ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಕ್ಕಳಲ್ಲಿ ದೇಶದ ಇತಿಹಾಸ, ಪರಂಪರೆಗಳ ಹಾಗೂ ಸಂಸ್ಕೃತಿಗಳ ಮಹತ್ವದ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.ನವನಗರದ ಕಲಾಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪ್ರಾಚ್ಯಪ್ರಜ್ಞೆ ರಾಜ್ಯಮಟ್ಟದ ಸ್ಪರ್ಧೆ ಮತ್ತು ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ವಿಶ್ವದ ಅನೇಕ ದೇಶದ ಜನರು ಇಲ್ಲಿನ ಪಾರಂಪರಿಕ ತಾಣಗಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ನಾಗರಿಕತೆ ಬೆಳೆದಂತೆಲ್ಲ ಅಂಗೈಯಲ್ಲಿ ವಿಶ್ವವನ್ನೇ ನೋಡುವಂತಾಗಿದೆ ಎಂದು ಹೇಳಿದರು.
ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಬಾಗಲಕೋಟೆ ಅನೇಕ ಐತಿಹಾಸಿಕ ತಾಣಗಳನ್ನು ಹೊಂದಿದೆ. ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸುವಂತೆ ಪ್ರವಾಸೋದ್ಯಮ ಬೆಳೆಯುವಂತೆ ಮಾಡಬೇಕಿದೆ. ಬೇರೆ ದೇಶಗಳಲ್ಲಿ ಪ್ರವಾಸೋದ್ಯಮಗಳ ಮೇಲೆ ಅವಲಂಬಿತವಾಗಿವೆ. ನಮ್ಮಲ್ಲಿರುವ ಪ್ರವಾಸಿ ತಾಣಗಳಲ್ಲಿ ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಬೇಕಿದೆ. ಮೂಲ ಸೌಕರ್ಯ ಒದಗಿಸಬೇಕಿದೆ. ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಪ್ರವಾಸಿ ತಾಣಗಳ ಪ್ರವಾಸ ಕೈಗೊಂಡು ಅವುಗಳ ರಕ್ಷಣೆಗೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಪ್ರವಾಸಿ ತಾಣಗಳ ಮಹತ್ವ ತಿಳಿಸುವ ನಿಟ್ಟಿನಲ್ಲಿ ಪ್ರಾಚ್ಯಪ್ರಜ್ಞೆ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಮಹತ್ವದ ಕೆಲಸಲಾಗಿದೆ ಎಂದರು.ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ ನಿಮ್ಮ ಬದುಕಿಗೆ ಅಮೂಲ್ಯವಾದ ಅನುಭವ ಎಂದು ಭಾವಿಸಿ ಸರ್ಕಾರ ಯಾವ ಉದ್ದೇಶಕ್ಕೆ ಮಾಡಿದೆ. ಅದನ್ನು ಸುತ್ತಮುತ್ತಲಿನ ಜನಕ್ಕೆ ಪ್ರಸರಿಸುವಂತಹ ಪ್ರಯತ್ನ ನಿವೆಲ್ಲರೂ ಸಹ ಮಾಡಬೇಕು. ನೀವೆಲ್ಲ ಇಲಾಖೆಯ ರಾಯಭಾರಿಯಾಗಿ ಕೆಲಸ ಮಾಡಬೇಕಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಮೂರು ವರ್ಗದವರು ಪಾರಂಪರಿಕ ಮತ್ತು ಪ್ರವಾಸೋದ್ಯಮ ಇಲಾಖೆಯ ಸದಾಶಯಗಳನ್ನು ನಿಮ್ಮ ಮೂಲಕ ಸಾರ್ವಜನಿಕರಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ. ಮೇಟಿ ಮಾತನಾಡಿ, ನಮ್ಮ ಸಂಸ್ಕೃತಿ, ಪರಂಪರೆ ಉಳಿಸು ಬೆಳೆಸುವ ಕಾರ್ಯವಾಗಬೇಕು ಎಂದರು. ಜಿಪಂ ಸಿಇಒ ಶಶಿಧರ ಕುರೇರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ. ನಂದನೂರ, ಪುರಾತತ್ವ ಇಲಾಖೆಯ ಆಯುಕ್ತ ದೇವರಾಜ ಎ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಿ.ಎಸ್. ಹಿತ್ತಲಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ:
ಪ್ರಾಚ್ಯಪ್ರಜ್ಞೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಶಾಸಕ ಜೆ.ಟಿ. ಪಾಟೀಲ, ಎಚ್.ವೈ.ಮೇಟಿ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ವಿತರಿಸಿದರು.ಪ್ರಬಂಧ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆಯ ದಿವ್ಯಶ್ರೀ ಪಾಟೀಲ (ಪ್ರಥಮ), ಸಂಗೀತಾ ನಾಗಠಾಣ (ದ್ವಿತೀಯ), ಗದಗ ಜಿಲ್ಲೆಯ ಮುಸ್ಕಾನ್ ಅಮೀನ್ನಾಯಕ್ (ತೃತೀಯ), ರಸಪ್ರಶ್ನೆ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ಅಕ್ಷತ ಎಚ್.ವಿ (ಪ್ರಥಮ), ಚಿತ್ರದುರ್ಗ ಜಿಲ್ಲೆಯ ಪ್ರೀತಂ ಟಿ.ಎಂ (ದ್ವಿತೀಯ), ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹರ್ಷಿತ ಭಟ್ (ಪ್ರಥಮ), ಬೆಂಗಳೂರು ಉತ್ತರ ಜಿಲ್ಲೆಯ ಮಾನಸಿ ರಾವ್ (ದ್ವಿತೀಯ), ಉತ್ತರ ಕನ್ನಡ ಜಿಲ್ಲೆಯ ಪಾವನಿ ಶ್ರೀಧರ ನಾಯ್ಕ (ತೃತೀಯ), ಭಾಷಣ ಸ್ಪರ್ಧೆಯಲ್ಲಿ ಶಿರಶಿಯ ಸ್ಪಂದನ ಭಟ್ (ಪ್ರಥಮ), ಬೆಂಗಳೂರಿನ ಜಯಶ್ರೀ ಎಂ.ಸಿ., (ದ್ವಿತೀಯ) ಹಾಗೂ ಬೆಳಗಾವಿಯ ಲಕ್ಷ್ಮೀ ವಾಳಕಿ (ತೃತೀಯ) ಸ್ಥಾನ ಪಡೆದಿದ್ದಾರೆ.