ದಲಿತ ಉದ್ದಿಮೆದಾರರ ಬೇಡಿಕೆಗೆ ಸಂಘಟಿತ ಹೋರಾಟ

KannadaprabhaNewsNetwork |  
Published : Dec 18, 2025, 12:45 AM IST
ಬೆಳಗಾವಿಯಲ್ಲಿ ಮಂಗಳವಾರ ರಾತ್ರಿ ಖಾಸಗಿ ಹೊಟೇಲಿನಲ್ಲಿ ನಡೆದ ದಲಿತ ಉದ್ದಿಮೆದಾರರ ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ಸಚಿವರಾದ ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಶಾಸಕರು ಭಾಗವಹಿಸಿರುವುದು. | Kannada Prabha

ಸಾರಾಂಶ

ಪಜಾ, ಪಪಂ ಮೀಸಲಾತಿ ಅನ್ವಯ ಕೆಐಡಿಬಿ ತನ್ನ ನಿವೇಶನಗಳಲ್ಲಿ ಶೇ. 24.1 ಮೀಸಲಾತಿ ನೀಡುತ್ತಿಲ್ಲ. ನಮಗೆ ಹಂಚಿಕೆಯಾದ ನಿವೇಶನಗಳೂ ಪ್ರಯೋಜನಕ್ಕೆ ಬಾರದಂತೆ ಇರುತ್ತವೆ. ಹಂಚಿಕೆಯಾದ 3 ವರ್ಷದಲ್ಲಿ ಉದ್ದಿಮೆ ಆರಂಭಿಸದಿದ್ದರೆ ನೂರಾರು ಕಿರಿಕಿರಿ ನೀಡುತ್ತದೆ.

ಬೆಳಗಾವಿ:

ನಿವೇಶನ, ಸಬ್ಸಿಡಿ, ಸಾಲ, ಉದ್ಯಮ ಅವಕಾಶದಲ್ಲಿ ಮೀಸಲು ಕುರಿತಂತೆ ದಲಿತ ಉದ್ದಿಮೆದಾರರ ಬಹುದಿನದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಚಿವರು, ಶಾಸಕರು ಮತ್ತು ಉದ್ದಿಮೆದಾರರು ಸೇರಿ ಸಂಘಟಿತ ಹೋರಾಟ ಮಾಡಲು ಮಂಗಳವಾರ ರಾತ್ರಿ ಖಾಸಗಿ ಹೊಟೇಲ್‌ನಲ್ಲಿ ನಡೆದ ''''ಕರ್ನಾಟಕ ದಲಿತ ಉದ್ದಿಮೆದಾರರ ಸಂಘ''''ದ ಸಭೆಯಲ್ಲಿ ನಿರ್ಧರಿಸಲಾಯಿತು.

ಇದೇ ಮೊದಲ ಬಾರಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಂಘದ ಈ ಸಭೆಯಲ್ಲಿ ಭಾಗವಹಿಸಿದ್ದ ಸಚಿವರಾದ ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಮೇಲ್ಮನೆ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೇರಿದಂತೆ 32 ಜನ ಮೂರೂ ಪಕ್ಷಗಳ ದಲಿತ ಶಾಸಕರು ದಲಿತ ಉದ್ದಿಮೆದಾರರ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿ ಸಂಘಟಿತರಾಗಿ ಮುಖ್ಯಮಂತ್ರಿಗಳ ಮುಂದೆ ಹಕ್ಕು ಮಂಡಿಸಲು ತಮ್ಮ ಸಮ್ಮತಿ ಸೂಚಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ, ರಾಜ್ಯಸಭೆಯ ಮಾಜಿ ಸದಸ್ಯ ಡಾ. ಎಲ್. ಹನುಮಂತಯ್ಯ ಮತ್ತು ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್, ಪಜಾ, ಪಪಂ ಮೀಸಲಾತಿ ಅನ್ವಯ ಕೆಐಡಿಬಿ ತನ್ನ ನಿವೇಶನಗಳಲ್ಲಿ ಶೇ. 24.1 ಮೀಸಲಾತಿ ನೀಡುತ್ತಿಲ್ಲ. ನಮಗೆ ಹಂಚಿಕೆಯಾದ ನಿವೇಶನಗಳೂ ಪ್ರಯೋಜನಕ್ಕೆ ಬಾರದಂತೆ ಇರುತ್ತವೆ. ಹಂಚಿಕೆಯಾದ 3 ವರ್ಷದಲ್ಲಿ ಉದ್ದಿಮೆ ಆರಂಭಿಸದಿದ್ದರೆ ನೂರಾರು ಕಿರಿಕಿರಿ ನೀಡುತ್ತದೆ. ಬ್ಯಾಕ್ಲಾಗ್ 280 ಸೈಟ್ ನೀಡಿಲ್ಲ, ಶೇ. 75ರ ಸಬ್ಸಿಡಿ ಅನ್ವಯ ಪಡೆದ ನಿವೇಶನಗಳಿಗೆ ರಾಜ್ಯ ಸರ್ಕಾರ ₹ 1 ಸಾವಿರ ಕೋಟಿ ಬಾಕಿ ಉಳಿಸಿದ್ದರಿಂದ ಕೆಐಎಡಿಬಿ ದಲಿತರಿಗೆ ನಿವೇಶನ ನೀಡಲು ಮೀನಮೇಷ ಮಾಡುತ್ತಿದೆ. ಬೃಹತ್ ಉದ್ಯಮಗಳಿಗೆ ನೀಡುವ ಹತ್ತಾರು ಎಕರೆ ಭೂಮಿ ಹಂಚಿಕೆಯಲ್ಲಿ ಮೀಸಲಾತಿ ಪಾಲಿಸುತ್ತಿಲ್ಲ, ಕೆಎಸ್ಎಫ್‌ಸಿ ಶೇ. 4 ಬಡ್ಡಿದರದ ಸಾಲ ಮರುಪಾವತಿಯಲ್ಲಿ 3 ಕಂತು ಬಾಕಿ ಉಳಿಸಿದರೆ ಶೇ. 4 ಬಡ್ಡಿ ದರ ರದ್ದುಗೊಳಿಸುತ್ತಿದೆ. ವಿವಿಧ ಸಬ್ಸಿಡಿ ಯೋಜನೆಗಳಿಗೆ ಹಣವೇ ಇಲ್ಲ. ಈ ಎಲ್ಲ ಸಮಸ್ಯೆಯಿಂದಾಗಿ ಉದ್ದಿಮೆ ಆರಂಭಿಸುವ ಹಂಬಲ ಹೊಂದಿದವರು ನಿರಾಸಕ್ತರಾಗುತ್ತಿದ್ದಾರೆ ಎಂದು ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ನಾನು ಕೇಂದ್ರ ಸರ್ಕಾರದ ಕೈಗಾರಿಕೆ ಸಚಿವನಾಗಿದ್ದಾಗ ದೇಶಾದ್ಯಂತ 1 ಲಕ್ಷ ದಲಿತರು ಹೊಸ ಉದ್ದಿಮೆಗಳನ್ನು ಸ್ಥಾಪಿಸುವಂತೆ ನೋಡಿಕೊಂಡಿದ್ದೆ. ದಲಿತರ ಉದ್ದಾರ ಎಂದರೆ ಬರೀ ಹಸು, ಎಮ್ಮೆ, ಕೋಳಿ ಕೊಡಿಸುವುದಲ್ಲ.

ಉದ್ದಿಮೆದಾರರನ್ನಾಗಿ ಮಾಡಿದರೆ, ಸ್ವಾವಲಂಬಿ ಜೀವನ ಸಾಗಿಸುವ ಜತೆಗೆ ಮತ್ತೊಬ್ಬರಿಗೆ ಉದ್ಯೋಗ ನೀಡುತ್ತಾರೆ. ಕೆಎಸ್ಎಫ್‌ಸಿ ಸಮಸ್ಯೆ ಬಗೆಹರಿಸಬೇಕು. ದಲಿತರು ಆಸಕ್ತಿಯಿಂದ ಉದ್ದಿಮೆ ಸ್ಥಾಪಿಸುವಂತ ವಾತಾವರಣ ಸೃಷ್ಟಿಸಲು ನಾವೆಲ್ಲ ಸೇರಿ ಮುಖ್ಯಮಂತ್ರಿ ಬಳಿ ನೀಯೋಗ ಹೋಗೋಣ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೈಗಾರಿಕೆ, ಸಮಾಜಕಲ್ಯಾಣ ಸಚಿವರ ಸಭೆ ನಡೆಸಿ ಈ ಸಮಸ್ಯೆಗಳನ್ನೆಲ್ಲ ಪರಿಹರಿಸಬೇಕಿದೆ. ಆ ದಿಸೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸರ್ಕಾರವನ್ನು ಕೇಳೋಣ ಎಂದರು.

ಸಚಿವ ಆರ್.ಬಿ. ತಿಮ್ಮಾಪುರ ಅವರು, ಸರ್ಕಾರ ದಲಿತರ ಏಳ್ಗೆಗೆ ಮೀಸಲಿಟ್ಟ ಹಣ ಸಬ್ದಳಕೆ ಆಗುತ್ತಿಲ್ಲ. ನಾವೆಲ್ಲ ಒಂದಾಗಿ ಸಂಬಂಧಿಸಿದ ಇಲಾಖೆಗಳ ಸಚಿವರಿಗೆ ಮನವರಿಕೆ ಮಾಡುವುದು ಅಗತ್ಯವಿದೆ. ಸರ್ಕಾರವೇ ಮುಂದಾಗಿ ದಲಿತರ ಉದ್ದಿಮೆಗಳಲ್ಲಿ ಬೇರೆ ಬೇರೆ ಕಂಪೆನಿಳನ್ನು ಹೂಡಿಕೆ ಮಾಡಿಸಬೇಕು. ಅಂದಾಗ ಮಾತ್ರ ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಪೈಪೋಟಿ ಒಡ್ಡಲು ಸಾಧ್ಯವಾಗುತ್ತದೆ. ಅದೇ ಕಾಲಕ್ಕೆ ಸರ್ಕಾರದ ಸೌಲಭ್ಯಗಳು ದುರುಪಯೋಗ ಆಗದಂತೆ ಎಚ್ಚರ ವಹಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ದಲಿತ ಉದ್ದಿಮೆದಾರರ ಬೆನ್ನಿಗೆ ನಿಲ್ಲಲು ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ದಲಿತ ಸಚಿವರು, ಶಾಸಕರು ಒಗ್ಗೂಡಿಸುವುದು ಆಶಾದಾಯಕ ಬೆಳವಣಿಗೆ ಆಗಿದೆ. ಸಾವಿರಾರು ವರ್ಷಗಳ ಕಾಲ ಮತ್ತೊಬ್ಬರ ಕೈಯಲ್ಲಿ ದುಡಿಯುತ್ತ ಬಂದಿರುವ ದಲಿತರು ಸ್ವಾತಂತ್ರ್ಯಾನಂತರ ದಲಿತರು ಉದ್ಯಮ ಆರಂಭಿಸುತ್ತಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಿಎಂ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಇಲಾಖೆಗಳ ಸಚಿವರು, ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸೋಣ. ವಿಭಾಗವಾರು ಮತ್ತು ಜಿಲ್ಲಾ ಮಟ್ಟದಲ್ಲಿ ದಲಿತ ಉದ್ದಿಮೆದಾರರ ಸಮಾಲೋಚನ ಸಭೆ ಸಡೆಸುವ ಜತೆಗೆ ದಲಿತ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಕೆಲಸವೂ ಆಗಬೇಕಿದೆ. ದಲಿತರು ಉದ್ದಿಮೆಗಳ ಜತೆಗೆ ಶಿಕ್ಷಣ ಸಂಸ್ಥೆ, ಬ್ಯಾಂಕುಗಳನ್ನೂ ಸ್ಥಾಪಿಸಬೇಕು. ಬರೀ ಕೈಗಾರಿಕೆ ಇಲಾಖೆ ಸಮಸ್ಯೆ ಮಾತ್ರವಲ್ಲ, ಎಲ್ಲ ಇಲಾಖೆಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ, ತಾರತಮ್ಯ ಪತ್ತೆಹಚ್ಚಿ ಅವುಗಳನ್ನೂ ಸರಿಪಡಿಸಬೇಕಿದೆ ಎಂದರು.

ಮುಂದಿನ ಸಮಾಲೋಚನಾ ಸಭೆಯನ್ನು ಮೈಸೂರಿನಲ್ಲಿ ಆಯೋಜಿಸಲು ವಿಪ ಸದಸ್ಯ ಕೆ. ಶಿವಕುಮಾರ ಆಹ್ವಾನ ನೀಡಿದರು. ಶಾಸಕರಾದ ಚಲವಾದಿ ನಾರಾಯಣಸ್ವಾಮಿ, ವಿ.ಡಿ. ಕೃಷ್ಣಮೂರ್ತಿ, ಸುಧಾಮದಾಸ್, ಶಾರದಾ ಪೂರಿನಾಯ್ಕ ಮತ್ತಿತರರು ಮಾತನಾಡಿದರು. ಶಾಸಕರಾದ ಎಫ್.ಎಚ್. ಜಕ್ಕಪ್ಪನವರ, ವಸಂತಕುಮಾರ, ರಘುಮೂರ್ತಿ ಸೇರಿದಂತೆ ಹಲವು ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿ ರಾಜ್ಯದ ಮೊದಲ ಜೆನ್‌-ಝಿ ಅಂಚೇ ಕಚೇರಿ!
ರಾಜಭವನ ಹೆಸರು ಬದಲು ಅಸಾಧ್ಯ: ಸಿಎಂ