ಕನಕಪುರ: ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ತಾಲೂಕಿನ ದಲಿತ ಪರ, ರೈತಪರ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿರಿಯ ದಲಿತ ಮುಖಂಡ ಜೆ.ಎಂ.ಶಿವಲಿಂಗಯ್ಯ ಮಾತನಾಡಿ, ದಲಿತ ವಿರೋಧಿ, ಒಕ್ಕಲಿಗ ಸಮುದಾಯ ನಿಂದನೆ ಹಾಗೂ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ ಶಾಸಕ ಮುನಿರತ್ನರನ್ನು ಒಂದು ಕ್ಷಣವೂ ಇಲ್ಲಿನ ನೆಲದಲ್ಲಿ ಇರಿಸಬಾರದು, ಶಾಶ್ವತವಾಗಿ ಗಡಿಪಾರು ಮಾಡಬೇಕು. ಇಂತಹವರ ಗಡಿಪಾರಿನಿಂದ ದಲಿತರು, ಹಿಂದುಳಿದವರು, ಮಹಿಳೆಯರು ನೆಮ್ಮದಿಯಿಂದ ಬದುಕಬಹುದು ಎಂದು ಹೇಳಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಶಾಸಕ ಮುನಿರತ್ನ ಹೇಳಿಕೆ ಬಹಳ ಅಮಾನವೀಯವಾಗಿದ್ದು, ಇಂತಹ ವ್ಯಕ್ತಿಯನ್ನು ಬಿಜೆಪಿ ತಕ್ಷಣವೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು. ನ್ಯಾಯಾಲಯ ಕೂಡ ಇಂತವರಿಗೆ ತಕ್ಷಣವೇ ಜಾಮೀನು ನೀಡಿದ್ದು, ಇಂತವರು ಪರಿವರ್ತನೆಯಾಗಲು ಸಾಧ್ಯವಿಲ್ಲ. ಇಂತಹ ಮಾನಗೆಟ್ಟವರನ್ನು ವರ್ಷಾನುಗಟ್ಟಲೆ ಜೈಲಿನಲ್ಲಿ ಇರಿಸಬೇಕು. ಸಮಾಜಕ್ಕೆ ಕಂಟಕಪ್ರಾಯವಾದ ಇಂತವರನ್ನು ಗಡಿಪಾರು ಮಾಡಲು ನ್ಯಾಯಧೀಶರು ಆದೇಶಿಸಬೇಕು ಎಂದು ಆಗ್ರಹಿಸಿದರು.ದಲಿತ ಮುಖಂಡ ಮಲ್ಲಿಕಾರ್ಜುನ ಮಾತನಾಡಿ, ಶಾಸಕ ಮುನಿರತ್ನ ರೌಡಿಸಂ ಹಿನ್ನೆಲೆಯಿಂದ ಬಂದವನು. ಇಂತಹವನಿಂದ ಕೀಳು ವರ್ತನೆಯಲ್ಲದೆ ಮತ್ತೇನು ನೀರೀಕ್ಷಿಸಲು ಸಾಧ್ಯ ಎಂದರು.