ಕನ್ನಡಪ್ರಭ ವಾರ್ತೆ ಮಂಗಳೂರು
ನಾಡಿನ ವಿವಿಧ ಕಡೆಗಳಿಂದ, ಹೊರ ರಾಜ್ಯಗಳಿಂದಲೂ ಗೆಡ್ಡೆ ಗೆಣಸು, ಸೊಪ್ಪುಗಳ ರಾಶಿಯೇ ಬಂದಿದೆ. ಸುಮಾರು 48ಕ್ಕೂ ಅಧಿಕ ಸ್ಟಾಲ್‌ಗಳು ಬಂದಿದ್ದು, ಉದ್ಘಾಟನಾ ಸಮಾರಂಭಕ್ಕೂ ಮೊದಲೇ ಬೆಳಗ್ಗಿನಿಂದಲೇ ಸ್ಟಾಲ್‌ಗಳಲ್ಲಿ ಮಾರುದ್ದದ ಸಾಲಿನಲ್ಲಿ ಗೆಡ್ಡೆ ಗೆಣಸು, ಸೊಪ್ಪುಗಳನ್ನು ಖರೀದಿಸುತ್ತಿದ್ದರು. ಕೆಲವು ಸ್ಟಾಲ್‌ಗಳಲ್ಲಿ ಮಧ್ಯಾಹ್ನ ವೇಳೆಗೆ ಹೆಚ್ಚಿನ ಗೆಡ್ಡೆಗೆಣಸು, ಸೊಪ್ಪು, ತರಕಾರಿಗಳು ಮಾರಾಟವಾಗಿದ್ದವು. ಗೆಡ್ಡೆಗೆಣಸು, ಸೊಪ್ಪುಗಳದ್ದೇ ಕಾರುಭಾರು:
ಬೃಹತ್ ಗಾತ್ರದ ಕೆಸುವು ಎಲೆ ಬೆಳೆಸಿ ಗಿನ್ನೆಸ್ ದಾಖಲೆ ಮಾಡಿದ ಕೇರಳದ ಜೋಸೆಫ್ ರೆಜಿ ಅವರು ವಿವಿಧ ಬಗೆಯ ಗೆಡ್ಡೆಗೆಣಸು ತಂದಿದ್ದರು. ಅಲ್ಲದೆ ಸುಮಾರು 200ಕ್ಕೂ ಅಧಿಕ ಗೆಡ್ಡೆಗೆಣಸು ಬೆಳೆದು ಟ್ಯೂಬರ್ ಆಫ್ ಕೇರಳ ಎಂಬ ಹೆಗ್ಗಳಿಕೆ ಪಡೆದ ವಯನಾಡ್‌ನ ಶಾಜಿ ಅವರ ಗೆಡ್ಡೆಗೆಣಸುಗಳಲ್ಲದೆ ಇಂಡೋನೇಷಿಯಾ ವಿಶೇಷ ಬಾಳೆ, ಸಿಹಿ ಗೆಡ್ಡೆ ಗೆಣಸು, ವಿವಿಧ ತಳಿಯ ಶುದ್ಧ ಅರಸಿನ, ಕಾಡುಜೇನನ್ನೂ ಪ್ರದರ್ಶನಕ್ಕೆ ತಂದಿದ್ದರು. ಅಪರೂಪದ ಮುಂಡ್ಲಿ ಹೆಸರಿನ ಗೆಡ್ಡೆ ಗೆಣಸು ಬೆಳೆದು ಸಂರಕ್ಷಿಸಿ ಕೇಂದ್ರದಿಂದ 10 ಲಕ್ಷ ರು.ಗಳ ಪುರಸ್ಕಾರ ಪಡೆದ ಜೋಯಿಡಾ ತಾಲೂಕಿನ ಕಂದಮೂಲ ಬೆಳೆಗಾರರ ಕುಣಬಿ ಸಮಾಜ ಅಭಿವೃದ್ಧಿ ಸಂಘದ ಗೆಡ್ಡೆ ಗೆಣಸು ಮೇಳದ ಪ್ರಮುಖ ಆಕರ್ಷಣೆಯಾಗಿತ್ತು.ಇದಲ್ಲದೆ ಬಗೆಬಗೆಯ ಗೆಡ್ಡೆಗೆಣಸಿನ ತಿಸಿಸು, ತರಹೇವಾರಿ ಸೊಪ್ಪುಗಳು, ಸಾವಯವ ಪದಾರ್ಥಗಳು, ನೈಸರ್ಗಿಕ ಆಹಾರ, ಸಾವಯವ ಬಳಸಿದ ಬಗೆಯ ಬಗೆಯ ಐಸ್‌ಕ್ರೀಮ್, ನವಧಾನ್ಯಗಳ ಆಹಾರ ಹೀಗೆ ಅನೇಕ ಬಗೆಯ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಗೊಳಿಸಲಾಗಿತ್ತು.
ಇಂದು ಭಾನುವಾರ ಕೂಡ ಈ ಮೇಳ ನಡೆಯಲಿದ್ದು, ಸಂಜೆ ವೇಳೆಗೆ ಸಮಾರೋಪಗೊಳ್ಳಲಿದೆ.