ಆಲಮಟ್ಟಿ ಎತ್ತರಿಸಲು ನಮ್ಮ ಸರ್ಕಾರ ಬದ್ಧ

KannadaprabhaNewsNetwork |  
Published : Mar 02, 2026, 03:15 AM IST
1 ಆಲಮಟ್ಟಿ 2: | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ಅನುಷ್ಠಾನ ಮುಂದೂಡದೇ ಮುಂಬರುವ ಎರಡ್ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ಅನುಷ್ಠಾನ ಮುಂದೂಡದೇ ಮುಂಬರುವ ಎರಡ್ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ಜಲಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲ ನಿಗಮದ ಸಹಯೋಗದಲ್ಲಿ ಭಾನುವಾರ ಆಲಮಟ್ಟಿಯಲ್ಲಿ ನಿರ್ಮಾಣವಾದ ಜಲ ಮನೋರಂಜನಾ ಉದ್ಯಾನ ಉದ್ಘಾಟಿಸಿ ಅವರು ಮಾತನಾಡಿದರು. ಆಲಮಟ್ಟಿ ಅಣೆಕಟ್ಟನ್ನು 524 ಮೀಟರ್‌ವರೆಗೆ ಎತ್ತರಿಸಲು ಸರ್ಕಾರ ಬದ್ಧವಾಗಿದೆ. ಜಲಾಶಯವನ್ನು ಎತ್ತರಿಸುವುದರಿಂದ 75 ಸಾವಿರ ಎಕರೆ ಭೂಮಿ ಮುಳುಗಡೆಯಾಗುತ್ತದೆ. 20 ಹಳ್ಳಿಗಳು ಸ್ಥಳಾಂತರಗೊಳ್ಳುತ್ತವೆ. ಈ ಬೃಹತ್ ಯೋಜನೆ ಅನುಷ್ಠಾನಕ್ಕೆ ದೊಡ್ಡ ಪ್ರಮಾಣದ ಅನುದಾನ ಬೇಕು. ಇದನ್ನು ಅವಳಿ ಜಿಲ್ಲೆಯ ಜನಪ್ರತಿನಿಧಿಗಳೆಲ್ಲ ಸೇರಿ, ಸಚಿವ ಸಂಪುಟದಲ್ಲಿ ಮನವರಿಕೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಈ ಯೋಜನೆ ಮುಂದೂಡಲು ಅಗಲ್ಲ ಎಂಬ ಬೇಡಿಕೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾಗಿ ತಿಳಿಸಿದರು.

ಜಲಾಶಯದ ಎತ್ತರ ಹೆಚ್ಚಿಸಲು ಪ್ರಥಮ ಆದ್ಯತೆ ನೀಡುವ ಮೂಲಕ ನಮ್ಮ ಪಾಲಿನ ಶೇ.90ರಷ್ಟು ನೀರನ್ನು ನಮ್ಮ ರೈತರಿಗೆ ಒದಗಿಸಲಾಗುವುದು. ಕೇವಲ 3 ವರ್ಷಗಳ ಗಡುವಿನಲ್ಲಿ ಈ ಭಾಗದ ಭೂಮಿ ಹಾಗೂ ಕಾಲುವೆಗೆ ನೀರು ಪೂರೈಸಲು ನಾವೆಲ್ಲ ಐತಿಹಾಸಿಕ ನಿರ್ಣಯ ಕೈಗೊಂಡಿದ್ದೇವೆ. ಆಲಮಟ್ಟಿ ಅಣೆಕಟ್ಟು ರಾಜ್ಯದಲ್ಲೇ ದೊಡ್ಡ ಜಲಾಶಯ. ಈ ಜಲಾಶಯದ ಎತ್ತರ ಹೆಚ್ಚಿಸಿದರೆ, ಈಗಿರುವ 130 ಟಿಎಂಸಿ ಬದಲಿಗೆ 233 ಟಿಎಂಸಿ ನೀರು ಸಂಗ್ರಹವಾಗುತ್ತದೆ. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರು 2 ಲಕ್ಷ ಹೆಕ್ಟೇರ್ ಭೂಮಿ ಕಳೆದುಕೊಂಡಿದ್ದಾರೆ. ಬ್ರಿಜೇಶ್‌ಕುಮಾರ ತೀರ್ಪಿನ ಅನ್ವಯ 6 ಲಕ್ಷ ಹೆಕ್ಟೇರ್ ನೀರಾವರಿಯಾಗಲು ಸಾಧ್ಯವಾಗುತ್ತದೆ. 90 ಟಿಎಂಸಿಯಷ್ಟು ನೀರು ಬರುವ ಮೂಲಕ 6 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಯಾಗುತ್ತದೆ ಎಂದರು.ಆಲಮಟ್ಟಿಯಲ್ಲಿ ನಾನಾ ಉದ್ಯಾನಗಳಿವೆ. ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕಗಳಿವೆ. ಪ್ರವಾಸೋದ್ಯಮ ಆಕರ್ಷಣೆಗೆ ಆಲಮಟ್ಟಿಯಲ್ಲಿ ಡಿಸ್ನಿ ಪಾರ್ಕ್ ಯಾತ್ರಿ ನಿವಾಸ, ಹಳ್ಳಿ ಜನರಿಗೆ ಡಾರ್ಮೆಟರಿ, ಕೇಬಲ್, ಪ್ಲಾನೇಟರಿ, ಡ್ಯಾಶ್ ಕಾರ್ಡ್ ಮ್ಯೂಸಿಕಲ್ ಫೌಂಟೇನ್ ಮಾಡಬೇಕಿದೆ. ಈ ದಿಶೆಯಲ್ಲಿ ನಾನು, ಸಚಿವ ಶಿವಾನಂದ ಪಾಟೀಲ ಸೇರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಯುಕೆಪಿ ರಾಷ್ಟ್ರೀಯ ಯೋಜನೆಯಾಗಲಿ:

ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು. ಇದರಿಂದ ರಾಷ್ಟ್ರಕ್ಕೆ ಬಲು ದೊಡ್ಡ ಕೊಡುಗೆ ನೀಡಿದಂತಾಗುವುದು. ಈ ಜಲಾಶಯದ ನೀರನ್ನು ವ್ಯರ್ಥವಾಗಿ ಸಮುದ್ರಕ್ಕೆ ಬಿಡುವ ಬದಲಿಗೆ, ಸದ್ಬಳಕೆ ಮಾಡಿಕೊಳ್ಳಬೇಕಿದೆ. ಆಲಮಟ್ಟಿ ಜಲಾಶಯ ಕೇವಲ ಕರ್ನಾಟಕದ ಯೋಜನೆಯಲ್ಲ. ನಾಲ್ಕು ರಾಜ್ಯಗಳಿಗೆ ದೊಡ್ಡ ಶಕ್ತಿ ತುಂಬುವ ಬೃಹತ್ ಯೋಜನೆ. ಹಾಗಾಗಿ ಕೇಂದ್ರವು ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದರು.

ಆಲಮಟ್ಟಿಯು ಜಿಲ್ಲೆಗೆ ದೊಡ್ಡ ವರದಾನವಾಗಿದೆ. ಇಲ್ಲಿಯವರೆಗೆ ಈ ಜಲಾಶಯಕ್ಕಾಗಿ ಬಹಳಷ್ಟು ಜಮೀನು ಕಳೆದುಕೊಂಡ ಸಂತ್ರಸ್ತರು ನಮ್ಮವರೇ. ಜೊತೆಗೆ ಔದ್ಯೋಗಿಕ ಕ್ರಾಂತಿಗೆ ಹೆಚ್ಚು ಜಮೀನು ಕಳೆದುಕೊಂಡವರು ಬಸವನಬಾಗೇವಾಡಿ ಮತಕ್ಷೇತ್ರದ ರೈತರು. ಹಾಗಾಗಿ ಸರ್ಕಾರಿ ನೇಮಕಾತಿಯಲ್ಲಿ ಈ ಭಾಗದ ಸಂತ್ರಸ್ತರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಹಿರಿಯರು ಮನವಿ ಸಲ್ಲಿಸಿದ್ದಾರೆ. ಸಂತ್ರಸ್ತರ ಈ ಮನವಿಯನ್ನು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಅಮ್ಯೂಸ್‌ಮೆಂಟ್ ಪಾರ್ಕ್‌ ಲೋಕಾರ್ಪಣೆ ಮಾಡಿದ್ದೇವೆ. ಆದರೆ ನಿತ್ಯ ಇಲ್ಲಿಗೆ ಆಗಮಿಸುವ ಶಾಲಾ ಮಕ್ಕಳಿಗೆ, ಹಿರಿಯರಿಗೆ ಇದರ ಉಪಯೋಗವಾಗಲಿದೆ. ಶಾಲಾ ಮಕ್ಕಳಿಗಂತೂ ಇದೊಂದು ದೊಡ್ಡ ಅವಕಾಶ. ಪಾರ್ಕ್‌ ಉದ್ಘಾಟನೆಯಾದರೆ ಸಾಲದು. ಇದರ ನಿರ್ವಹಣೆ ಕೂಡ ಅಚ್ಚುಕಟ್ಟಾಗಿ ನೋಡಿಕೊಳ್ಳಬೇಕು. ವರ್ಷಕ್ಕೆ 10 ಲಕ್ಷ ಪ್ರವಾಸಿಗರು ಇಲ್ಲಿಗೆ ಬರುವುದರಿಂದ ಈ ಪಾರ್ಕ್‌ ನಡೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್ ಕವಲಗಿಹಾಗೂ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಹಳೆಮನಿ, ಆಲಮಟ್ಟಿ ಕೃಷ್ಣ ಭಾಗ್ಯ ಜಲ ನಿಗಮದ ಮುಖ್ಯ ಇಂಜಿನೀಯರ್‌ ಡಿ.ಬಸವರಾಜ, ಬಿ.ಎಸ್.ಪಾಟೀಲ, ಗೋವಿಂದ ರಾಠೋಡ, ಕೆ.ಎಸ್.ಅಭಿಮನ್ಯು, ಎನ್.ಕೆ.ಬಗಾಯತ ಅನೇಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಸೈನ್ಯ ಕಟ್ಟಿ ನಾಡರಕ್ಷಿಸಿದ್ದ ಮಲ್ಲಮ್ಮ
ಜನಸ್ನೇಹಿ‌ ಪೊಲೀಸ್ ಅಧಿಕಾರಿಗೆ ಸಹಸ್ರಾರು ಅಭಿಮಾನಿಗಳ ಕಂಬನಿ