ನಮ್ಮದು ಸಮಾಜ ಒಗ್ಗೂಡಿಸುವ ಕೆಲಸ: ಡಿಕೆಶಿ

KannadaprabhaNewsNetwork |  
Published : Oct 11, 2026, 02:45 AM IST
CM. | Kannada Prabha

ಸಾರಾಂಶ

‘ರಾಜ್ಯದಲ್ಲಿ ಈ ಹಿಂದೆ ವೀರಶೈವ, ಲಿಂಗಾಯತ ಬೇರೆ ಮಾಡಲು ಹೋದಾಗ ಸಮುದಾಯದ ಗುರುಗಳ ಕ್ಷಮೆ ಕೇಳಿದ್ದೆ. ನಾವು ಸೂಜಿಯಂತೆ ಹೊಲಿಯುವ ಕೆಲಸ ಮಾಡುತ್ತೇವೆ. ಕತ್ತರಿಯಂತೆ ಕತ್ತರಿಸುವ ಕೆಲಸ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ರಾಜ್ಯದಲ್ಲಿ ಈ ಹಿಂದೆ ವೀರಶೈವ, ಲಿಂಗಾಯತ ಬೇರೆ ಮಾಡಲು ಹೋದಾಗ ಸಮುದಾಯದ ಗುರುಗಳ ಕ್ಷಮೆ ಕೇಳಿದ್ದೆ. ನಾವು ಸೂಜಿಯಂತೆ ಹೊಲಿಯುವ ಕೆಲಸ ಮಾಡುತ್ತೇವೆ. ಕತ್ತರಿಯಂತೆ ಕತ್ತರಿಸುವ ಕೆಲಸ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಮ್ಮದು ಸಮಾಜ ಒಗ್ಗೂಡಿಸುವ ಧರ್ಮವೇ ಹೊರತು ವಿಭಜನೆ ಮಾಡುವುದಲ್ಲ. ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂಬುದನ್ನು ನಾವು ನಂಬಿದ್ದೇವೆ. ಹೀಗಾಗಿ ಗುರುಗಳ ಕ್ಷಮೆ ಕೇಳಿದ್ದೆ ಎಂದು ಹೇಳಿದರು.

ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯತಾ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ 25ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳ ನಿಯೋಗ ಮುಖ್ಯಮಂತ್ರಿ ಅವರನ್ನು ಶನಿವಾರ ಭೇಟಿ ಮಾಡಿತ್ತು. ನಿಯೋಗ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸರ್ಕಾರ ಏನೇ ಮಾಡಬಹುದು. ಆದರೆ ಗುರುಗಳ ಹಾಗೂ ಗುರುಮಠಗಳ ಕಾರ್ಯಗಳು ಸ್ತುತ್ಯಾರ್ಹ. ಗುರು ಇಲ್ಲದೆ ಒಂದು ಹೆಜ್ಜೆ ಮುಂದೆ ಇಡಲೂ ಆಗದು. ಅಕ್ಷರ, ಅನ್ನ, ಧರ್ಮ ದಾಸೋಹವನ್ನು ಮಠಾಧೀಶರುಗಳು ಮಾಡುತ್ತಿದ್ದಾರೆ. ಇದು ಮೆಚ್ಚುಗೆಗೆ ಅರ್ಹ ಎಂದು ಹೇಳಿದರು.

ದೇಶದ ನಾಯಕರು ಅಚ್ಚರಿಪಟ್ಟರು:

ನಾನು ವೀರ ಗಂಗಾಧರ ಅಜ್ಜಯ್ಯನವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ. ಇದಕ್ಕೆ ಇಡೀ ದೇಶದ ನಾಯಕರು ಅಚ್ಚರಿಪಟ್ಟರು. ಚೆನ್ನೈನ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಮುಸ್ಲಿಂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು. ಆಗ ನಾನು ಧರ್ಮ, ಜಾತಿ ಎಂಬುದು ಮಾನವೀಯತೆಯಲ್ಲಿ ಇದೆ. ಎಲ್ಲರೂ ಒಂದೇ ಎಂದು ಹೇಳಿದಾಗ ಬಹಳ ಜನ ಟೀಕೆ ಮಾಡಿದರು. ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಶಿವಕುಮಾರ್‌ ಹೇಳಿದರು.

ಬಾಳೆ ಹೊನ್ನೂರು ಮಠ ಸೇರಿ ಅನೇಕ ಮಠಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಆಚಾರ ವಿಚಾರ ಗಮನಿಸಿದ್ದೇನೆ. ನನಗೆ ಸಿಕ್ಕಿರುವ ಅವಕಾಶದಲ್ಲಿ ಜನರ ಹೃದಯಗೆದ್ದು, ಕೆಲಸ ಮಾಡುವೆ. ಅದೇ ನನ್ನ ಗುರಿ. ಗುರುಗಳೆಲ್ಲರೂ ಮಾಡಿರುವ ಆಶೀರ್ವಾದ ನನಗೆ ಮಾತ್ರವಲ್ಲ, ಇಡೀ ಸರಕಾರಕ್ಕೆ, ನಿಮಗೆ ಧನ್ಯವಾದಗಳು. ನಿಮ್ಮ ಸಹಕಾರ ಹೀಗೇ ಇರಲಿ ಎಂದರು.

ಗವಿಮಠ ಶ್ರೀ ಬಗ್ಗೆ ಸುಳ್ಳು ಸುದ್ದಿ ಹರಡಿದರು:

ದಸರಾ ಉದ್ಘಾಟನೆಯನ್ನು ಕೊಪ್ಪಳ ಗವಿಸಿದ್ದೇಶ್ವರ ಮಠಗಳ ಶ್ರೀಗಳು ನೆರವೇರಿಸಲಿದ್ದಾರೆ. ಆ ಮಠದ ಕೆಲಸ ನೋಡಿದ್ದೇನೆ. ಅವರ ವ್ಯಕ್ತಿತ್ವ ದೊಡ್ಡದು. ಅವರನ್ನು ಇಡೀ ರಾಜ್ಯ ಒಪ್ಪಿದೆ. ಸ್ವಾಮಿಗಳೂ ಉದ್ಘಾಟನೆಗೆ ಒಪ್ಪಿದ್ದಾರೆ. ಅವರ ಜತೆ ಮಾತಾಡಿಯೇ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಆದರೆ ಕೆಲವರು ಇದರಲ್ಲೂ ರಾಜಕೀಯ ಮಾಡಲು ನೋಡಿದರು. ಸ್ವಾಮಿಗಳು ಒಪ್ಪಿಲ್ಲವೆಂದು ಸುಳ್ಳು ಸುದ್ದಿ ಹಬ್ಬಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಉತ್ತರ’ ಗೊಂದಲ ಕೆಪಿಎಸ್ಸಿ ಅಕ್ರಮ ಬೆಳಕಿಗೆ ಮೂಲ!
ಬ್ಯಾಂಕಾಕ್‌ ಪ್ರವಾಸಿಗರಿಂದ ₹1.73 ಕೋಟಿ ಡ್ರಗ್ಸ್‌ ಜಪ್ತಿ