ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
೧೯೨೬ರಲ್ಲಿ ಜ.೨೬ರಂದು ಲಾಹೋರ್‌ನಲ್ಲಿ ಪ್ರಥಮ ಬಾರಿಗೆ ಹಾರಿದ ನಮ್ಮ ರಾಷ್ಟ್ರಧ್ವಜ ಇಂದಿಗೂ ಚಿರಸ್ಥಾಯಿಯಾಗಲು ನಮ್ಮ ದಕ್ಷ ಸಂವಿಧಾನ ಕಾರಣವಾಗಿದೆ ಎಂದು ಶಾಸಕ ಸವದಿ ಹೇಳಿದರು.ಶುಕ್ರವಾರ ಬನಹಟ್ಟಿಯ ಎಸ್‌ಟಿಸಿ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ ಸಂವಿಧಾನ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ದೇಶಭಕ್ತರ ತ್ಯಾಗ-ಬಲಿದಾನಗಳ, ಹೋರಾಟದ ಕಿಚ್ಚಿಗೆ ೧೯೪೭ರಲ್ಲಿ ಸ್ವಾತಂತ್ರ್ಯ ಘೋಷಿಸಿದ ಬ್ರಿಟಿಷರು ಹತ್ತಾರು ಭಿನ್ನತೆಯುಳ್ಳ ಭಾರತ ಮತ್ತೆ ನಮ್ಮ ನೆರವು ಕೋರುತ್ತದೆಂದು ಪರಿಹಾಸ್ಯ ಮಾಡಿದ್ದರು. ಆದರೆ, ಕರಡು ಸಮಿತಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ೩೯೦ ವಿಧಿಗಳು, ೮ ಅನುಸೂಚಿಗಳು ಮತ್ತು ೨೨ ಭಾಗಗಳಲ್ಲಿ ರೂಪಿತ ನಮ್ಮ ಸಂವಿಧಾನ ವೈವಿಧ್ಯತೆಯಲ್ಲೂ ಏಕತೆ ಬಲಗೊಳಿಸುವತ್ತ ಪ್ರಪಂಚದಲ್ಲೇ ಉತ್ಕೃಷ್ಟ ಮತ್ತು ಬೃಹತ್ ಗಾತ್ರದ ಸಂವಿಧಾನ ಜಾರಿಗೆ ಬಂತು. ಕಳೆದ ೭೫ ವರ್ಷಗಳಲ್ಲಿ ಭಾರತ ದಾಖಲೆಯ ಪ್ರಗತಿ ಹೊಂದಿ ಇದೀಗ ವಿಶ್ವದ ಬಲಾಢ್ಯ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಾಗಿ ಬೆಳೆದಿದೆ. ನಮ್ಮಲ್ಲಿ ಇನ್ನೂ ಅಸ್ಪೃಶ್ಯತೆ ಆಚರಣೆ ಅಮೂಲಾಗ್ರವಾಗಿ ನಾಶವಾಗದಿರುವುದು ನಮ್ಮ ಆಧುನಿಕತೆ ಮತ್ತು ಪ್ರಗತಿಗೆ ಹಿಡಿದ ಕಪ್ಪುಚುಕ್ಕೆಯಾಗಿದೆ. ಭಾರತೀಯರೆಲ್ಲರೂ ಒಂದು ಎಂಬ ಭಾವ ಮೂಡಿಸಿ ಮೇಲು-ಕೀಳು,ಬಡವ-ಬಲ್ಲಿದ ಭೇದಭಾವ ಅಳಿಸಿ ಹಾಕಲು ದೇಶದ ಎಲ್ಲ ಪ್ರಜೆಗಳು ಸಂಕಲ್ಪ ಮಾಡಬೇಕೆಂದರು. ಶಿಕ್ಷಣ , ಸಂಘಟನೆ ಮತ್ತು ಹೋರಾಟ ತತ್ವಗಳಡಿ ಸರ್ವರಂಗದಲ್ಲೂ ಭಾರತ ಸಶಕ್ತವಾಗಲು ಡಾ,ಬಾಬಾಸಾಹೇಬ ಅಂಬೇಡ್ಕರ್ ನೀಡಿದ ಕೊಡಗೆ ಅನನ್ಯವಾಗಿದೆ. ರಾಜಕಾರಣಕ್ಕೆ ಡಾ.ಅಂಬೇಡ್ಕರ್ ಹೆಸರು ಬಳಸುವುದು ನೈತಿಕ ಅಪರಾಧ ಹಾಗೂ ಪಾಪಕೃತ್ಯವಾಗಿದೆ. ಸಮಾನತೆಯ ನೆಲೆಗಟ್ಟಲ್ಲಿ ಸಂವಿಧಾನದ ಆಶೋತ್ತರಗಳನ್ನು ಭಾರತೀಯರು ಪಾಲಿಸಿ ಭಾರತವನ್ನು ವಿಶ್ವಗುರುವಾಗಿಸಬೇಕೆಂದರು.
ಡಾ.ಎಸ್.ಸಿ. ಗಡೆಪ್ಪನವರಮಠ, ಡಾ.ಮಂಜುನಾಥ ಬೆನ್ನೂರ, ಎಸ್.ಎಂ. ಶೇಖ, ಶಿವಾನಂದ ಗಾಯಕವಾಡ, ಭೀಮಶಿ ಮಗದುಮ್, ರೇಣುಕಾ ಮಡ್ಡಿಮನಿ ಮಾತನಾಡಿದರು. ಪಲ್ಲವಿ ಗುಳೇದಗುಡ್ಡ ಪ್ರಾರ್ಥಿಸಿದರು. ಪೌರಾಯುಕ್ತ ಜಗದೀಶ ಈಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳಾಡಿದರು. ಪ್ರೊ.ಎಸ್.ಬಿ.ನಡುವಿನಕೇರಿ ನಿರ್ವಹಿಸಿದರು.ಪ್ರಕಾಶ ಮಠಪತಿ, ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ಬೀಳಗಿ, ಯುನೂಸ್ ಚೌಗಲಾ, ಶಿವಾನಂದ ಬುದ್ನಿ, ಯಲ್ಲಪ್ಪ ಕಟಗಿ, ಬಸವರಾಜ ಗುಡೋಡಗಿ, ಈಶ್ವರ ಪಾಟೀಲ, ಶಂಕರ ಜಾಲಿಗಿಡದ, ಪ್ರೊ.ಸುರೇಶ ನಿಡೋಣಿ, ಚಂದ್ರು ಹರಿಜನ, ಬಾಬು ಮಹಾಜನ, ಗೌರಿ ಮಿಳ್ಳಿ, ದುರ್ಗವ್ವ ಹರಿಜನ, ಶೋಭಾ ಹೊಸಮನಿ, ಪ್ರವೀಣ ದಬಾಡಿ ಸೇರಿದಂತೆ ಸಹಸ್ರಾರು ವಿದ್ಯಾರ್ಥಿಗಳು, ನಾಗರಿಕರು ಪಾಲ್ಗೊಂಡಿದ್ದರು.