. ಇದು ಯುವ ಸಮಾಜಕ್ಕೆ ಮಾದರಿಯಾಗಿದೆ ಎಂದು ಹಿರಿಯ ವೈದ್ಯ ಡಾ. ಎಸ್.ಆರ್. ನಾಗನೂರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಪಾಯಿ ದಂಗೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಜನಸಾಮಾನ್ಯರಿಗೂ ಶಿಕ್ಷಣ ಸಿಗುತ್ತಿರುವುದೇ ದೊಡ್ಡ ಬದಲಾವಣೆ: ಶಾಸಕ ಮಾನೆ