ಶಾಲಾ, ಕಾಲೇಜುಗಳಲ್ಲಿ ರಂಗಭೂಮಿ ಚಟುವಟಿಕೆ ಆಯೋಜಿಸಿ

KannadaprabhaNewsNetwork |  
Published : Apr 30, 2025, 12:32 AM IST
ಬಳ್ಳಾರಿಯ ಶ್ರೀಮತಿ ಗಾಲಿ ರುಕ್ಮಿಣಮ್ಮ ಚಿಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಜರುಗಿದ ಪ್ರೊ.ಎನ್.ಶಾಂತನಾಯ್ಕರ ಕಾವ್ಯದಲ್ಲಿ ದಲಿತರ ಮತ್ತು ಬುಡಕಟ್ಟು ಸಮುದಾಯಗಳ ತಳಮಳಗಳು ಕುರಿತ ವಿಚಾರ ಸಂಕಿರಣಕ್ಕೆ ಕಲಬುರಗಿಯ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಬಯಲಾಟ, ನಾಟಕ, ತೊಗಲುಗೊಂಬೆ ಸೇರಿದಂತೆ ನಾನಾ ಕಲಾ ಪ್ರಕಾರಗಳು ಮುಂದಿನ ಪೀಳಿಗೆಗೆ ತಲುಪಬೇಕು

ಬಳ್ಳಾರಿ: ಶಾಲಾ ಮತ್ತು ಕಾಲೇಜುಗಳಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ಆಯೋಜಿಸುವಂತೆ ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಸಲಹೆ ನೀಡಿದರು.

ರಂಗ ಜಂಗಮ ಸಂಸ್ಥೆ (ರಿ) ಡಿ ಕಗ್ಗಲ್, ಗಾಲಿ ರುಕ್ಮಿಣಮ್ಮ ಚಿಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹಾಗೂ ಆದಿವಾಸಿ ಸಾಹಿತ್ಯ ಕಲೆ ಮತ್ತು ಸಂಶೋಧನಾ ಟ್ರಸ್ಟ್ ಸಹಯೋಗದಲ್ಲಿ ಜರುಗಿದ ಪ್ರೊ. ಎನ್.ಶಾಂತನಾಯ್ಕರ ಕಾವ್ಯದಲ್ಲಿ ದಲಿತರ ಮತ್ತು ಬುಡಕಟ್ಟು ಸಮುದಾಯಗಳ ತಳಮಳಗಳು ಕುರಿತ ವಿಚಾರ ಸಂಕಿರಣದ ಉಪನ್ಯಾಸ ಮಾಲಿಕೆ-1 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಯಲಾಟ, ನಾಟಕ, ತೊಗಲುಗೊಂಬೆ ಸೇರಿದಂತೆ ನಾನಾ ಕಲಾ ಪ್ರಕಾರಗಳು ಮುಂದಿನ ಪೀಳಿಗೆಗೆ ತಲುಪಬೇಕು. ಯುವಕರು ರಂಗಭೂಮಿ ಹಾಗೂ ಸಂಗೀತ ಕಲಿಕೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಹೀಗಾಗಿ ಕಾಲೇಜಿನ ಉಪನ್ಯಾಸಕರು ಮಕ್ಕಳಿಗೆ ರಂಗಾಸಕ್ತಿ ಮೂಡಿಸುವುದು ಬಹಳ ಅಗತ್ಯವಿದೆ. ರಂಗಭೂಮಿಯ ಮಹತ್ವದ ಕುರಿತು ಮಕ್ಕಳಿಗೆ ತಿಳಿವಳಿಕೆ ಮೂಡಿಸುವ ಕೆಲಸವೂ ಆಗಬೇಕು ಎಂದು ತಿಳಿಸಿದರು.

ಲೇಖಕ ಶಾಂತನಾಯ್ಕ ಅವರ ಕಥೆ, ಕವನ, ಸಾಹಿತ್ಯ, ನಾಟಕ, ಹಾಡು, ಗಜಲ್ ಈ ಎಲ್ಲವುಗಳನ್ನು ಪುಸ್ತಕ ರೂಪದಲ್ಲಿ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಈ ರೀತಿಯ ಪುಸ್ತಕ ವಿದ್ಯಾರ್ಥಿಗಳಿಗೆ ಓದಲು ನೀಡಬೇಕು.ವಿದ್ಯಾರ್ಥಿಗಳಲ್ಲಿ ಪಠ್ಯದ ಹೊರತಾಗಿ ಇತರೆ ಓದುವಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಡಾ. ದೇವರಿಂಟಿ ಸುಧಾಕರ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಸೌಕರ್ಯ ಕಲ್ಪಿಸಿಕೊಡಲಾಗಿದೆ. ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಮಾತ್ರ ಜೀವನದ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾಳೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಸೋಮಶೇಖರ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಎನ್ ಶಾಂತನಾಯ್ಕ ಆ ದಿನಗಳ ಮಾತು ಈಗೇಕೆ ಕವನ ಸಂಕಲನ ಕುರಿತು ಡಾ. ಆರನಕಟ್ಟೆ ರಂಗನಾಥ ವಿಶೇಷ ಉಪನ್ಯಾಸ ನೀಡಿದರು. ಉಪನ್ಯಾಸಕ ಡಾ. ಬಸವರಾಜ, ವಿಷ್ಣು ಹಡಪದ ಹಾಗೂ ವಿದ್ಯಾರ್ಥಿಗಳಾದ ವೇದಾಂತ್ ಹಾಗೂ ಪಾರ್ವತಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದ ಸಂಚಾಲಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಜಿ. ಕಾಳಿಂಗ, ಕನ್ನಡ ವಿಭಾಗದ ಉಪನ್ಯಾಸಕ ಗಿರಿರಾಜಪ್ಪ, ಎಚ್. ಹುಲಿಕುಂಟೇಶ್ವರ, ಹನುಮಂತಪ್ಪ, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್