ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಔಷಧಿ ಅಂದರೆ ಜನರ ಜೀವ ಉಳಿಸುವ ಸಂಜೀವಿನಿಯಾಗಬೇಕು. ಆದರಿಲ್ಲಿ, ಜೀವ ಉಳಿಸಲೆಂದು ತಲೆಯೆತ್ತಿರುವ ಔಷಧಿ ತಯಾರಿಸುವ ಕೆಮಿಕಲ್ ಕಂಪನಿಗಳು ಜನರ ಜೀವ ಪಡೆದು ಔಷಧಿ ತಯಾರಿಸುತ್ತಿರುವುದು ದುರಂತವೇ ಸರಿ..!
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದ ಹೊರಸೂಸುತ್ತಿರುವ ವಿಷಾನಿಲ ಹಾಗೂ ದುರ್ನಾತದಿಂದಾಗಿ ಈ ಭಾಗದ ಹತ್ತಾರು ಹಳ್ಳಿಗಳ ಜನರ ಆರೋಗ್ಯದ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು ಜನರ ಆತಂಕ ಇಮ್ಮಡಿಸಿದೆ. ಗಾರ್ಮೆಂಟ್ಸ್ ಫ್ಯಾಕ್ಟರಿ ತರುವುದಾಗಿ ಹೇಳಿ ಜನರಿಂದ ಭೂಮಿ ಪಡೆದ ಸರ್ಕಾರಗಳು, ಇಲ್ಲಿ ಅಪಾಯಕಾರಿ ವಲಯ (ರೆಡ್ ಝೋನ್) ಕೆಮಿಕಲ್ ಫಾರ್ಮಾ ಕಂಪನಿಗಳ ತಂದಿರುವುದು ಜನರ ಜೀವ ಬಲಿ ಪಡೆಯುತ್ತಿದೆ ಎಂಬ ಆಕ್ರೋಶಗಳು ಮೂಡಿಬಂದಿವೆ.ನಮ್ಮ ಭಾಗದಲ್ಲಿ ಸ್ಥಾಪಿತವಾಗಿರುವ ಬಹುತೇಕ ಕಂಪನಿಗಳು ಔಷಧಿಯನ್ನು ತಯಾರಿಸುತ್ತವೆ ಎಂದು ಹೇಳುತ್ತಿದ್ದಾರೆ. ಆದರೆ ಅವು ಇಲ್ಲಿ ನಮ್ಮ ಪ್ರಾಣವನ್ನು ಬಲಿಕೊಟ್ಟು ಬೇರೆಯವರಿಗೆ ಔಷಧಿಯನ್ನು ತಯಾರಿಸುತ್ತಿವೆ ಎಂಬುವುದು ಬಹುತೇಕರಿಗೆ ತಿಳಿಯುತ್ತಿಲ್ಲ. ಇದಕ್ಕೆಲ್ಲ ಕಾರಣ ರಾಜಕೀಯ ವ್ಯಕ್ತಿಗಳ ದುರಾಸೆ, ಅವರ ಮೇಲೆ ನಂಬಿಕೆ ಕಳೆದುಕೊಂಡಿದ್ದೇವೆ. ದಯವಿಟ್ಟು ನಮ್ಮ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಶೇಷ ಗಮನಹರಿಸಿ ಯಾರ ಒತ್ತಡಕ್ಕೆ ಮಣಿಯದೆ ಪರಿಸರಕ್ಕೆ ಮತ್ತು ಜನ ಜೀವನಕ್ಕೆ ಮಾರಕವಾಗಿರುವ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ನಂಬಿದ್ದೇವೆ. : ಮಂಜುನಾಥ, ಮುನಗಾಲ್. (7ವೈಡಿಆರ್13)
ಈ ರಾಸಾಯನಿಕ ಕಂಪನಿಗಳು ಉದ್ಯೋಗ ನೀಡುವ ಬದಲು ವಿಷ ನೀಡುತ್ತಿವೆ. ಇವುಗಳ ವಿರುದ್ಧ ಸೈದಾಪುರ, ಬಾಡಿಯಾಳ, ಕಡೇಚೂರು ಮತ್ತು ಕಿಲ್ಲನಕೇರಾ ಗ್ರಾಮ ಪಂಚಾಯತ್ ಗಳಲ್ಲಿ ಸರ್ವ ಸದಸ್ಯರು ಸೇರಿಕೊಂಡು, ನಮ್ಮ ಜನರ ಧ್ವನಿಯಾಗಿ ಇಲ್ಲಿನ ಕಂಪನಿಗಳನ್ನು ಬಂದ್ ಮಾಡಬೇಕು, ಉದ್ಯೋಗಾವಕಾಶಗಳನ್ನು ನೀಡುವ, ಆರೋಗ್ಯದ ಮೇಲೆ ಪರಿಣಾಮ ಬೀರದ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಆಗ್ರಹಿಸಿ ಠರಾವು ಪಾಸ್ ಮಾಡಿದ್ದೇವೆ. ಅದಕ್ಕೆ ತಾ.ಪಂ ಪಂಚಾಯತ್ ಅಧಿಕಾರಿಗಳು ಸ್ಪಂದಿಸಿದ್ದಾರೆ, ಇದಕ್ಕೆ ಸಿಇಓ ಮತ್ತು ಜಿಲ್ಲಾಧಿಕಾರಿಗಳು, ಯಾವ ರೀತಿಯಾಗಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾಯುತ್ತಿದ್ದೇವೆ. ನಂತರ ನಮ್ಮ ಹೋರಾಟದ ದಿಕ್ಕು ನಿರ್ಣಯಿಸುತ್ತೇವೆ.
ಶಿಲ್ಪಾ ಬನ್ನಯ್ಯ ಕಲಾಲ್, ಸದಸ್ಯರು, ಗ್ರಾ.ಪಂ. ಸೈದಾಪುರ.
ಜು.8ರಂದು ಫೋನ್ ಇನ್ ಕಾರ್ಯಕ್ರಮವಿವಿಧ ಜನಹಿತ ವಿಷಯಗಳ ಮೇಲೆ ಬೆಳಕು ಚೆಲ್ಲುವ ದೃಷ್ಟಿಯಿಂದ, "ಕನ್ನಡಪ್ರಭ " ಯಾದಗಿರಿ ಜಿಲ್ಲೆಯಿಂದ ಹಮ್ಮಿಕೊಳ್ಳುತ್ತಿರುವ ಫೋನ್ ಇನ್ ಕಾರ್ಯಕ್ರಮ, ಇದೀಗ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕುರಿತು ಚರ್ಚೆ-ಚಿಂತನೆ-ಅಹವಾಲುಗಳಿಗೆ ವೇದಿಕೆಯಾಗಲಿದೆ. ಜುಲೈ 8, ಮಂಗಳವಾರ ಈ ನೇರ ಕಾರ್ಯಕ್ರಮ ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರಗೊಳ್ಳಲಿದೆ. ಯಾದಗಿರಿ ಸೇರಿದಂತೆ ನಾಡಿನ ವಿವಿಧೆಡೆಯ ಪರಿಸರವಾದಿಗಳು, ಚಿಂತಕರು, ತಜ್ಞವೈದ್ಯರು, ಮಠಾಧೀಶರು ಮುಂತಾದವರು ಈ ಕುರಿತು ಮಾತನಾಡಲಿದ್ದಾರೆ. ಜೊತೆಗೆ, ಅಲ್ಲಿನ ನರಕಸದೃಷ ವಾತಾವರಣದಲ್ಲಿ ಜೀವಚ್ಛವದಂತೆ ಬದುಕು ಸಾಗಿಸುತ್ತಿರುವ ನೋವುಂಡ ಕೆಲವರು ಕರಾಳ ಅನುಭವಗಳ ಹಂಚಿಕೊಳ್ಳಲಿದ್ದಾರೆ.