ಸಿಎಂ ಆರ್ಥಿಕ ಸಲಹೆಗಾರ ಸೂಚನೆ । ಸಹಕಾರಿ ಜಾಗೃತಿ ಸಮಾವೇಶ ಆಯೋಜನೆ ಕರಿತು ಸಭೆ
ಸಹಕಾರಿ ಕ್ಷೇತ್ರದ ಬಗ್ಗೆ ಕುಕನೂರು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಪ್ರತಿಯೊಬ್ಬರಿಗೂ ಮಾಹಿತಿ ತಲುಪುವಂತೆ ಸಹಕಾರಿ ಜಾಗೃತಿ ಸಮಾವೇಶ ಆಯೋಜನೆ ಮಾಡಿ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಹಕಾರಿ ಜಾಗೃತಿ ಸಮಾವೇಶದ ಆಯೋಜನೆ ಕುರಿತು ಅಧಿಕಾರಿಗಳು ಹಾಗೂ ಸ್ವಾಗತ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಹಕಾರಿ ರಂಗದ ಮೂಲಕ ಹಲವಾರು ರೀತಿಯಲ್ಲಿ ರೈತ ವರ್ಗ ಹಾಗೂ ಜನರು ಬದುಕು ನಿರ್ಮಿಸಿಕೊಳ್ಳಬಹುದು. ಸಹಕಾರಿ ಸಂಘಗಳ ಬಗ್ಗೆ ಎಲ್ಲರಿಗೂ ಮಾಹಿತಿ ಗೊತ್ತಾಗಬೇಕು. ಆ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದ ಮಾಹಿತಿ ಪ್ರತಿಯೊಬ್ಬರಿಗೂ ತಲುಪುವಂತೆ ಸಮಾವೇಶದ ಮೂಲಕ ತಿಳಿಸುವ ಕಾರ್ಯ ಆಗಬೇಕು. ಫೆ. 8ರಂದು ಕುಕನೂರಿನಲ್ಲಿ ಸಹಕಾರಿ ಜಾಗೃತಿ ಸಮಾವೇಶ ಆಯೋಜನೆ ಮಾಡಲು ಅಧಿಕಾರಿ ವರ್ಗದವರು ರೂಪುರೇಷೆ ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.ನಂತರ ಕಾರ್ಯಕ್ರಮ ಜರುಗುವ ಜಾಗ ಪರಿಶೀಲಿಸಿದರು.ಫೆ.೮ ರಂದು ಸಹಕಾರಿ ಕ್ಷೇತ್ರದ ಜಾಗೃತಿ ಸಮಾವೇಶ:
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಸೋಮವಾರ ಮಾತನಾಡಿದ ಅವರು, ಪ್ರತಿಯೊಬ್ಬ ರೈತರಿಗೆ ಸಹಕಾರಿ ಕ್ಷೇತ್ರದ ಕುರಿತು ಸಮರ್ಪಕವಾಗಿ ಮಾಹಿತಿ ನೀಡುವ ಮೂಲಕ ಸಹಕಾರಿ ಕ್ಷೇತ್ರವನ್ನು ಬಲಿಷ್ಠಗೊಳಿಸಲು ಎಲ್ಲರ ಸಹಕಾರ ಮುಖ್ಯ. ಸಹಕಾರಿ ಕ್ಷೇತ್ರದ ಕುರಿತು ರೈತರಿಗೆ ಮಾಹಿತಿ ಕೊರತೆಯಿಂದಾಗಿ ಸಹಕಾರಿ ಕ್ಷೇತ್ರ ಪ್ರಗತಿ ಸಾಧಿಸುವಲ್ಲಿ ಹಿಂದುಳಿದಿದ್ದು, ಅಭಿವೃದ್ಧಿ ಪಡಿಸುವ ವಿನೂತನ ಮಾದರಿಯ ಸಹಕಾರ ಕ್ಷೇತ್ರದ ಕಾರ್ಯಕ್ರಮ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಸಹಕಾರಿ ಸಂಘದ ಸಮಾವೇಶ ಏರ್ಪಡಿಸಲಾಗುತ್ತಿದೆ. ನಮ್ಮ ಸಹಕಾರಿ ಸಂಘಗಳಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು, ಅದರ ಸದುಪಯೋಗ ಪಡೆದು ವ್ಯವಸಾಯ ನಡೆಸುವ ಜೊತೆಗೆ ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಸಹಕಾರಿ ಜಾಗೃತಿ ಸಮಾವೇಶದ ಕಾರ್ಯಾಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಮಾತನಾಡಿ, ಹಿರಿಯ ಸಹಕಾರಿಗಳಿಗೆ ವಿಶೇಷವಾಗಿ ಸನ್ಮಾನ ನಡೆಯಲಿದೆ ಎಂದರು.