ಚುನಾವಣೆಗೆ ಪರಿಷತ್ ಫಲಿತಾಂಶವೇ ದಿಕ್ಸೂಚಿ: ಶ್ರೇಯಸ್ ಪಟೇಲ್‌

KannadaprabhaNewsNetwork |  
Published : Jun 20, 2026, 01:45 AM IST
19ಎಚ್ಎಸ್ಎನ್10 :  | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ, ಜನಪರ ಯೋಜನೆಗಳು ಹಾಗೂ ನಾಯಕತ್ವವನ್ನು ಮೆಚ್ಚಿಯೇ ಈ ಫಲಿತಾಂಶ ಬಂದಿದೆ.

ಕೆ.ಎಸ್. ಲಿಂಗೇಶ್ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ । ಟೀಕೆಗೆ ಸಂಸದ ಶ್ರೇಯಸ್ ಪಟೇಲ್‌ ತಿರುಗೇಟು

ಕನ್ನಡಪ್ರಭ ವಾರ್ತೆ ಹಾಸನ

ಇತ್ತೀಚೆಗೆ ಪ್ರಕಟವಾದ ವಿಧಾನ ಪರಿಷತ್ ಚುನಾವಣೆ ಫಲಿತಾಂಶವು ಕೇವಲ ಒಂದು ಚುನಾವಣೆಯ ಗೆಲುವಲ್ಲ, ಅದು ಮುಂದಿನ ೨೦೨೮ರ ವಿಧಾನಸಭೆ ಚುನಾವಣೆಯ ರಾಜಕೀಯ ದಿಕ್ಸೂಚಿಯಾಗಿದೆ ಎಂದು ಸಂಸದ ಶ್ರೇಯಸ್ ಪಟೇಲ್‌ ಹೇಳಿದರು. ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ಸಂಸದರು ರೋಗಿಗಳಿಗೆ ಹಣ್ಣು-ಹಂಪಲು ಹಂಚಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ, ಜನಪರ ಯೋಜನೆಗಳು ಹಾಗೂ ನಾಯಕತ್ವವನ್ನು ಮೆಚ್ಚಿಯೇ ಈ ಫಲಿತಾಂಶ ಬಂದಿದೆ. ಇದು ಕೇವಲ ಟ್ರೈಲರ್ ಮಾತ್ರ. ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಮತ್ತೆ ಸರ್ಕಾರ ರಚಿಸಲಿದೆ ಎಂಬುದಕ್ಕೆ ಈ ಫಲಿತಾಂಶವೇ ಮುನ್ಸೂಚನೆ ಎಂದು ಹೇಳಿದರು.

ಶ್ವೇತಪತ್ರ ಹೊರಡಿಸಲಿ:ಈ ಸಂದರ್ಭದಲ್ಲಿ ಬೇಲೂರಿನ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರ ಟೀಕೆಗಳಿಗೆ ತಿರುಗೇಟು ನೀಡಿದ ಶ್ರೇಯಸ್ ಪಟೇಲ್, ೨೦೧೮ ರಿಂದ ೨೦೨೩ರವರೆಗೆ ಬೇಲೂರು ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಅವರು ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ಮೊದಲು ಶ್ವೇತಪತ್ರ ಹೊರಡಿಸಲಿ. ಅದರ ನಂತರ ನನ್ನ ಬಗ್ಗೆ ಮಾತನಾಡಿದರೆ ಸೂಕ್ತ ಎಂದು ಸವಾಲು ಹಾಕಿದರು.

ಕೇಂದ್ರದಿಂದ ಅನುದಾನ ತರುವುದು ಎಷ್ಟು ಕಷ್ಟ ಎಂಬುದು ನಮಗೆ ಗೊತ್ತಿದೆ. ಅದಕ್ಕಾಗಿ ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ನಾನು ಪತ್ರಗಳನ್ನು ತೋರಿಸಿ ಅಥವಾ ಪೋಸ್ ಕೊಟ್ಟು ರಾಜಕೀಯ ಮಾಡುವ ಅಗತ್ಯವಿಲ್ಲ. ಜನರು ನನ್ನ ಮೇಲೆ ವಿಶ್ವಾಸವಿಟ್ಟು ಆಶೀರ್ವಾದ ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಭಗವಂತ ಮೆಚ್ಚುವ ರೀತಿಯಲ್ಲಿ ಆಡಳಿತ ನಡೆಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.

ಮಾಜಿ ಶಾಸಕರು ತಮ್ಮ ವಿರುದ್ಧ ಮಾಡಿರುವ ಟೀಕೆಗಳನ್ನು ಆಶೀರ್ವಾದವಾಗಿಯೇ ಸ್ವೀಕರಿಸುತ್ತೇನೆ ಎಂದು ಹೇಳಿದ ಅವರು, ಹಿರಿಯ ರಾಜಕಾರಣಿಗಳು ಮತ್ತೊಬ್ಬರ ಬಗ್ಗೆ ಚುಚ್ಚುವ ರೀತಿಯಲ್ಲಿ ಮಾತನಾಡುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಅದು ಅವರ ವ್ಯಕ್ತಿತ್ವವನ್ನೇ ಪ್ರತಿಬಿಂಬಿಸುತ್ತದೆ. ಅವರು ನಮ್ಮ ಮಾರ್ಗದರ್ಶಕರಾಗಬೇಕು ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ಬಿ.ಪಿ. ಮಂಜೇಗೌಡ, ಬನವಾಸೆ ರಂಗಸ್ವಾಮಿ, ರವೀಶ್, ರಂಜಿತ್ ಗೊರೂರು, ರಾಮಚಂದ್ರ, ತಾರಚಂದನ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜುಲೈ 15ರೊಳಗೆ ಇಲಾಖೆಗಳ ಕ್ರಿಯಾ ಯೋಜನಾ ವರದಿ ಸಲ್ಲಿಸಿ
ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆ ಹತ್ಯೆ: ಕಿವಿ ಸಮೇತ ಓಲೆ ಕಿತ್ತು ಪರಾರಿ