ಮಾಜಿ ಶಾಸಕ ಲಿಂಗೇಶ್ ಸೇರಿ 30 ಮಂದಿ ಸಿಐಡಿ ವಶಕ್ಕೆ

KannadaprabhaNewsNetwork |  
Published : Jun 20, 2026, 01:45 AM IST
ಕೊಟ್ಟೂರಿನಲ್ಲಿ ತೋಟಗಾರಿಕೆ ಇಲಾಖೆ ಕಛೇರಿ ಆರಂಭಗೊಂಡ ಒಂದು ತಿಂಗಳ ಅಂತರದಲ್ಲಿ ಬೀಗ ಜಡಿದುಕೊಂಡು ಬಂದ್ ಆಗಿರುವುದು | Kannada Prabha

ಸಾರಾಂಶ

2023 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಜಿಲ್ಲಾಧ್ಯಕ್ಷರು ಆಗಿರುವ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರು ಅಂದೇ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಮಾಜಿ ಶಾಸಕ ಲಿಂಗೇಶ್‌ಗೆ ಉರುಳಾದ ಅಕ್ರಮ ಭೂ ಮಂಜೂರಾತಿ

ಕನ್ನಡಪ್ರಭ ವಾರ್ತೆ ಬೇಲೂರು

ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರ ಅವಧಿಯಲ್ಲಿ ನಡೆದಿದ್ದ ಬಗರ್ ಹುಕ್ಕುಂ ಸಮಿತಿಯ ಮಂಜೂರಾತಿಯಲ್ಲಿ ಅಕ್ರಮವೆಸಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಿಂದ ಆಗಮಿಸಿದ್ದ ಸಿಐಡಿ ಪೊಲೀಸರ ತಂಡ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಸೇರಿದಂತೆ 30 ಮಂದಿ ಸಿಬ್ಬಂದಿಯನ್ನು ತಮ್ಮ ವಶಕ್ಕೆ ಪಡೆಯುವುದರೊಂದಿಗೆ ಸುಮಾರು ಐದು ವರ್ಷದ ಹಿಂದೆ ನಡೆದಿದ್ದ ಪ್ರಕರಣಕ್ಕೆ ಜೀವ ಬಂದಿದೆ.

2023 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಜಿಲ್ಲಾಧ್ಯಕ್ಷರು ಆಗಿರುವ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರು ಅಂದೇ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯ ಅಂದೇ ಜಮೀನು ಅರ್ಜಿ ತಿರಸ್ಕಾರಿಸಿತ್ತು. ಅಂದಿನಿಂದ ಇಂದಿನವರೆಗೆ ಅಂದರೆ ಸರಿ ಸುಮಾರು 3 ವರ್ಷಗಳ ಕಾಲ ಈ ಪ್ರಕರಣ ಹಳ್ಳ ಹಿಡಿದಿದೆ ಎಂದೇ ಭಾವಿಸಲಾಗಿತ್ತು. ಆದರೆ ಇಂದು ಬೆಳಂ ಬೆಳಗ್ಗೆ ಸಿ.ಐ.ಡಿ. ಪೊಲೀ ಸರು ದಿಡೀರ್ ದಾಳಿ ನಡೆಸಿ ಸಿಕ್ಕ ಸಿಕ್ಕ ಕಡೆ ಮಾಜಿ ಶಾಸಕರನ್ನು ಒಳಗೊಂಡಂತೆ ಅಕ್ರಮವೆಸಗಿದ್ದ ಅವಧಿಯಲ್ಲಿ ಸಹಕರಿಸಿದ್ದ ವಿ.ಎ, ರೆವಿನ್ಯೂ ಇನ್‌ಸ್ಪೆಕ್ಟರ್‌ಗಳು, ಅಂದಿನ ತಹಸೀಲ್ದಾರ್‌ಗಳು ಸೇರಿ ಬರೋಬರಿ 30 ಮಂದಿಯನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆಂದು ಹೇಳಲಾಗಿದೆ.

ಇಂದು ಬೆಳಗ್ಗೆ ಸುಮಾರು 5 ಗಂಟೆ ಸಮಯದಲ್ಲಿ ಲಿಂಗೇಶ್ ಅವರ ನಿವೇಶನಕ್ಕೆ ತೆರಳಿದ ಸಿ.ಐ.ಡಿ ಅಧಿಕಾರಿಗಳ ತಂಡ ಮೊದಲು ಅವರನ್ನು ತಮ್ಮ ವಶಕ್ಕೆ ಪಡೆದಿದೆ. ಬಳಿಕ 30 ಮಂದಿ ಸಿಬ್ಬಂದಿಗಳನ್ನು ತಲಾಷ್ ಮಾಡಿ ಅವರುಗಳನ್ನು ಸಹ ತಮ್ಮ ವಶಕ್ಕೆ ಪಡೆದಿದೆ. ವಶಕ್ಕೆ ಪಡೆದ ಕೆಲ ಸಿಬ್ಬಂದಿಯಲ್ಲಿ ನಿವೃತ್ತ ಅಧಿಕಾರಿಗಳು ಸಹ ಸೇರ್ಪಡೆ ಯಾಗಿದ್ದಾರೆಂದು ಹೇಳಲಾಗಿದೆ.

ಪ್ರಕರಣದ ಹಿನ್ನಲೆ:

ಸರ್ಕಾರದ ನಿಯಮಾನು ಸಾರ ಯಾವುದೇ ಪುರಸಭಾ ವ್ಯಾಪ್ತಿಯಿಂದ ಮೂರು ಕಿಲೋಮೀಟರ್ ವ್ಯಾಪ್ತಿ ಒಳಗೆ ಸರ್ಕಾರಿ ಜಮೀನನ್ನು ಯಾರಿಗೂ ಮಂಜೂರು ಮಾಡಲು ಅವಕಾಶವಿಲ್ಲ. ಆದರೆ ಕೆ.ಎಸ್. ಲಿಂಗೇಶ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಬೇಲೂರು ಪುರಸಭಾ ವ್ಯಾಪ್ತಿಯಿಂದ ಕೂಗಳತೆಯಲ್ಲಿರುವ ಮಾವಿನಕೆರೆ, ಬಂಟೇನಹಳ್ಳಿ, ಡಣಾಯಕನಹಳ್ಳಿ, ಮುದಿಗೆರೆ, ರಾಯಪುರ, ಸೇರಿದಂತೆ ಸುತ್ತಮುತ್ತಲಿನ ಮೌಲ್ಯಯುತ ಸರ್ಕಾರಿ ಭೂಮಿಯನ್ನು ಬಗರ್ ಹುಕುಂ ಅಡಿಯಲ್ಲಿ ಮಂಜೂರಾತಿ ಮಾಡಿ ಸಾಗುವಳಿ ಚೀಟಿ ನೀಡಿ ಖಾತೆ ಸೃಷ್ಠಿಸಲಾಗಿತ್ತು.

ಈ ಸಂಬಂಧ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಸೇರಿದಂತೆ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ (ಹಿಂದಿನ ಐಪಿಸಿ ಸೆಕ್ಷನ್‌ಗಳಾದ 420, 464, 465, 468, 471, 409, ಹಾಗೂ 120 (ಬಿ)) ಪ್ರಕರಣ ದಾಖಲಾಗಿತ್ತು. ಕಳೆದ ಮೂರು ವರ್ಷ ಗಳಿಂದ ಈ ಈ ಪ್ರಕರಣ ಹಿಡಿದಂತೆ ಭಾಸವಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಆರೋಪಿತರಾಗಿದ್ದ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇಂದು ಸಿ.ಐ.ಡಿ ಅಧಿಕಾರಿಗಳ ದೊಡ್ಡ ತಂಡವೇ ಕಾರ್ಯೋ ನ್ಮುಖವಾಗಿದ್ದು ಮಾಜಿ ಶಾಸಕರು ಸೇರಿ 30 ಮಂದಿಯನ್ನು ವಶಕ್ಕೆ ಪಡೆದಿದೆ.

ಡಿವೈಎಸ್‌ಪಿ ನೇತೃತ್ವದಲ್ಲಿ 9 ತಂಡ ಇಂದು ಬೆಳ್ಳಂ ಬೆಳಗ್ಗೆಯಿಂದ ಡಿವೈಎಸ್‌ಪಿ ನೇತೃತ್ವದ 9 ತಂಡಗಳು ರಚನೆ ಯಾಗಿದ್ದು 60 ಕ್ಕೂ ಹೆಚ್ಚು ಮಂದಿ ಪೊಲೀಸರು ಕಾರ್ಯಚರಣೆಯಲ್ಲಿ ಭಾಗಿಯಾಗಿ ದ್ದಾರೆಂದು ಹೇಳಲಾಗಿದೆ.

ಅರ್ಹರಿಗಿಂತ ಅನರ್ಹರಿಗೆ ಮಂಜೂರಾಗಿದ್ದ ಭೂಮಿ:

ಬಗರ್ ಹುಕುಂ ಸಮಿತಿಗೆ ಭೂಮಿ ಮಂಜೂರಾತಿ ಕೋರಿ ಹಲವರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಭೂಮಿ ಉಳ್ಳವರು, ಬಲಾಢ್ಯರು, ಶ್ರೀಮಂತರು ಸೇರಿದಂತೆ ಭೂಮಿಯೇ ಇಲ್ಲದೆ ಬದುಕು ಸಾಗಿಸುತ್ತಿದ್ದವರು, ಅಬಲರಾದಿಯಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಬಗರ್ ಹುಕುಂ ಸಮಿತಿಯಲ್ಲಿ ಉಳ್ಳವರಿಗೆ, ಬಲಾಢ್ಯರಿಗೆ ಮಾತ್ರ ಭೂ ಮಂಜೂರಾತಿ ದೊರೆಯುವಲ್ಲಿ ಸಮಿತಿ ಕಾರ್ಯನಿರ್ವಹಿಸಿ ಬೆಂಗಳೂರು ಮೂಲದವರಿಗೆ ಮಂಜೂರಾಗಿತ್ತು.

ಇನ್ನು ವಿಪರ್ಯಾಸವೆಂದರೆ ಬೆಂಗಳೂರು ಮೂಲದ ಹಲವರಿಗೆ ಭೂಮಿ ಮಂಜೂರಾಗಿತ್ತು. ನಕಲಿ ದಾಖಲೆ ಸೃಷ್ಠಿಸಿ ಬೆಂಗಳೂರು ಮೂಲದ ಹಲವರಿಗೆ ಭೂ ಮಂಜೂರಾತಿ ಮಾಡಲಾಗಿತ್ತು. ಇದೆಲ್ಲವನ್ನು ಆರ್.ಟಿ.ಐ ಕಾರ್ಯಕರ್ತ ಕೋಲಾರದ ಕೆ.ಸಿ. ರಾಜಣ್ಣ ಹೊರತೆಗೆದು ಇವರುಗಳ ಮೇಲೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ದೂರಿನಲ್ಲಿ ಸುಮಾರು 2750 ಎಕರೆ ಸರ್ಕಾರಿ ಜಮೀನನ್ನು ನಕಲಿ ದಾಖಲೆಗಳ ಆಧಾರದ ಮೇಲೆ 1430 ಬೋಗಸ್ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜುಲೈ 15ರೊಳಗೆ ಇಲಾಖೆಗಳ ಕ್ರಿಯಾ ಯೋಜನಾ ವರದಿ ಸಲ್ಲಿಸಿ
ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆ ಹತ್ಯೆ: ಕಿವಿ ಸಮೇತ ಓಲೆ ಕಿತ್ತು ಪರಾರಿ