ಅಕ್ರಮ ಕಲ್ಲು ಗಣಿಗಾರಿಕೆ ದಂಡಕ್ಕೆ ಒಟಿಎಸ್‌?

KannadaprabhaNewsNetwork |  
Published : Feb 12, 2026, 02:00 AM IST
ಅಕ್ರಮ ಕಲ್ಲು ಗಣಿಗಾರಿಕೆ  | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆ ನಡೆಯಲಿದ್ದು, ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನರಾಯಪಟ್ಟಣ ಹೋಬಳಿಯ ರೈತರ 1,777 ಎಕರೆ ಭೂಮಿಯನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ ಎಂದು ಮಾಡಿರುವ ಘೋಷಣೆಯ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆ ನಡೆಯಲಿದ್ದು, ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನರಾಯಪಟ್ಟಣ ಹೋಬಳಿಯ ರೈತರ 1,777 ಎಕರೆ ಭೂಮಿಯನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ ಎಂದು ಮಾಡಿರುವ ಘೋಷಣೆಯ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ.

ಇದಲ್ಲದೆ, ರಾಜ್ಯಾದ್ಯಂತ ಕಳೆದ ಕೆಲ ವರ್ಷಗಳಿಂದ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ಕಲ್ಲು ಕ್ವಾರಿಗಳಿಗೆ ವಿಧಿಸಿರುವ ಸುಮಾರು 6000 ಕೋಟಿ ರು.ಗಳಿಗೂ ಹೆಚ್ಚು ದಂಡವನ್ನು ಒನ್‌ ಟೈಮ್‌ ಸೆಟ್ಲ್‌ಮೆಂಟ್‌(ಒಟಿಎಸ್‌) ಅಡಿ ವಸೂಲಿ ಮಾಡಲು ನಿಯಮಾವಳಿ ಬದಲಾವಣೆ ಮಾಡಿ ಹೊಸ ಮಾರ್ಗಸೂಚಿಗೆ ಅನುಮೋದನೆ ಪಡೆಯುವ ವಿಚಾರ ಕೂಡ ಸಂಪುಟದ ಮುಂದೆ ಬರಲಿದೆ.

ದೇವನಹಳ್ಳಿಯ ಏರೋಸ್ಟೇಸ್‌ ಪಾರ್ಕ್‌ಗೆ ಮೀಸಲಿಟ್ಟಿದ್ದ 1,777 ಎಕರೆ ಜಮೀನು ನೀಡಲು ಚನ್ನರಾಯಪಟ್ಟಣ ಹೋಬಳಿಯ ರೈತರು ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದ್ದರಿಂದ ಸರ್ಕಾರ ಕೈಬಿಟ್ಟು ಇದನ್ನು ಶಾಶ್ವತ ವಿಶೇಷ ಕೃಷಿ ವಲಯ ಎಂದು ಘೋಷಿಸಿತ್ತು. ಇದರಿಂದ ರೈತರು ತಮ್ಮ ಭೂಮಿ ಮಾರಾಟ ಮಾಡುವ ಹಕ್ಕು ಕಳೆದುಕೊಳ್ಳುತ್ತಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ, ಸರ್ಕಾರ ಭೂಮಿ ಮಾರಾಟದ ಹಕ್ಕು ಮೊಟಕಾಗುವುದಿಲ್ಲ. ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್‌ಗೆ ದುರುಪಯೋಗ ಆಗುವುದನ್ನು ತಡೆಗಟ್ಟುವುದು ಮತ್ತು ಡೆವಲಪರ್‌ಗಳು ರೈತರನ್ನು ಶೋಷಿಸುವುದನ್ನು ತಡೆಯುವುದು ಅಧಿಸೂಚನೆಯ ಹಿಂದಿನ ಉದ್ದೇಶವಾಗಿದೆ ಎಂದು ಸ್ಪಷ್ಟನೆ ನೀಡಿತ್ತು. ಆದರೆ, ಇದೀಗ ಶಾಶ್ವತ ವಿಶೇಷ ಕೃಷಿ ವಲಯ ಎನ್ನುವುದನ್ನೇ ಬದಲಾವಣೆ ಮಾಡುವ ವಿಚಾರವನ್ನು ಸರ್ಕಾರ ಸಂಪುಟದ ಮುಂದೆ ತರುತ್ತಿದೆ. ಟರ್ಫ್‌ ಕ್ಲಬ್‌ಗೆ ಕುಣಿಗಲ್‌ ಬಳಿ 110 ಎಕರೆ ಭೂಮಿ:

ಬೆಂಗಳೂರು ಟರ್ಫ್‌ಕಲ್ಬ್‌ಗೆ ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಸ್ಟಡ್‌ ಫಾರಂನಲ್ಲಿ ಒಟ್ಟು 110 ಎಕರೆ 20 ಗುಂಟೆ ಜಮೀನು ಗುತ್ತಿಗೆ ನೀಡುವ ವಿಚಾರವೂ ಸಚಿವ ಸಂಪುಟ ಸಭೆ ಮುಂದೆ ಚರ್ಚೆಗೆ ಬರಲಿದೆ. ಈ ಭೂಮಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆಗೆ ಸೇರಿದ್ದಾಗಿದ್ದು, ಯಾವ ಕಾರಣಕ್ಕೆ ಈ ಭೂಮಿ ನೀಡಲಾಗುತ್ತಿದೆ. ಹೊಸ ಟರ್ಫ್‌ ಕ್ಲಬ್‌ ಸ್ಥಾಪನೆಗಾ ಅಥವಾ ಬೆಂಗಳೂರಿನ ಟರ್ಪ್‌ ಕ್ಲಬ್‌ ಅನ್ನು ಸ್ಥಳಾಂತರಿಸುವುದಕ್ಕಾ ಎನ್ನುವುದು ಖಚಿತವಾಗಿಲ್ಲ. ಎಸ್‌ಐಆರ್‌ ವಿಚಾರ ಚರ್ಚೆಗೆ:

ಇನ್ನು, ಕೇಂದ್ರ ಚುನಾವಣಾ ಆಯೋಗವು ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ನಡೆಸಲುದ್ದೇಶಿಸಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ವಿಚಾರ ಸಂಪುಟದಲ್ಲಿ ಚರ್ಚೆಗೆ ಬರಲಿದೆ. ಈ ಬಗ್ಗೆ ಸಂಪುಟ ಮಾಹಿತಿ ಪಡೆಯಲಿದ್ದು ಸಾಧಕ-ಬಾಧಕಗಳ ಚರ್ಚೆಯಾಗಲಿದೆ ಎಂದು ತಿಳಿದು ಬಂದಿದೆ.

ಇದಲ್ಲದೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 15.34 ಕೋಟಿ ರು. ಅನುದಾನದಲ್ಲಿ ಬೀದರ್‌, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟುವ ಎಚ್‌ಪಿವಿ ಲಸಿಕೆ ಖರೀದಿಸುವುದು, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಟಿಬಿ ಆಸ್ಪತ್ರೆ ಆವರಣದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ 200 ಹಾಸಿಗೆ ಸಾಮರ್ಥ್ಯದ ಕ್ಯಾನ್ಸರ್‌ ಆಸ್ಪತ್ರೆಯನ್ನು 30.59 ಕೋಟಿ ರು. ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ಪಡೆಯುವುದು ಸೇರಿ ಇನ್ನು ಹಲವು ವಿಷಯಗಳು ಸಂಪುಟದ ಮುಂದೆ ಬರಲಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿನಾಯಿಗಳ ಕೊರಳಲ್ಲಿ ದೇವರಾಜೇಗೌಡ ಫೋಟೋ
ಸರ್ಕಾರಿ ಶಾಲೆಗಳು ಅಭಿವೃದ್ಧಿಯಾದರೆ ಗ್ರಾಮ ಅಭಿವೃದ್ಧಿ