ಗಡಿ ಕನ್ನಡಿಗರ ಸಮಸ್ಯೆಗೆ ನಮ್ಮ ಸರ್ಕಾರವೂ ಕಾರಣ

KannadaprabhaNewsNetwork | Published : Dec 29, 2023 1:32 AM

ಸಾರಾಂಶ

ಗಡಿ ಕನ್ನಡಿಗರ ಸಮಸ್ಯೆಗೆ ಇದುವರೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿರುವುದಕ್ಕೆ ಮಹಾರಾಷ್ಟ್ರದಷ್ಟೇ ಕರ್ನಾಟಕದ ಸರ್ಕಾರಗಳೂ ಕಾರಣವಾಗಿವೆ

ಕನ್ನಡಪ್ರಭ ವಾರ್ತೆ ಹಾವೇರಿ

ಗಡಿ ಕನ್ನಡಿಗರ ಸಮಸ್ಯೆಗೆ ಇದುವರೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿರುವುದಕ್ಕೆ ಮಹಾರಾಷ್ಟ್ರದಷ್ಟೇ ಕರ್ನಾಟಕದ ಸರ್ಕಾರಗಳೂ ಕಾರಣವಾಗಿವೆ ಎಂದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಹೇಳಿದರು.

ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಗಡಿ ಕನ್ನಡಿಗರ ತಲ್ಲಣಗಳ ಕುರಿತು ಅವರು ಮಾತನಾಡಿದರು.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿಗರನ್ನು ಓಲೈಸುವ ಕಾರ್ಯವನ್ನು ಎಲ್ಲ ಪಕ್ಷದ ರಾಜಕಾರಣಿಗಳೂ ಮಾಡುತ್ತ ಬಂದಿದ್ದಾರೆ. ಇದರಿಂದಾಗಿ ಸಾಕಷ್ಟು ಕನ್ನಡಪರ ಹೋರಾಟಗಳ ಮಧ್ಯೆಯೂ ಮರಾಠಿಗರ ಪ್ರಾಬಲ್ಯ ಇನ್ನೂ ಕುಗ್ಗಿಲ್ಲ ಎಂದು ವಿಷಾದಿಸಿದರು.

ಬೆಳಗಾವಿಯಲ್ಲಿ ನಿರ್ಮಿರ್ಸಿರುವ ಸುವರ್ಣ ಸೌಧ ಕೇವಲ ವರ್ಷಕ್ಕೊಮ್ಮೆ ಒಂದು ವಾರ ವಿಧಾನಸಭೆ ಕಲಾಪಗಳನ್ನು ನಡೆಸಲು ಸೀಮಿತವಾಗಿದೆ. ಸರ್ಕಾರದ ಪ್ರಮುಖ ಆಡಳಿತ ಕಚೇರಿಗಳು ಅಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ಅನೇಕ ಕನ್ನಡಪರ ಹೋರಾಟಗಾರರು, ಸಾಹಿತಿಗಳು ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಸಮಾಜದ ಏಳಿಗೆಗಾಗಿ ದುಡಿಯುವ ರೈತರು, ಯೋಧರು, ಶಿಕ್ಷಕರು, ಸಾರಿಗೆ ಸಿಬ್ಬಂದಿ ಸೇರಿದಂತೆ ಎಲ್ಲ ವರ್ಗದ ಕಾರ್ಮಿಕರ ಶ್ರಮವನ್ನು ನಾವು ಗೌರವಿಸಬೇಕು. ಪ್ರಾಮಾಣಿಕ ಹೋರಾಟಗಾರರನ್ನು ಬೆಂಬಲಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಖಾನಾಪುರದ ಗಡಿಕನ್ನಡ ಹೋರಾಟಗಾರ ಜಗದೀಶ ಹೊಸಮನಿ ಗಡಿ ಭಾಗದ ಕನ್ನಡ ಶಾಲೆಗಳ ಸ್ಥಿತಿಗತಿ ಕುರಿತು ಬೆಳಕು ಚೆಲ್ಲಿದರು.

ಹಾವೇರಿ ವಿವಿ ಕುಲಸಚಿವ ಡಾ. ಎಸ್.ಟಿ. ಬಾಗಲಕೋಟಿ, ಮೌಲ್ಯಮಾಪನ ಕುಲಸಚಿವೆ ಡಾ. ವಿಜಯಲಕ್ಷ್ಮೀ ತೀರ್ಲಾಪೂರ, ಆಡಳಿತಾಧಿಕಾರಿ ಡಾ. ಎಚ್.ವೈ. ಪ್ರಶಾಂತ, ಸಾಹಿತಿ ಸತೀಶ ಕುಲಕರ್ಣಿ, ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್. ಬೇವಿನಮರದ ಇದ್ದರು. ೨೮ಎಚ್‌ವಿಆರ್೫- ಹಾವೇರಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಾಯಿತು.

Share this article