ಕೆಲವು ದಿನಗಳಿಂದ ಚಿರತೆ ದಾಳಿಯಿಂದ ಕರುಗಳು, ಶ್ವಾನಗಳು ಬಲಿಯಾಗುತ್ತಿದ್ದು, ಸಂಜೆ ಸಮಯದಲ್ಲಿ ಗ್ರಾಮಸ್ಥರು ಜೀವಭಯದಿಂದ ಮನೆಯಿಂದ ಹೊರಬರಲಾರದೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಾಗದೇ ಪರಿತಪಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರತಾಲೂಕಿನ ಟಿ.ಮಾಯಗೋಡನಹಳ್ಳಿಯಲ್ಲಿ ಮಂಗಳವಾರ ಸಂಜೆ ದಿಲೀಪ್ ಎಂಬುವರ ೩ ಕರುಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಗಡಿಗ್ರಾಮವಾದ ಉಪ್ಪಾರಕೊಪ್ಪಲಿನಲ್ಲಿ ಬೇರೊಂದು ಚಿರತೆ ಹಸುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಗಂಜಲಗೂಡಿನಲ್ಲಿ ಮಲ್ಲೇಶ್ ಎಂಬುವರು ಮನೆ ಮುಂದೆ ಕುಳಿತಿರುವಾಗ ಚಿರತೆ ಓಡಿ ಹೋಗಿದನ್ನು ಜತೆಗೆ ಗ್ರಾಮಸ್ಥರು ಓಡಾಡಿದನ್ನು ಕಂಡು ಭಯಭೀತರಾಗಿದ್ದಾರೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೆಲವು ದಿನಗಳಿಂದ ಚಿರತೆ ದಾಳಿಯಿಂದ ಕರುಗಳು, ಶ್ವಾನಗಳು ಬಲಿಯಾಗುತ್ತಿದ್ದು, ಸಂಜೆ ಸಮಯದಲ್ಲಿ ಗ್ರಾಮಸ್ಥರು ಜೀವಭಯದಿಂದ ಮನೆಯಿಂದ ಹೊರಬರಲಾರದೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಾಗದೇ ಪರಿತಪಿಸುತ್ತಿದ್ದಾರೆ. ಜೂನ್ ೫ರ ಶುಕ್ರವಾರ ಬೆಳಗ್ಗೆ ಅಂಕವಳ್ಳಿ ಹಾಗೂ ಬುವನಹಳ್ಳಿಯ ಸಮೀಪ ಚಿರತೆ ದಾಳಿಯಿಂದ ಐದು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಅರಣ್ಯ ಇಲಾಖೆಯವರು ಒಂದು ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಆದರೆ ಮೂರ್ನಾಲ್ಕು ಕಿ.ಮೀ. ಅಂತರದಲ್ಲಿ ಇರುವ ಉಪ್ಪಾರಕೊಪ್ಪಲು, ಗಂಜಲಗೂಡು, ಬೂವನಹಳ್ಳಿ, ಅಂಕವಳ್ಳಿ, ಚಿಕ್ಕಬ್ಯಾಗತಹಳ್ಳಿ, ಗಂಗೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಚಿರತೆ ದಾಳಿ ಹಾಗೂ ಗ್ರಾಮಗಳಲ್ಲಿ ನಿರ್ಭಯವಾಗಿ ಓಡಾಡುತ್ತಿರುವ ಸುದ್ದಿ ಕಾಡ್ಗಿಚ್ಚಿನಂತೆ ಗ್ರಾಮಗಳಲ್ಲಿ ಪಸರಿಸಿ, ಮುಂಗಾರು ಮಳೆ ಪ್ರಾರಂಭಗೊಂಡು ರೈತರ ಮೊಗದಲ್ಲಿ ಹರ್ಷ ಉಂಟಾಗಿದ್ದರೂ. ಚಿರತೆಗೆ ಹೆದರಿ ಜೀವಭಯದಿಂದ ಮನೆಯಿಂದ ಹೊರಬರಲಾರದೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಆಗದೇ ಪರಿತಪಿಸುತ್ತಿದ್ದಾರೆ. ಜಿಲ್ಲಾಡಳಿತ ತುರ್ತು ಕ್ರಮಕೈಗೊಂಡು ಚಿರತೆ ಸೆರೆಗೆ ಮುಂದಾಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.