ಆದಾಯದ ಸಿಹಿ ಕೊಟ್ಟ ಸಾವಯವ ಮಾವು

KannadaprabhaNewsNetwork | Published : May 12, 2024 1:15 AM

ಸಾರಾಂಶ

ಬೇಗ ಹಾಗೂ ಅಧಿಕ ಲಾಭ ಗಳಿಸಬೇಕು ಎಂಬ ದುರಾಸೆಯಿಂದ ರಾಸಾಯನಿಕ ಕೃಷಿಯತ್ತ ಮುಖ ಮಾಡುವ ರೈತರೆ ಹೆಚ್ಚಿರುವಾಗ, ಇಲ್ಲೊಬ್ಬ ವೈದ್ಯರು ಮಾತ್ರ ಸಾವಯವ ಕೃಷಿಯಿಂದ ಮಾವು ಬೆಳೆದು ಇತರರಿಗೂ ಮಾದರಿ ಆಗಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಬೇಗ ಹಾಗೂ ಅಧಿಕ ಲಾಭ ಗಳಿಸಬೇಕು ಎಂಬ ದುರಾಸೆಯಿಂದ ರಾಸಾಯನಿಕ ಕೃಷಿಯತ್ತ ಮುಖ ಮಾಡುವ ರೈತರೆ ಹೆಚ್ಚಿರುವಾಗ, ಇಲ್ಲೊಬ್ಬ ವೈದ್ಯರು ಮಾತ್ರ ಸಾವಯವ ಕೃಷಿಯಿಂದ ಮಾವು ಬೆಳೆದು ಇತರರಿಗೂ ಮಾದರಿ ಆಗಿದ್ದಾರೆ.

ವೈದ್ಯಕೀಯ ವೃತ್ತಿಯೊಂದಿಗೆ ಕೃಷಿ ಮಾಡಬೇಕು, ತಾನೂ ರೈತನಾಗಬೇಕು ಎಂದುಕೊಂಡ ಡಾ.ಬಸನಗೌಡ ಪಾಟೀಲ್ ನಾಗರಾಳಹುಲಿ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ 4 ಎಕರೆ ಜಮೀನಿನಲ್ಲಿ ಪಕ್ಕಾ ಸಾವಯವ ಕೇಸರ ಮಾವು ಬೆಳೆದಿದ್ದಾರೆ. ಈ ಮೂಲಕ ಸಾವಯವ ಬೆಳೆಗೆ ಹೆಚ್ಚು ಒತ್ತು ನೀಡಿದ್ದಾರೆ. ಬಿಎಎಂಎಸ್, ಡಿಇಎಂ ವೈದ್ಯರಾಗಿರುವ ಇವರು, ಕಳೆದ 20 ವರ್ಷಗಳಿಂದ ಜನರಲ್ ಪ್ರ್ಯಾಕ್ಟಿಸ್ ಮಾಡುತ್ತ ರೋಗಿಗಳ ಸೇವೆ ಮಾಡುತ್ತಾ ಬಂದಿದ್ದಾರೆ.ಪಕ್ಕಾ ಸಾವಯವ ಬೆಳೆ:ಗುಜರಾತಿನಿಂದ ಮಾವಿನ ಸಸಿಗಳನ್ನು ತರಿಸಿ, ತಮ್ಮ ತೋಟದಲ್ಲೇ ಎರೆಹುಳು ಗೊಬ್ಬರ, ಜೀವಾಮೃತ ತಯಾರಿಸಿ ಅದನ್ನೇ ಮಾವಿನ ಗಿಡಗಳಿಗೆ ಹಾಕುತ್ತಿದ್ದಾರೆ. ಯಾವುದೇ ರಾಸಾಯನಿಕ ಔಷಧ ಅಥವಾ ರಾಸಾಯನಿಕ ಗೊಬ್ಬರ ಬಳಕೆ ಮಾಡದೆ, ಕೇವಲ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಜೀವಾಮೃತಗಳನ್ನು ನೀಡುವ ಮೂಲಕ ಕಳೆದ ಐದು ವರ್ಷಗಳಿಂದ ಸಾವಯವ ಕೇಸರ ಮಾವಿನಹಣ್ಣು ಬೆಳೆಯುತ್ತಿದ್ದಾರೆ.ಗುಜರಾತಗೆ ಹೋಗಿದ್ದಾಗ ಬಂತು ಪ್ರೇರಣೆ:

ಡಾ.ಬಸನಗೌಡ ಪಾಟೀಲ್ ಕಳೆದ ಒಂಬತ್ತು ವರ್ಷಗಳ ಹಿಂದೆ ಗುರಾಜತ್‌ ಪ್ರವಾಸಕ್ಕೆಂದು ಹೋಗಿದ್ದ ವೇಳೆ ಅಲ್ಲಿ ಕೇಸರ ತಳಿಯ ಸಾವಯವ ಮಾವಿನಹಣ್ಣಿನ ತೋಟಕ್ಕೆ ಭೇಟಿ ನೀಡಿದ್ದರು. ಅಲ್ಲಿನ ತೋಟದಲ್ಲಿದ್ದ ಕೇಸರ ಮಾವಿನಹಣ್ಣು ತಿಂದಾಗ ಅದರ ರುಚಿಗೆ ಮಾರುಹೋಗಿ ತಾವು ಸಹ ತಮ್ಮ ತೋಟದಲ್ಲಿ ಕೇಸರ ಮಾವಿನ ಹಣ್ಣನ್ನೇ ಬೆಳೆಯಬೇಕು ಎಂದು ಪಣ ತೊಟ್ಟು, ಈ ರೀತಿಯ ಸಾವಯವ ಮಾವು ಬೆಳೆದಿದ್ದಾರೆ.

ನಾಟಿಯ ವಿವರಣೆ:

ಪ್ರತಿ ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ 20 ಅಡಿ ಅಂತರದಲ್ಲಿ ಮಾವಿನ ಸಸಿಗಳನ್ನು ನಾಟಿ ಮಾಡಿ, ಪ್ರತಿ ಎಕರೆಗೆ 125 ಸೇರಿದಂತೆ ನಾಲ್ಕು ಎಕರೆಯಲ್ಲಿ ಒಟ್ಟು 550 ಮಾವಿನ ಗಿಡಗಳನ್ನು ನಾಟಿ ಮಾಡಿ ಬೆಳೆಸಲಾಗಿದೆ. ಕಳೆದ ಐದು ವರ್ಷಗಳಿಂದ ಸಾವಯವ ಮಾವಿನಹಣ್ಣು ಬೆಳೆಯುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಜನರು ತೋಟಕ್ಕೆ ಬಂದು ಟ್ರೇ ಗಟ್ಟಲೇ ಮಾವಿನಹಣ್ಣನ್ನು ಹಣ ಕೊಟ್ಟು ಖರೀದಿಸಿಕೊಂಡು ಹೋಗುತ್ತಿದ್ದಾರೆ. ಪ್ರತಿ ಗಿಡಕ್ಕೆ 200 ರಿಂದ 300 ಮಾವಿನ ಕಾಯಿಗಳು ಬಿಡುತ್ತಿದ್ದು, ಉತ್ತಮ ಲಾಭ ಕೂಡ ಬರುತ್ತಿದೆ.

ಭರ್ಜರಿ ಇಳುವರಿ:

ಒಂದೊಂದು ಮಾವಿನ ಹಣ್ಣುಗಳು 400ರಿಂದ 800 ಗ್ರಾಂವರೆಗೂ ತೂಕ ಬರುತ್ತದೆ. ಜತೆಗೆ ಹೆಚ್ಚು ಪ್ರೋಟಿನ್ ಹೊಂದಿವೆ. 80ರಿಂದ 100 ಹಣ್ಣುಗಳ ಒಂದು ಟ್ರೇ ಹಣ್ಣಿಗೆ ಎರಡೂವರೆಯಿಂದ 3 ಸಾವಿರ ರುಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ ₹2ರಿಂದ ₹3 ಲಕ್ಷದವರೆಗೆ ಆದಾಯ ಗಳಿಸುತ್ತಿರುವ ಇವರು ಖರ್ಚು ತೆಗೆದು ಪ್ರತಿ ಎಕರೆಗೂ ₹2 ಲಕ್ಷ ನಿವ್ವಳ ಲಾಭ ಉಳಿಯುತ್ತಿದೆ. ನಿತ್ಯ ಬೆಳಗ್ಗೆ 6ಗಂಟೆಗೆ ತೋಟಕ್ಕೆ ಬರುವ ವೈದ್ಯ ಡಾ.ಬಸನಗೌಡ ಪಾಟೀಲ್ ಅವರು 9 ಗಂಟೆಯವರೆಗೆ ತೋಟದಲ್ಲಿನ ಕೆಲಸಗಳನ್ನು ಮಾಡುತ್ತಾರೆ. ಬಳಿಕ ಆಸ್ಪತ್ರೆಗೆ ತೆರಳಿ ಅಲ್ಲಿ ಜನರಲ್ ಮೆಡಿಸಿನ್ ಪ್ರ್ಯಾಕ್ಟೀಸ್ ಮಾಡುತ್ತಾರೆ.

ಜಮೀನಿನಲ್ಲಿ ಆಕಳು, ಎಮ್ಮೆ ಕಟ್ಟಿರುವ ಇವರು ಅದರಿಂದ ಬರುವ ಮೂತ್ರವನ್ನು ಜೀವಾಮೃತ ತಯಾರಿಕೆಗೆ ಹಾಗೂ ಗೊಬ್ಬರವನ್ನು ಗಿಡಗಳಿಗೆ ಬಳಸುತ್ತಿದ್ದಾರೆ. ಇನ್ನು ಬೋರ್‌ವೆಲ್ ಇರುವುದರಿಂದ ಹನಿ ನೀರಾವರಿ ಮಾಡಲಾಗಿದ್ದು, ಕೇವಲ ವಾಲ್ ತಿರುಗಿಸಿದ್ರೆ ಸಾಕು ಇಡಿ ತೋಟಕ್ಕೆ ಹನಿ ನೀರಾವರಿ ಪದ್ಧತಿಯಲ್ಲಿ ನೀರುಣಿಸುವ ವಿಧಾನ ಅಳವಡಿಸಲಾಗಿದೆ. ಒಟ್ಟಿನಲ್ಲಿ ಡಾಕ್ಟರ್‌ ಅವರ ಈ ಸಾವಯವ ಮಾವು ಕೃಷಿ ಅವರಿಗೆ ಆದಾಯ ತಂದು ಕೊಡುವುದರ ಜೊತೆಗೆ ಎಲ್ಲರಿಗೂ ಮಾದರಿಯಾಗಿದೆ.

---

ಕೋಟ್.....

ರಾಸಾಯನಿಕ ಗೊಬ್ಬರ ಬಳಸುವುದರಿಂದ ಲಕ್ಷಾಂತರ ರುಪಾಯಿ ಖರ್ಚಾಗುತ್ತದೆ. ಅದರ ಬದಲಾಗಿ ಕೊಟ್ಟಿಗೆ ಗೊಬ್ಬರ, ಸಾವಯವ ಬಳಸಿದರೆ ಪ್ರತಿ ಎಕರೆಗೆ 20ರಿಂದ 25 ಸಾವಿರ ರುಪಾಯಿ ಮಾತ್ರ ಖರ್ಚು ಆಗುತ್ತದೆ. ಇದೀಗ ಉತ್ತಮ ಫಸಲು ಬಂದಿದ್ದು, ಎಕರೆಗೆ ಎರಡು ಲಕ್ಷದಂತೆ ಆದಾಯದ ನಿರೀಕ್ಷೆ ಹೊಂದಲಾಗಿದೆ. ಒಟ್ಟು ಈ ಬಾರಿ ಎಂಟು ಲಕ್ಷ ರುಪಾಯಿ ಆದಾಯ ಸಿಗುವ ನಿರೀಕ್ಷೆ ಇದೆ.

-ಡಾ.ಬಸನಗೌಡ ಪಾಟೀಲ್, ಸಾವಯವ ಮಾವು ಬೆಳೆದವರು.

--

ಸಾವಯವ ಪದ್ಧತಿಯಲ್ಲಿ ಬೆಳೆದ ಮಾವು ಬಹಳಷ್ಟು ಗುಣಮಟ್ಟ ಹಾಗೂ ರುಚಿ ಹೊಂದಿದೆ. ಮಾವಿನ ಹಣ್ಣಿನ ಗಾತ್ರ ಕೂಡ ದೊಡ್ಡದಾಗಿದೆ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ 4 ಟ್ರೇ ಮಾವಿನಹಣ್ಣುಗಳನ್ನು ಖರೀದಿಸಿ, ನನ್ನ ಎಲ್ಲಾ ಸ್ನೇಹಿತರಿಗೆ ಬಂಧು-ಬಳಗದವರಿಗೆ ಕೊಟ್ಟಿದ್ಧೇನೆ. ಅಲ್ಲದೇ ನಮ್ಮ ಕುಟುಂಬದವರು ನೇರವಾಗಿ ತೋಟಕ್ಕೆ ಭೇಟಿ ನೀಡಿ, ಇಲ್ಲಿನ ವಾತಾವರಣ ನೋಡಿ ಸಖತ್ ಖುಷಿ ಪಟ್ಟಿದ್ದೇವೆ.

-ರಾಮಚಂದ್ರರಾವ್ ದೇಶಪಾಂಡೆ, ಮಾವು ಖರೀದಿಸಿದವರು.

Share this article