ಹೊಸಪೇಟೆ: ಭಾರತ ದೇಶವನ್ನು ಕಳೆದ 77 ವರ್ಷಗಳಲ್ಲಿ ಶ್ರಮಜೀವಿಗಳ ಶ್ರಮದ ಮೂಲಕ ಕಟ್ಟಿದ್ದೇವೆ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಚಿನ್ನಸ್ವಾಮಿ ಸೋಸಲೆ ಹೇಳಿದರು.
ನಮ್ಮ ದೇಶದ ಸಂವಿಧಾನವನ್ನು ವಸ್ತುನಿಷ್ಠವಾಗಿ ಅರ್ಥ ಮಾಡಿಕೊಳ್ಳದೇ ಇರುವುದರಿಂದ ಎರಡು ಸಾವಿರ ವರ್ಷಗಳಿಂದ ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೆ ಮುಂದುವರೆದಿವೆ. ಭಾರತೀಯ ಸಂಪ್ರದಾಯದಲ್ಲಿ ದೇವರ ಲೇಪಿತ ಧರ್ಮ ಇದೆ. ಇದು ನಮ್ಮ ಮೌಢ್ಯಕ್ಕೆ ಕಾರಣವಾಗಿದೆ. ಬೌದ್ಧ ಧರ್ಮದಲ್ಲಿ ದೇವರಿಲ್ಲ. ಶರಣರ ಲಿಂಗಾಯತ ಧರ್ಮದಲ್ಲಿ ದೇವರಿಲ್ಲ. ಜೈನ ಧರ್ಮದಲ್ಲಿ ದೇವರಿಲ್ಲ. ಇಂತಹ ಅನೇಕ ಧರ್ಮಗಳನ್ನು ನಾವು ಉದಾಹರಣೆಯಾಗಿ ಕೊಡಬಹುದು. ನಮ್ಮಲ್ಲಿರುವ ಅಜ್ಞಾನವೇ ಸವರ್ಣೀಯರಿಗೆ ಬಂಡವಾಳವಾಗಿದೆ. ನಾವು ಕಟ್ಟಿದ ದೇವಸ್ಥಾನಗಳಿಗೆ ನಮಗೆ ಪ್ರವೇಶ ಇಲ್ಲ. ನಾವೇ ಈ ನೆಲದ ಮೂಲ ನಿವಾಸಿಗಳು. ಇದನ್ನು ಅರ್ಥ ಮಾಡಿಕೊಳ್ಳದೇ ಇರುವುದರಿಂದ ಶ್ರಮಜೀವಿಗಳ ಬೆವರಿನಿಂದ ಕಟ್ಟಿದ ಭಾರತ ಇಂದು ಸೋಲುತ್ತಿದೆ. ಮೌಢ್ಯ ಸಂಪ್ರದಾಯಗಳ ತೀರ್ಥದ ಭಾರತ ಇಂದು ಗೆಲ್ಲುತ್ತಿದೆ. ಇದನ್ನು ಬದಲಾಯಿಸಬೇಕಾಗಿದೆ ಎಂದರು.
ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿರುಪಾಕ್ಷ ಪೂಜಾರಳ್ಳಿ ಮಾತನಾಡಿ, ಚಿಂತಕ ಪೆರಿಯಾರ್ ರಾಮಸ್ವಾಮಿ ನಾಯಕ ದೇವರು, ಧರ್ಮಗಳ ಬಗ್ಗೆ, ಜಾತಿ ಅಸಮಾನತೆ, ಗೊಡ್ಡು ಸಂಪ್ರದಾಯಗಳ ಬಗ್ಗೆ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿದ್ದಾರೆ. ಅಂತಹ ಅನಿಷ್ಟ ಪದ್ಧತಿ, ಶೋಷಣೆಗಳ ವಿರುದ್ಧ ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲೂ ಹೋರಾಟ ನಡೆಸಿ, ಇಂದಿಗೂ ಕೋಟ್ಯಂತರ ಹೋರಾಟಗಾರರಿಗೆ ಸ್ಫೂರ್ತಿಯಾಗಿರುವ ಪೆರಿಯಾರ್ ನಮಗೆಲ್ಲ ಎಂದೆಂದಿಗೂ ಮರೆಯದ ಪ್ರೇರಕ ಶಕ್ತಿಯಾಗಿದ್ದಾರೆ ಎಂದರು.ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಮುಖಂಡರಾದ ಮರಡಿ ಜಂಬಯ್ಯ ನಾಯಕ, ಬಿ.ತಾಯಪ್ಪ ನಾಯಕ, ಬಿ.ರಮೇಶ್ ಕುಮಾರ್, ಎಂ.ಧನರಾಜ್, ಸೂರ್ಯನಾರಾಯಣ, ಎಚ್.ಡಿ.ಚಂದ್ರಪ್ಪ, ಸಿಐಟಿಯು ಮುಖಂಡರಾದ ಎಂ.ಗೋಪಾಲ್, ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ನಾಗರಾಜ್ ಪತ್ತಾರ್, ಡಿವೈಎಫ್ಐ ಮುಖಂಡರಾದ ಬಿ.ಮಹೇಶ್, ನಾಗು ನಾಯ್ಕ, ಶ್ರೀಧರ್ ಮತ್ತಿತರರಿದ್ದರು.