ತರೀಕೆರೆ: ಕುಂದುಕೊರತೆ ನಿವಾರಿಸಲು ಸಾರ್ವಜನಿಕರ ಸೇವೆಗಾಗಿ ನಮ್ಮ ವಕೀಲರ ಬಳಗ ಸ್ಥಾಪಿಸಲಾಗಿದೆ ಎಂದು ಹಿರಿಯ ವಕೀಲ ಕೆ.ಎಲ್.ಲಿಂಗರಾಜು ಹೇಳಿದ್ದಾರೆ.
ಮಂಗಳವಾರ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಥಾಪಿತ ವಾಗಿರುವ ನಮ್ಮ ವಕೀಲರ ಬಳಗಕ್ಕೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದರು. ನಮ್ಮ ವಕೀಲರ ಬಳಗದಿಂದ ಎಲ್ಲ ಹಳ್ಳಿಗಳಲ್ಲಿ ಕಾನೂನು ಅರಿವು ಕುರಿತು ತಜ್ಞರಿಂದ ಸಭೆಗಳನ್ನು ಆಯೋಜಿಸಲಾಗುವುದು. ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳಲ್ಲಿ ವಿಳಂಬವಾಗದಂತೆ ಶೀಘ್ರ ಅಗತ್ಯವಿರುವ ದಾಖಲೆ ನೀಡಲು ಬಳಗ ಸಹಕರಿಸುವುದು. ಪ್ಲಾಸ್ಟಿಕ್ ನಿಷೇದ, ಸ್ವಚ್ಛತೆ ಬಗ್ಗೆ ಅರಿವು, ಪರಿಸರ ರಕ್ಷಣೆ ಇತ್ಯಾದಿ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಸಂಘಟಿಸಲಾಗುವುದು ಎಂದು ಹೇಳಿದರು.ವಕೀಲ ಬಿ.ಪಿ.ವಿಕಾಸ್ ಮಾತನಾಡಿ, ಸಮಾನ ಮನಸ್ಕರು ಒಂದುಗೂಡಿ ನಮ್ಮ ವಕೀಲರ ಬಳಗವನ್ನು ಸಂಘಟಿಸಲಾಗಿದೆ, ವಕೀಲರ ಬಳಗಕ್ಕೆ ಸರ್ವರ ಸಹಕಾರ ಇದೆ. ಕಾನೂನು ಅರಿವು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು, ಭ್ರಷ್ಟಾಚಾರ ರಹಿತವಾಗಿ ಸಾರ್ವಜನಿಕರ ಕುಂದು ಕೊರತೆ ನಿವಾರಿಸುವುದು, ಪರಿಸರ ರಕ್ಷಣೆ, ಪ್ರಾಣಿಸಂಕುಲ ರಕ್ಷಣೆ, ಊರಿನ ಕೆರೆಗಳ ಸಂರಕ್ಷಣೆ, ಶಾಲಾ ಕಾಲೇಜುಗಳಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಸಂಘಟಿಸುವುದು, ನಾಗರಿಕರ ಹಕ್ಕು ರಕ್ಷಣೆ, ವಿದ್ಯಾರ್ಥಿಗಳ ಹಿತರಕ್ಷಣೆಗೆ ನಮ್ಮ ವಕೀಲರ ಬಳಗ ಸ್ಥಾಪಿಸಲಾಗಿದೆ ಎಲ್ಲರೂ ಸಹಕರಿಸಬೇಕೆಂದು ಹೇಳಿದರು.
ಹಿರಿಯ ವಕೀಲ ಎಂ.ಕೆ.ತೇಜಮೂರ್ತಿ ಮಾತನಾಡಿ ವಕೀಲರಿಗೆ ಸಾರ್ವಜನಿಕ ಸಂಪರ್ಕ ಹೆಚ್ಚು ಇರುತ್ತದೆ. ನಮ್ಮ ವಕೀಲರ ಬಳಗ ಮಾದರಿ ಸಂಘವಾಗಬೇಕು. ಎಲ್ಲರ ಸಲಹೆಯನ್ನು ಸ್ವೀಕರಿಸಲಾಗುತ್ತದೆ. ನಮ್ಮ ವಕೀಲರ ಬಳಗ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುವ ಮೂಲಕ ಹೆಸರು ಗಳಿಸಲಿ ಎಂದು ಹೇಳಿದರು.ಹಿರಿಯ ವಕೀಲ ಎಸ್.ಸುರೇಶ್ ಚಂದ್ರ ಮಾತನಾಡಿ, ಬಳಗದಿಂದ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ಪರಿಣಾಮಕಾರಿಯಾಗಿ ಸಾಮಾಜಿಕ ಕಾರ್ಯ ನಿರ್ವಹಿಸಲಾಗುತ್ತದೆ. ಒಗ್ಗಟ್ಟಿನಿಂದ ಎಲ್ಲರೂ ಬಳಗದಲ್ಲಿ ಸೇರಿ ಉತ್ತಮ ಸಾಮಾಜಿಕ ಸೇವೆ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು.
ವಕೀಲ ಎಸ್.ರಜನೀಶ್ ಮಾತನಾಡಿದರು. ನಮ್ಮ ವಕೀಲರ ಬಳಗಕ್ಕೆ ಎಂ.ಕೆ.ತೇಜಮೂರ್ತಿ (ಕಾನೂನು ಸಲಹಗಾರರು) ಬಿ.ಟಿ.ಕೆಂಚಪ್ಪ ಗೌರವ ಅಧ್ಯಕ್ಷರು, ಎಸ್.ಸುರೇಶ್ ಚಂದ್ರ (ಅಧ್ಯಕ್ಷರು) ಕೆ.ಚಂದ್ರಪ್ಪ, ಟಿ.ಡಿ.ಆನಂದ್ (ಉಪಾಧ್ಯಕ್ಷರು) ಎಸ್. ರಜನೀಶ್ (ಕಾರ್ಯಾಧ್ಯಕ್ಷ ಎ.ನವೀನ್ ಕುಮಾರ್ (ಕಾರ್ಯದರ್ಶಿ) ಶ್ರೀನಿವಾಸ್ ಎಸ್.ಎಂ.(ಸಹ ಕಾರ್ಯದರ್ಶಿ) ಬಿ.ಪಿ. ವಿಕಾಸ್ (ಸಂಘಟನಾ ಕಾರ್ಯದರ್ಶಿ) ವಸಂತ್ ಕೆ.ಎಸ್. (ಸಾಂಸ್ಕೃತಿಕ ಕಾರ್ಯದರ್ಶಿ) ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.