ಬ್ಯಾಡಗಿ: ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಆಡಳಿತಾರೂಢ ಸರಕಾರಗಳ ವಿರುದ್ಧ ಸಂಘಟಿತರಾಗಿ ಬೃಹತ್ ಚಳವಳಿ ರೂಪಿಸಿ, ಹೋರಾಟದ ಮೂಲಕ ಗೆಲುವು ಸಾಧಿಸಬೇಕಾಗಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾಧ್ಯಕ್ಷ ಎಸ್.ಬಸವರಾಜ ಕರೆ ನೀಡಿದರು.
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷಾ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದ ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಗಳು ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಿಸುವುದು ಆದ್ಯ ಕರ್ತವ್ಯವಾಗಿದೆ ಎಂದರು.
ದೇಶದಲ್ಲಿಯೇ ಬ್ಯಾಡಗಿ ಮೆಣಸಿನಕಾಯಿಗೆ ವಿಶೇಷ ಹೆಸರು ಮತ್ತು ಖ್ಯಾತಿಯಿದೆ. ಇಂತಹ ಪಟ್ಟಣದಲ್ಲಿ ಶಿಕ್ಷಣ ಹಾಗೂ ಕೃಷಿಗೆ ಪೂರಕವಾದ ಸಂಶೋಧನಾ ಕೇಂದ್ರಗಳು ಸ್ಥಾಪನೆಯಾಗಬೇಕು. ವಿದ್ಯಾರ್ಥಿ ಮತ್ತು ಯುವಜನರು ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯ ಕುರಿತು ಅರಿವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ವಿದ್ಯಾರ್ಥಿಗಳ ಸಮಸ್ಯೆಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಸಿದ ಅವರು, ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಕೈಬಿಡುವಂತೆ ಆಗ್ರಹಿಸಿದರು.
ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ: ಸಮ್ಮೇಳನದ ಅಂಗವಾಗಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಿಂದ ಬಸ್ ನಿಲ್ದಾಣದ ಮಾರ್ಗವಾಗಿ ಪಟ್ಟಣದ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಗಳು ಬೃಹತ್ ಮೆರವಣಿಗೆ ನಡೆಸಿದರು. ವಿದ್ಯಾರ್ಥಿಗಳ ಹಕ್ಕೊತ್ತಾಯಗಳ ಪರ ಘೋಷಣೆಗಳನ್ನು ಕೂಗಿದರು. ನಂತರ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಮಾವಣೆ ಗೊಂಡ ವಿದ್ಯಾರ್ಥಿಗಳು ಎಸ್‌ಎಫ್‌ಐ ಶ್ವೇತ ಪತಾಕೆಯ ಧ್ವಜಾರೋಹಣ ನೆರವೇರಿಸಿ, ಹುತಾತ್ಮ ಸ್ತಂಭಕ್ಕೆ ಪುಷ್ಪನಮನ ಸಲ್ಲಿಸಿದರು.