- ಪರಂಪರೆಯಿಂದ ಪ್ರಗತಿಯತ್ತ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ ಮೈಸೂರುಸಾಂಪ್ರದಾಯಿಕ ಬೇರುಗಳಿಲ್ಲದೆ ಆರೋಗ್ಯಕರ ರಾಷ್ಟ್ರ ನಿರ್ಮಾಣ ಅಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಅಭಿಪ್ರಾಯಪಟ್ಟರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜು ಮಾನವಿಕ ವಿಭಾಗಗಳು, ಐಕ್ಯೂಎಸಿ ಹಾಗೂ ಕಾಲೇಜಿನ ಐಕೆಎಸ್ ಸೆಲ್ ಸಹಯೋಗದಲ್ಲಿ ‘21ನೇ ಶತಮಾನದಲ್ಲಿ ಸಾಂಪ್ರದಾಯಿಕ ಜ್ಞಾನ ಪದ್ಧತಿಯ ಮರುಸ್ಥಾಪನೆ - ಪರಂಪರೆಯಿಂದ ಪ್ರಗತಿಯತ್ತ ವಿಚಾರದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಕಾಲಮಾನದಲ್ಲಿ ತಾಂತ್ರಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಜ್ಞಾನ ಮತ್ತು ನಮ್ಮ ಸಂಸ್ಕೃತಿ ಅಳಿದು ಹೋಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಅನುಭವವು ವ್ಯಕ್ತಿಯನ್ನು ಪರಿಪೂರ್ಣಗೊಳಿಸುವುದರಿಂದ ಹಿರಿಯರ ಅನುಭವವನ್ನು ಪಡೆದುಕೊಳ್ಳುವುದು ಉತ್ತಮ. ಹಳೆಯ ಕಾಲದ ಮಾಹಿತಿ ಹಾಗೂ ದತ್ತಾಂಶಗಳು ಈಗಿನ ಕಾಲಮಾನಕ್ಕೂ ಅತ್ಯಗತ್ಯವಾಗಿವೆ. ಜ್ಞಾನದೊಂದಿಗೆ ತಾಂತ್ರಿಕತೆ ಜೊತೆಗೂಡಿದರೆ ಹಲವು ಕ್ಷೇತ್ರಗಳಲ್ಲಿ ವಿಸ್ಮಯಕಾರಿ ಸಾಧನೆಗಳನ್ನು ಮಾಡಬಹುದು ಎಂದರು.ಮಹಾಜನ ಶಿಕ್ಷಣ ಸಂಸ್ಥೆಯ ಖಜಾಂಚಿ ಎಸ್.ಕೆ. ಸಂಜಯ್ ಮಾತನಾಡಿ, ಪರಂಪರೆ ಎಂಬುದು ನಮಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ನಮ್ಮ ಪರಂಪರೆ ಹಳೆಯದಲ್ಲ, ಬದಲಾಗಿ ಕಾಲಮಾನದ ಪ್ರವಾಹದಲ್ಲಿ ಅದು ಕಳೆದುಹೋಗುತ್ತಿದೆ ಅಷ್ಟೇ. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಹೊಂದಿದ್ದ ವಿಜ್ಞಾನವನ್ನು ಇತ್ತೀಚಿನ ಕೃತಕ ಬುದ್ಧಿಮತ್ತೆ ಇಂದಿಗೂ ಸಂಪೂರ್ಣವಾಗಿ ಕಂಡುಹಿಡಿಯಲು ಸಾಧ್ಯವಿಲ್ಲ ಎಂದರು.ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ಪರಂಪರೆ ಎಂದರೆ ಸಿಕ್ಕಿದ್ದನ್ನು ಹಾಗೇ ಉಳಿಸಿಕೊಳ್ಳುವುದಲ್ಲ, ಬದಲಾಗಿ ಅದರ ಆಳವಾದ ಅರ್ಥವನ್ನು ತಿಳಿದುಕೊಂಡು ಜೀವನಕ್ಕೆ ಅಳವಡಿಸಿಕೊಳ್ಳುವುದೇ ನಿಜವಾದ ಪರಂಪರೆಯಾಗಿದೆ ಎಂದರು. ಸಂಕಿರಣದ ದಿಕ್ಸೂಚಿ ಭಾಷಣಕಾರ ಹೈದರಾಬಾದ್‌ನ ಸಿಬಿಐಟಿ ಸಂಸ್ಥೆಯ ಪ್ರೊಫೆಸರ್ ಹಾಗೂ ವಿಎಕೆ ಸಂಯೋಜಕ ಡಾ.ಜಿ. ಸುರೇಶ್ ಬಾಬು ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಯುವ ಜನತೆ ಕೇವಲ ಲೈಕ್, ಶೇರ್ ಹಾಗೂ ಕಮೆಂಟ್‌ಗಳ ಅಲ್ಗಾರಿದಮ್‌ಗಳಿಗೆ ಮಾತ್ರ ಸೀಮಿತಗೊಳ್ಳುತ್ತಿದ್ದು, ನಮ್ಮ ಪ್ರಾಚೀನ ಭಾರತೀಯ ಪುರುಷಾರ್ಥಗಳ ಮೂಲಕ ಜೀವನದ ಮೂಲ ಮೌಲ್ಯಗಳನ್ನು ಮರುಸ್ಥಾಪಿಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಟಿ. ವಿಜಯಲಕ್ಷ್ಮಿ ಮುರಳೀಧರ್ ಮಾತನಾಡಿ, ಭೌತಶಾಸ್ತ್ರ ಮತ್ತು ಪರಿಸರ ಜೊತೆಗೆ ಸಾಗುವ ವೇದಾಂತ, ತತ್ವಶಾಸ್ತ್ರ ಹಾಗೂ ವಿಜ್ಞಾನಗಳೆರಡೂ ಆಧುನಿಕ ವಿಜ್ಞಾನದೊಂದಿಗೆ ಸಮಾನವಾಗಿ ನಿಲ್ಲಬಲ್ಲವು ಎಂದು ಅಭಿಪ್ರಾಯಪಟ್ಟರು.ಕಾಲೇಜಿನ ಶೈಕ್ಷಣಿಕ ಡೀನ್ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಚ್. ಶ್ರೀಧರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದಎಂ.ಎನ್. ವೆಂಕಟಲಕ್ಷ್ಮಿ, ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಕೆ. ಸೋಮಶೇಖರ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಿ. ಗೀತಾ, ಐಕೆಎಸ್ ಸೆಲ್‌ನ ಸಂಯೋಜಕರು ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ಪರಮೇಶ್ವರ ಹೆಗಡೆ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಜಿ. ಪುಷ್ಪರಾಣಿ, ಭೂಗೋಳಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಿ. ದೊಡ್ಡರಸಯ್ಯ ಮತ್ತು ಡಾ.ಸಿ.ಎಸ್. ಸಿದ್ದರಾಜು, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಎ.ಆರ್. ನಂದೀಶ, ಕಾಲೇಜಿನ ವಿವಿಧ ವಿಭಾಗಗಳ ಅಧ್ಯಾಪಕರು ಇದ್ದರು. ಎಂ.ಎನ್. ವೆಂಕಟಲಕ್ಷ್ಮಿ ಸ್ವಾಗತಿಸಿದರು. ಪರಮೇಶ್ವರ ಹೆಗಡೆ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎನ್. ಸುನಿಲ್ ನಿರೂಪಿಸಿದರು. ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಎಂ. ಸೃಜನಾ ಪ್ರಾರ್ಥಿಸಿದರು.