ಗುಲಾಮಗಿರಿಯಿಂದ ಹೊರಬಂದು ಸ್ವಾಭಿಮಾನಿಗಳಾಗಿ: ಬಿ.ಟಿ. ಲಲಿತಾ ನಾಯಕ

KannadaprabhaNewsNetwork |  
Published : Dec 04, 2024, 12:30 AM IST
ಶಿರಸಿಯ ರಂಗಧಾಮದಲ್ಲಿ ೨೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಪಾಪಕಾರ್ಯ ಮಾಡುವ ಮನುಷ್ಯನಿಗೆ ಧೈರ್ಯವಿರುವುದಿಲ್ಲ. ನಾಡನ್ನು ಅಭಿವೃದ್ಧಿಪಡಿಸಲು ಅಂದಿನ ಜನನಾಯಕರು ಕನಸು ಕಂಡಿದ್ದರು. ಕನ್ನಡ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರವಾಗಿದೆ.

ಶಿರಸಿ: ನಮ್ಮಲ್ಲಿ ದುರಾಸೆ ಹೆಚ್ಚಾಗುತ್ತಿದ್ದು, ಮೃಗತ್ವ ನಿವಾರಣೆಗೆ ಮನುಷ್ಯತ್ವ ರೂಢಿಸಿಕೊಳ್ಳಬೇಕು. ಗುಲಾಮಗಿರಿಯಿಂದ ಹೊರಬಂದು ಸ್ವಾಭಿಮಾನಿಗಳಾಗಬೇಕು ಎಂದು ಹಿರಿಯ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ ತಿಳಿಸಿದರು.

ನಗರದ ರಂಗಧಾಮದಲ್ಲಿ ಮಂಗಳವಾರ ೨೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯದ ಜವಾಬ್ದಾರಿ ಹೊರಲು ನಮಗೆ ಶಕ್ತಿ ಬೇಕಾಗಿದೆ. ಕೈ ಹಾಗೂ ಅಸ್ತ್ರ ಎರಡೂ ಗಟ್ಟಿಯಾಗಿರಬೇಕು. ಕನ್ನಡಿಗರ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ನಾಡನ್ನು ಭ್ರಷ್ಟಾಚಾರದಿಂದ ಮುಕ್ತಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಪಾಪಕಾರ್ಯ ಮಾಡುವ ಮನುಷ್ಯನಿಗೆ ಧೈರ್ಯವಿರುವುದಿಲ್ಲ. ನಾಡನ್ನು ಅಭಿವೃದ್ಧಿಪಡಿಸಲು ಅಂದಿನ ಜನನಾಯಕರು ಕನಸು ಕಂಡಿದ್ದರು. ಕನ್ನಡ ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರವಾಗಿದೆ. ಅನ್ನ ದೇವರ ಮುಂದೆ ಇನ್ನೊಂದು ದೇವರಿಲ್ಲ. ಅನ್ನ ಬೆಳೆಯುವ ರೈತನಿಗೆ ಕುವೆಂಪು ಅವರು ಯೋಗಿಯ ಸ್ಥಾನವನ್ನು ನೀಡಿದ್ದಾರೆ. ಬುದ್ಧನನ್ನು ಮರೆತರೆ ಮೃಗಗಳಾಗುತ್ತೇವೆ. ನಮ್ಮಲ್ಲಿರುವ ಮೃಗತ್ವನ್ನು ಕಳೆದು ಮನುಷ್ಯರಾಗಬೇಕು. ದೇಶವನ್ನು ಆಳುವ ರಾಜರು ದಾರಿ ತಪ್ಪಿದರೆ ಇಡೀ ದೇಶ ಹಾಳಾಗುತ್ತದೆ. ಪರಿಸರವನ್ನು ದೇವತೆಯೆಂದು ಭಾವಿಸಿ ರಕ್ಷಿಸಬೇಕಿದೆ. ಮೋಸ, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದ ನಾಡನ್ನು ಕಟ್ಟಲು ಶ್ರಮಿಸಬೇಕು ಎಂದರು.

ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಕನ್ನಡದ ಮೊದಲ ರಾಜಧಾನಿ ಆದಿಕವಿ ಪಂಪ ಆಳಿದ ನಾಡು ಸೊದೆರಾಜರು ಆಳಿದ ಪುಣ್ಯ ಭೂಮಿಯಿದು. ಇಂತಹ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ತಂದಿದೆ. ಸಾಹಿತ್ಯ ಕ್ಷೇತ್ರವೇ ನನ್ನ ಮನೆ ಎಂದು ತಿಳಿದ ಸಾಕಷ್ಟು ಸಾಹಿತಿಗಳು ನಮ್ಮ ನಾಡಿನಲ್ಲಿದ್ದಾರೆ. ಕನ್ನಡ ಭಾಷೆ ಸಾಹಿತ್ಯವನ್ನು ಜೀವಂತವಾಗಿಟ್ಟಿರುವ ಜಿಲ್ಲೆ ನಮ್ಮ ಉತ್ತರ ಕನ್ನಡ ಎಂದರು.

ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಕನ್ನಡಕ್ಕೇ ಅಗ್ರಸ್ಥಾನವಿದೆ. ಇದನ್ನು ಮರೆಯಲು ಸಾಧ್ಯವಿಲ್ಲ. ಜಿಲ್ಲೆಯ ಪರಿಸರ ಸಾಕಷ್ಟು ವೈವಿಧ್ಯಮಯವಾಗಿದೆ. ನಮ್ಮ ಜಿಲ್ಲೆಯ ಸಾಹಿತಿಗಳು ಬಹಳ ವಿಶಿಷ್ಟವಾಗಿದ್ದಾರೆ ಎಂದರು.

ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡಿ, ಪರಿಷತ್ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರದೇ ಜನಸಾಮಾನ್ಯರ ಪರಿಷತ್ ಆಗಬೇಕು ಎಂಬ ಉದ್ದೇಶದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಹಿರಿಯ ಸಾಹಿತಿ ಭಾಗೀರಥಿ ಹೆಗಡೆ ಮಾತನಾಡಿ, ಮಕ್ಕಳೇ ನಮ್ಮ ಮುಂದಿನ ಭವಿಷ್ಯ. ಅವರನ್ನು ಸುಂದರವಾಗಿ ತಿದ್ದಿ ತಿಡುವ ಕೆಲಸ ಆಗಬೇಕು. ವಿದ್ಯಾಭ್ಯಾಸವನ್ನು ಕನ್ನಡದಲ್ಲೇ ಕಲಿಸುವಂತಾದರೆ ಕನ್ನಡ ಹೆಮ್ಮರವಾಗಿ ಬೆಳೆಯುತ್ತದೆ. ಕನ್ನಡವನ್ನು ಇನ್ನಷ್ಟು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ, ಆತ್ಮವಿಶ್ವಾಸ ಇಟ್ಟುಕೊಂಡು ಬದುಕಬೇಕು. ಕನ್ನಡ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಎಂದರು.

ಸಹಾಯಕ ಆಯುಕ್ತೆ ಕಾವ್ಯಾರಾಣಿ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.

ಹಿರಿಯ ಸಾಹಿತಿ ಡಾ. ಎನ್.ಆರ್. ನಾಯಕ್ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆ ಶ್ರೀಮಂತವಾಗಿದೆ. ಸಾಂಸ್ಕೃತಿಕ ಗಟ್ಟಿ ಹಿನ್ನೆಲೆ ಹೊಂದಿರುವ ಪ್ರದೇಶ ನಮ್ಮದು. ಗುಲಾಮಿ ಸಂಸ್ಕೃತಿ ಇರುವವರೆಗೆ ಕನ್ನಡ ಉದ್ಧಾರವಾಗುವುದಿಲ್ಲ. ಕನ್ನಡ ಕೆಲಸಕ್ಕಾಗಿ ರಾಜ್ಯ ಸರ್ಕಾರ ಕೆಲವು ಯೋಜನೆಗಳನ್ನು ಹಾಕಿಕೊಂಡಿದೆ. ಯಾವ ವ್ಯಕ್ತಿ ಈ ನಾಡಿನಲ್ಲಿ ಕನ್ನಡ ಮರೆಯುತ್ತಾನೋ ಅವನ ತಲೆಮೇಲೆ ಕಾಲಿಡಲು ನಾನು ಸಿದ್ಧನಿದ್ದೇನೆ ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಶ್ರೀಪಾದ ಶೆಟ್ಟಿ ಕನ್ನಡ ಧ್ವಜವನ್ನು ಸಮ್ಮೇಳನಾಧ್ಯಕ್ಷ ಆರ್.ಡಿ. ಹೆಗಡೆ ಆಲ್ಮನೆ ಅವರಿಗೆ ಹಸ್ತಾಂತರಿಸಿದರು.

ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ. ಬಸವರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ನಾಯ್ಕ, ನಗರಸಭೆ ಪೌರಾಯುಕ್ತ ಕಾಂತರಾಜ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಹಿರಿಯ ಸಾಹಿತಿ ಸೈಯದ್ ಝಮಿರುಲ್ಲಾ ಷರೀಫ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯಕ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಕಸಾಪ ಶಿರಸಿ ಘಟಕದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ, ಉತ್ತರ ಕನ್ನಡ ಜಿಲ್ಲಾ ಕಸಾಪದ ಎಲ್ಲ ತಾಲೂಕು ಘಟಕದ ಅಧ್ಯಕ್ಷರು, ಕನ್ನಡಪರ ಸಂಘಟನೆಗಳ ಅಧ್ಯಕ್ಷರು ಇದ್ದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಸ್ವಾಗತಿಸಿದರು. ಕೆ.ಎನ್. ಹೊಸಮನಿ ಹಾಗೂ ಭವ್ಯಾ ಹಳೇಯೂರ ಕಾರ್ಯಕ್ರಮ ನಿರೂಪಿಸಿದರು. ಬಿಡುಗಡೆಗೊಂಡ ಕೃತಿಗಳನ್ನು ರೇಷ್ಮಾ ನಾಯ್ಕ ಪರಿಚಯಿಸಿದರು. ಬೀರಣ್ಣ ನಾಯಕ ಮೊಗಟಾ ಅವರು ಕೇಂದ್ರ ಸಾಹಿತ್ಯ ಪರಿಷತ್‌ಗೆ ₹೧,೦೫,೫೫೫ಗಳ ಚೆಕ್‌ನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅವರಿಗೆ ಹಸ್ತಾಂತರಿಸಿದರು.

ಸಾಹಿತ್ಯ ಸಮಾಜಮುಖಿ ಆಗದಿದ್ದರೆ ಜನರಿಂದ ದೂರ

ಶಿರಸಿ: ಸಾಹಿತ್ಯ ಸಮಾಜಮುಖಿಯಾಗದಿದ್ದರೆ ಅದು ಜನರಿಂದ ದೂರವಾಗುತ್ತದೆ. ಈಗ ಓದುಗರ ಸಂಖ್ಯೆ ಇಳಿಮುಖವಾಗಲು ಲೇಖಕ ಮತ್ತು ಓದುಗರ ನಡುವೆ ಸಂವಾದದ ಕೊರತೆ ಕಾರಣವಾಗಿದೆ ಎಂದು ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಆರ್.ಡಿ. ಹೆಗಡೆ ಆಲ್ಮನೆ ತಿಳಿಸಿದರು.ನಗರದ ನೆಮ್ಮದಿ ರಂಗಧಾಮದ ವಿಷ್ಣು ನಾಯ್ಕ ವೇದಿಕೆಯಲ್ಲಿ ನಡೆಯುತ್ತಿರುವ 24ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾಜಿಕ ಜಾಲತಾಣಗಳು ಮತ್ತು ಅಂತರ್ಜಾಲ ಪತ್ರಿಕೆಗಳು ಬರಹಗಾರರ ಸೇವೆಗೆ ತುದಿಗಾಲಿನಲ್ಲಿ ನಿಂತಿರುವ ಸುಖದ ಕಾಲವಿದು. ಇದರಿಂದ ಕವಿತೆಯನ್ನೋ ಕತೆಯನ್ನೋ ಬರೆದು ತಕ್ಷಣ ಲೋಕಾರ್ಪಣೆ ಮಾಡುವ ಸ್ವಯಂ ಪ್ರಕಟಣೆಯ ಸೌಲಭ್ಯ ಸಿಕ್ಕಿದೆ. ಸಗಟು ಖರೀದಿಯ ಅವಕಾಶವಿರುವ ಕಾರಣ ಪುಸ್ತಕ ಪ್ರಕಾಶಕರು ಈಗ ದುರ್ಲಭರಲ್ಲ. ಕೃತಿಯ ಗುಣಮಟ್ಟವನ್ನು ಬಹಳ ಸಂದರ್ಭಗಳಲ್ಲಿ ಪ್ರಕಾಶಕರು ಪರಿಶೀಲಿಸುವ ಕಷ್ಟ ತೆಗೆದುಕೊಳ್ಳುವುದಿಲ್ಲ ಎಂದರು.ಓದುಗರ ಕೊರತೆಯೊಂದೇ ಕನ್ನಡಕ್ಕೆ ಎದುರಾದ ಆತಂಕವಲ್ಲ. ಸ್ಥೂಲವಾಗಿ ಯೋಚಿಸಿದಾಗ ಕೂಡ ಇಲ್ಲೀ ಇಡೀ ಕನ್ನಡ ಭಾಷೆಯ ಆತಂಕವೇ ಕಾಣುತ್ತದೆ. ಈ ದಶಕದಲ್ಲಿ ಜಿಲ್ಲೆಯಲ್ಲಿ ತಲೆಯೆತ್ತಿದ ಆಂಗ್ಲ ಮಾಧ್ಯಮದ ಶಾಲೆಗಳೆಷ್ಟು? ವಿದ್ಯಾರ್ಥಿಗಳಿಲ್ಲದೇ ಮುಚ್ಚಿದ ಕನ್ನಡ ಮಾಧ್ಯಮ ಶಾಲೆಗಳೆಷ್ಟು? ಏಳು ದಶಕಗಳಿಂದ ವಿದ್ಯಾದಾನ ಮಾಡುತ್ತ ಬಂದ ನನ್ನೂರಿನ ಪ್ರೌಢಶಾಲೆ ಈ ವರ್ಷ ಮುಚ್ಚಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!