ಕಾರವಾರ: ಇಲ್ಲಿನ ರವೀಂದ್ರನಾಥ ಟಾಗೋರ್ ಕಡಲ ತೀರದಲ್ಲಿ ಮರಳಿನಲ್ಲಿ ಸಿಲುಕಿದ್ದ ಮೀನುಗಾರಿಕಾ ಬೋಟ್ ಬುಧವಾರ ಮೇಲೆತ್ತಲಾಗಿದೆ. ಹವಾಮಾನ ವೈಪರಿತ್ಯದಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಂಗಳೂರಿನ ಮಿಸ್ಬಾ ಹೆಸರಿನ ಬೋಟ್ ವಾಪಸ್ ಆಗಮಿಸಿ ಬಂದರು ಸಮೀಪ ಲಂಗರು ಹಾಕಿತ್ತು. ಆದರೆ ಭಾರಿ ಗಾಳಿಯಿಂದಾಗಿ ಆ್ಯಂಕರ ತುಂಡಾಗಿ ತೀರಕ್ಕೆ ಬಂದು ಕಳೆದ 12 ದಿನಗಳಿಂದ ಮರಳಿನಲ್ಲಿ ಹೂತುಕೊಂಡಿತ್ತು. ಬೋಟ್, ಕ್ರೇನ್ ಮೂಲಕ ಮೇಲೆತ್ತಲು ಪ್ರಯತ್ನ ನಡೆದಿದ್ದರೂ ವಿಫಲವಾಗಿದ್ದರು. ಬುಧವಾರ ಇತರೆ ಬೋಟ್ ಹಾಗೂ ಜೆಸಿಬಿ ಸಹಕಾರದಿಂದ ಮೇಲೆತ್ತಲಾಗಿದೆ. ರಿಪೇರಿಗಾಗಿ ಅಂದಾಜು ₹ 29 ಲಕ್ಷ ಖರ್ಚಾಗಲಿದೆ. ಕಾರ್ಯಾಚರಣೆಗೆ ಬಳಸಿದ ಯಂತ್ರಗಳ ಬಾಡಿಗೆ, ಕಾರ್ಮಿಕರ ವಸತಿ ಸೇರಿದಂತೆ ₹ 35 ಲಕ್ಷ ವೆಚ್ಚವಾಗಿದೆ.