ನನಗಿಂತ ಆ್ಯಕ್ಟೀವ್ ನಮ್ಮ ಶಾಸಕರು: ಸಚಿವ ಮಂಕಾಳ ವೈದ್ಯ

KannadaprabhaNewsNetwork |  
Published : Feb 04, 2025, 12:31 AM IST
ಮಂಕಾಳ ವೈದ್ಯ | Kannada Prabha

ಸಾರಾಂಶ

ನು ಒಮ್ಮೆ ಹೋದರೆ ನಮ್ಮ ಶಾಸಕರು ಎರಡು ಬಾರಿ ಸಿಎಂ ಬಳಿ ಹೋಗುತ್ತಾರೆ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.

ಕಾರವಾರ: ನನಗಿಂತ ಆ್ಯಕ್ಟೀವ್ ನಮ್ಮ ಶಾಸಕರಿದ್ದಾರೆ. ಶಾಸಕರು ಎಲ್ಲವನ್ನೂ ನನ್ನ ಬಳಿಯೇ ಕೇಳಬೇಕು ಎಂದೇನಿಲ್ಲ. ನೇರವಾಗಿ ಮುಖ್ಯಮಂತ್ರಿ ಬಳಿ ತೆರಳಿ ಶಾಸಕರು ಕೆಲಸ ಮಾಡಿಕೊಂಡು ಬರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾರ್ಮಿಕವಾಗಿ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಒಮ್ಮೆ ಹೋದರೆ ನಮ್ಮ ಶಾಸಕರು ಎರಡು ಬಾರಿ ಸಿಎಂ ಬಳಿ ಹೋಗುತ್ತಾರೆ. ನಮ್ಮ ಶಾಸಕರು, ಅಧಿಕಾರಿಗಳು ಸಚಿವರಿಗೆ ತೊಂದರೆ ಆಗದಂತೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಶಾಸಕರೂ ಸಚಿವರಿದ್ದ ಹಾಗೆ. ಶಾಸಕರಿಗೂ ಸಚಿವರಷ್ಟು ಅಧಿಕಾರ ಕೊಡಲಾಗಿದೆ ಎಂದರು.

ಹೆಬ್ಬಾರ ಕಾಂಗ್ರೆಸ್‌ನಲ್ಲಿದ್ದಾರೆ: ಶಾಸಕ ದಿನಕರ ಶೆಟ್ಟಿ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ ಎಂದು ಹೇಳಿದ ಬಗ್ಗೆ ತಿರುಗೇಟು ನೀಡಿ, ಜಿಲ್ಲೆಯಲ್ಲಿ ನಮ್ಮ ಶಾಸಕರು ನಿರಂತರ ಕೆಲಸ ಮಾಡುತ್ತಿದ್ದಾರೆ. ಸಚಿವನಾಗಿ ಎಲ್ಲದಕ್ಕೂ ನಾನೇ ಬರಬೇಕು ಎಂದಿಲ್ಲ. ಯಲ್ಲಾಪುರ ದುರ್ಘಟನೆ ನಡೆದಾಗ ನಾನು ಸ್ಥಳಕ್ಕೆ ಹೋಗದಿದ್ದರೂ ಡಿಸಿ, ಎಸ್‌ಪಿ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಸ್ಥಳದಲ್ಲಿದ್ದರು.

ಶಿಗ್ಗಾಂವಿ ಶಾಸಕರು ಕೂಡ ಸ್ಥಳದಲ್ಲೆ ಇದ್ದರು. ಯಲ್ಲಾಪುರ ಅಪಘಾತದಲ್ಲಿ ೧೦ ಸತ್ತರೂ ಸಚಿವರು ಬಂದಿಲ್ಲ ಎನ್ನುತ್ತಾರೆ. ನಾನು ಬೆಂಗಳೂರಿನಲ್ಲಿದ್ದರೂ ನಮ್ಮ ಶಾಸಕರು ಬಂದಿದಾರೆ. ಅಧಿಕಾರಿಗಳು ಇದ್ದರು. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಇದ್ದರು. ಮಂಕಾಳ ವೈದ್ಯ ಕ್ಷೇತ್ರದಿಂದ ಕಾಣೆಯಾಗಿದ್ದಾರೆ ಎಂದು ಸುಮ್ಮನೆ ಹೇಳಬಾರದು. ಎಲ್ಲಿಯೂ ಮಂಕಾಳ ಮಂಕಾಗುವುದಿಲ್ಲ ಎಂದು ಟಾಂಗ್ ನೀಡಿದರು.

ಬಿಜೆಪಿ ಶಾಸಕರು ಎಲ್ಲಿಗೆ ಹೋಗಿದ್ದಾರೆ ತಿಳಿಸಿ. ದಿನಕರ ಶೆಟ್ಟಿ ಎಲ್ಲಿಗೆ ಹೋಗಿದ್ದಾರೆ. ನಮ್ಮ ಶಾಸಕರು ಬೂತ್ ಮಟ್ಟದವರೆಗೂ ಹೋಗುತ್ತಿದ್ದಾರೆಂದು ತಿಳಿಸಲಿ ಎಂದು ಸವಾಲು ಹಾಕಿದರು.

ಶಿರಸಿ, ಕಾರವಾರ, ಹಳಿಯಾಳದಲ್ಲಿ ನಮ್ಮ ಶಾಸಕರು ಕೆಲಸ ಮಾಡುತ್ತಿದ್ದಾರೆ. ಹೆಬ್ಬಾರ ಬಿಜೆಪಿಯಿಂದ ಗೆದ್ದರೂ ಕಾಂಗ್ರೆಸ್‌ನಲ್ಲಿದ್ದಾರೆ. ಅವರೂ ಕೆಲಸ ಮಾಡುತ್ತಿದ್ದಾರೆ. ಕುಮಟಾದಲ್ಲಿ ನಮ್ಮ ಶಾಸಕರಿಲ್ಲ. ನಮ್ಮ ಕಾರ್ಯಕರ್ತರು, ಮುಖಂಡರು ಕೆಲಸ ಮಾಡುತ್ತಿದ್ದಾರೆ. ಎಲ್ಲಿಯೂ ವ್ಯತ್ಯಾಸವಾಗಿಲ್ಲ ಎಂದರು. ದೇಶಪಾಂಡೆ ಮಾರ್ಗದರ್ಶಕರು: ಹೆಸ್ಕಾಂ ಅಧಿಕಾರಿ ವರ್ಗಾವಣೆ ವಿಚಾರದಲ್ಲಿ ಸತೀಶ ಸೈಲ್ ಅವರು ದೇಶಪಾಂಡೆ ಅವರ ವಿರುದ್ಧ ಅಸಮಾಧಾನ ಹೊರಹಾಕಿದ ಬಗ್ಗೆ ಕೇಳಿದಾಗ, ದೇಶಪಾಂಡೆ ಹಿರಿಯರು. ಮಾರ್ಗದರ್ಶಕರು. ನಾವೆಲ್ಲ ಅವರ ಶಿಷ್ಯರು. ಸ್ವಲ್ಪ ಹೆಚ್ಚುಕಡಿಮೆ ಆದರೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ನಾಲ್ಕೂ ಶಾಸಕರು ಒಟ್ಟಿಗಿದ್ದೇವೆ. ಯಾರೆ ಅಧಿಕಾರಿಗಳು ಬಂದರೂ, ಹೋದರೂ ಸೈಲ್, ದೇಶಪಾಂಡೆ, ವೈದ್ಯ, ಭೀಮಣ್ಣ ಕಾರಣೀಕರ್ತರು. ಈಗ ಹೆಬ್ಬಾರ ಕೂಡಾ ನಮ್ಮೊಂದಿಗೆ ಸೇರಿಕೊಳ್ಳುತ್ತಿದ್ದಾರೆ. ನಾವು ರಾಜಕಾರಣ ಮಾಡುತ್ತಿಲ್ಲ. ಕೆಲಸ ಮಾಡುತ್ತಿದ್ದೇವೆ. ಸಹಕಾರ ನೀಡಿ ಎಂದರು. ಜನಸ್ಪಂದನೆ ಸಭೆ ಮಾಡದ ಬಗ್ಗೆ ಕೇಳಿದಾಗ, ಈ ತಿಂಗಳಲ್ಲಿ ಮಾಡುತ್ತೇವೆ. ಕೆಲವು ಸರ್ಕಾರಿ ಶಾಲೆ, ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲದ ಬಗ್ಗೆ ಗಮನಕ್ಕೆ ಬಂದಿದೆ. ಸ್ವಂತ ಕಟ್ಟಡ ನೀಡುತ್ತೇವೆ. ನೀರು, ವಿದ್ಯುತ್, ರಸ್ತೆ ಇತ್ಯಾದಿ ಮೂಲ ಸೌಲಭ್ಯ ಇಲ್ಲವೆಂದು ಆಗಬಾರದು. ಆ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಭರವಸೆ ನೀಡಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌