ಕ್ಷೇತ್ರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು, ಬಡವರಿಗೆ ಎಲ್ಲೇ ಅನ್ಯಾಯವಾದರೂ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕು. ಕ್ಷೇತ್ರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಿವೆ. ಅಂತಹ ಘಟನೆಗಳು ಎದುರಾದ ಸಂದರ್ಭದಲ್ಲಿ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಶಿಸ್ತಿನ ಸಿಪಾಯಿಗಳಂತೆ ಜೆಡಿಎಸ್ ಕಾರ್ಯಕರ್ತರು ಪಕ್ಷ ಸಂಘಟನೆ ಮಾಡಿ, ನಿಮ್ಮ ಜತೆ ಸದಾ ಇದ್ದು ಕಷ್ಟ- ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ತಾಲೂಕಿನ ಮೇಲುಕೋಟೆ ಶ್ರೀಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ವತಿಯಿಂದ ನಡೆದ ಎಸ್‌ಐಆರ್ ವಿಶೇಷ ಸಮಗ್ರ ಪರಿಷ್ಕರಣೆ ಬಿಎಲ್‌ಓ -2 ಗಳ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಸಹ ಕಳೆದ ಚುನಾವಣೆಯಲ್ಲಿ ಸೋತ ಬಳಿಕ ಮನಸ್ಸಿಗೆ ನೋವುಂಟಾಗಿತ್ತು. ರಾಜಕೀಯವೇ ಬೇಡ ಎಂಬ ಆಲೋಚನೆಯನ್ನು ಸಹ ಮಾಡಿದ್ದೆ. ಆದರೆ, ಆ ನಂತರದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನನ್ನ ಕ್ಷೇತ್ರದ ಜನತೆ 51 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಕೊಟ್ಟು ಆ ನೋವು ಮರೆಸಿದರು. ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರ ಅಭ್ಯುದಯಕ್ಕಾಗಿ ಶ್ರಮಿಸುವುದಾಗಿ ಹೇಳಿದರು.
ಪಕ್ಷದ ಕಾರ್ಯಕರ್ತರು ಸಂಘಟಿತರಾಗಬೇಕು, ನಮ್ಮೊಳಗೆ ಕಾಲು ಎಳೆದುಕೊಳ್ಳುವ ಕೆಲಸ ಮಾಡಬೇಡಿ. ನಮ್ಮವರ ಕಾಲುಗಳನ್ನು ನಾವೇ ಎಳೆಯುವ ಕೆಲಸ ಮಾಡಿದರೆ ಎದುರಾಳಿಗಳಿಗೆ ನಾವೇ ಸಹಾಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಕ್ಷೇತ್ರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು, ಬಡವರಿಗೆ ಎಲ್ಲೇ ಅನ್ಯಾಯವಾದರೂ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕು. ಕ್ಷೇತ್ರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಿವೆ. ಅಂತಹ ಘಟನೆಗಳು ಎದುರಾದ ಸಂದರ್ಭದಲ್ಲಿ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕು ಎಂದರು.
ಪಕ್ಷವನ್ನು ನಂಬಿದ ಕಾರ್ಯಕರ್ತರನ್ನು ರಕ್ಷಿಸುವುದು, ಅವರಿಗೆ ಸ್ಪಂದಿಸುವ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಎರಡು ಗ್ರಾಪಂಗಳಿಗೆ ಭೇಟಿ ಕೊಟ್ಟು ಅಲ್ಲಿಯೇ ಕಾರ್ಯಕರ್ತರೊಂದಿಗೆ ಕುಳಿತು ಚರ್ಚಿಸಲಾಗುವುದು. ನಿಮ್ಮ ಯಾವುದೇ ಕಷ್ಟ- ಕಾರ್ಪಣ್ಯಗಳು, ಸಮಸ್ಯೆಗಳು ಇದ್ದರೂ ಅಲ್ಲಿಯೇ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುವುದು ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಪಕ್ಷದ ವರಿಷ್ಠ ನಾಯಕರಾದ ದೇವೇಗೌಡರು 92ರ ಇಳಿವಯಸ್ಸಿನಲ್ಲೂ ಹೋರಾಟ ಮಾಡುತ್ತಿದ್ದಾರೆ. ಜೆಡಿಎಸ್ ನಾಯಕರನ್ನು ಸೃಷ್ಟಿ ಮಾಡುವ ಕಾರ್ಖಾನೆ ಇದ್ದಂತೆ. ಪಕ್ಷ ಬಿಟ್ಟುಹೋಗುವ ನಾಯಕರು, ಮುಖಂಡರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ನಾಯಕರು, ಮುಖಂಡರನ್ನು ಹುಟ್ಟು ಹಾಕುವ ಶಕ್ತಿ ನಮ್ಮ ಪಕ್ಷದ ಕಾರ್ಯಕರ್ತರಿಗಿದೆ. ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಎಸ್ ಐಆರ್ ಬಗ್ಗೆ ಬಿಎಲ್‌ಒ 1 ಮತ್ತು 2 ಕಾರ್ಯಕರ್ತರು ಎಚ್ಚರಿಕೆಯಿಂದಿರಿ, ನಮ್ಮ ಮತದಾರರು ಪಟ್ಟಿಯಿಂದ ಹೋಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಜೆಡಿಎಸ್ ವಕ್ತಾರ ದೇವರಾಜು ಮಾತನಾಡಿ, ಎಸ್‌ಐಆರ್ ವಿರೋಧಿಸುತ್ತಿರುವ ಕಾಂಗ್ರೆಸ್ ಹಾಗೂ ಅವರ ಮಿತ್ರಪಕ್ಷಗಳ ಆರೋಪದಲ್ಲಿ ಉರುಳಿಲ್ಲ. ಚುನಾವಣಾ ಆಯೋಗವು ಸಂವಿಧಾನ ಬದ್ಧ ಸಂಸ್ಥೆಯಾಗಿದೆ. ದೇಶದಲ್ಲಿ ಈವರೆಗೆ 8 ಬಾರಿ ಎಸ್‌ಐಆರ್ ಆಗಿದೆ. ಅದರಲ್ಲಿ ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿಯೇ 6 ಬಾರಿ ಎಸ್‌ಐಆರ್ ಆಗಿದೆ, ಆಗ ಅಧಿಕಾರ ದುರ್ಬಳಕೆ ಆಗಿಲ್ಲವೇ ಎಂದು ಕಿಡಿಕಾರಿದರು.
ಈಗಾಗಲೇ ದೇಶದ 12 ರಾಜ್ಯಗಳಲ್ಲಿ ಹಾಗೂ ಕೆಲವು ಕೇಂದ್ರಾಡಳಿತ ರಾಜ್ಯಗಳಲ್ಲಿ ಎಸ್‌ಐಆರ್ ಪೂರ್ಣಗೊಂಡಿದೆ. ನಮ್ಮ ರಾಜ್ಯದಲ್ಲಿ ಜೂನ್ 30 ರಿಂದ ಜುಲೈ 29ರವರೆಗೆ ನಡೆಯಲಿದೆ. ಪಕ್ಷ ಸಂಘಟಿಸಲು ಇದೊಂದು ಉತ್ತಮವಾದ ಅವಕಾಶವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷ ಎಸ್.ಎ.ಮಲ್ಲೇಶ್, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಸದಸ್ಯರಾದ ಸಿ.ಅಶೋಕ್, ಎಚ್.ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸಕೋಟೆ ಪುಟ್ಟಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಅನುಪಮ ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.