ಕನ್ನಡಪ್ರಭ ವಾರ್ತೆ ನಾಗಮಂಗಲ
ದೇಶದ ಹೆಣ್ಣು ಮಕ್ಕಳ ಸಿಂದೂರ ಅಳಿಸಿದ ಭಯೋತ್ಪಾದಕರ ಹುಟ್ಟಡಗಿಸುವಲ್ಲಿ ನಮ್ಮ ಸೈನಿಕರು ಯಶಸ್ವಿಯಾಗಿದ್ದಾರೆ. ಭಯೋತ್ಪಾದಕರ ಜೊತೆಗಿನ ಸಮರದಲ್ಲಿ ದೇಶದ 8 ಮಂದಿ ಯೋಧರು ಹುತಾತ್ಮರಾಗಿರುವುದು ನೋವಿನ ಸಂಗತಿ ಎಂದು ಮಾಜಿ ಸೈನಿಕ ಶಾಂತ ಮೋಹನ್ ತಿಳಿಸಿದರು.ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಆಯೋಜಿಸಿದ್ದ ಆಪರೇಷನ್ ಸಿಂದೂರ್‌ನಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಆಪರೇಷನ್ ಸಿಂದೂರ್ ಎನ್ನುವ ಹೆಸರೇ ಮೈ ರೋಮಾಂಚನವಾಗುತ್ತದೆ. ನಮ್ಮ ದೇಶ ಎಷ್ಟು ಸದೃಢವಾಗಿದೆ ಎಂದರೆ ಕೇವಲ ಮೂರೇ ದಿನದಲ್ಲಿ ಪಾಕಿಸ್ತಾನ ನಮ್ಮ ಮುಂದೆ ಮಂಡಿಯೂರುವಂತೆ ಮಾಡಿದೆ. ನಮ್ಮ ಶಕ್ತಿಯನ್ನು ಜಗತ್ತಿಗೆ ಸಾರಿದ ದಿನ ಇದಾಗಿದೆ ಎಂದರು.ದೇಶದ ವಾಯುಸೇನೆ, ಭೂಸೇನೆ ಹಾಗೂ ನೌಕಾ ಸೇನೆಯ ಅಗಾಧವಾದ ಶಕ್ತಿಯು ದೇಶವನ್ನು ಸೂಪರ್ ಪವರ್ ಎಂದು ಜಗತ್ತು ಒಪ್ಪಿಕೊಳ್ಳುವಂತೆ ಮಾಡಿದೆ. ನಮ್ಮ ಯೋಧರ ತ್ಯಾಗ, ಬಲಿದಾನವನ್ನು ಗೌರವಿಸುವ ಮೂಲಕ ನಾವೆಲ್ಲರೂ ಯೋಧರ ಜೊತೆಗೆ ನಿಲ್ಲಬೇಕಿದೆ ಎಂದು ಹೇಳಿದರು.
ನಿವೃತ್ತ ಸೈನಿಕ ಟಿ.ಎನ್.ಪ್ರಕಾಶ್ ಮಾತನಾಡಿ, ಆಪರೇಷನ್ ಸಿಂದೂರದಲ್ಲಿ ಹುತಾತ್ಮರಾದ ಯೋಧರನ್ನು ನೆನಪು ಮಾಡಿಕೊಂಡು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಯುದ್ಧ ಎಂದರೆ ಕೇವಲ ಮಾತಿನದಲ್ಲ. ಆ ಸ್ಥಳದಲ್ಲಿ ಭಾಗವಹಿಸಿದ ವ್ಯಕ್ತಿಗೆ ಅದರ ಮಹತ್ವ ತಿಳಿಯುತ್ತದೆ ಎಂದರು.ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡುವ ಸೈನಿಕ ಎಲ್ಲವನ್ನೂ ತೊರೆಯುತ್ತಾನೆ. ಕುಟುಂಬ ಸಂಬಂಧ ಎಲ್ಲವನ್ನೂ ಮರೆತು ವೀರಮರಣ ಹೊಂದುತ್ತಾನೆ. ಆದ್ದರಿಂದ ಅಂತಹ ಯೋಧರಿಗೆ ನಾವು ಕೃತಜ್ಞರಾಗಿ ಗೌರವ ನಮನ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಹುತಾತ್ಮರಾದ ಎಂಟು ಮಂದಿ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಜ್ಯೋತಿ ಬೆಳೆಗಿಸಿ ಭಾರತಾಂಬೆ ಮತ್ತು ಸೈನಿಕರಿಗೆ ಜೈಕಾರ ಹಾಕಿದ ನಂತರ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ವೇಳೆ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಬಿ.ನಾರಾಯಣ, ಟಿ.ಸಿ.ಕುಮಾರ್, ನಾಗರಾಜ್, ಮೋಹನ್ ಕುಮಾರ್, ಎಂ.ಡಿ.ಮೂಡಲಗಿರಿ, ಉದಯ್ ಕುಮಾರ್, ರಾಮಚಂದ್ರ ಸೇರಿ ನೂರಾರು ಮಂದಿ ಸಾರ್ವಜನಿಕರು ಇದ್ದರು.