ಆರ್‌.ಆರ್‌.ನಗರ ಶಾಸಕ ಮುನಿರತ್ನ ವಿರುದ್ಧ ಆಕ್ರೋಶ

KannadaprabhaNewsNetwork | Published : Sep 15, 2024 1:52 AM

ಸಾರಾಂಶ

ಚನ್ನಪಟ್ಟಣ: ಗುತ್ತಿಗೆದಾರರೊಬ್ಬರಿಗೆ ೩೦ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಇದೀಗ ಆತನ ವಿರುದ್ಧ ಕೊಲೆ ಬೆದರಿಕೆ ಹಾಕುವ ಜತೆಗೆ ದಲಿತ ಸಮುದಾಯ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರನ್ನು ಸರ್ಕಾರವೇ ಸುಮೋಟೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಒತ್ತಾಯಿಸಿದರು.

ಚನ್ನಪಟ್ಟಣ: ಗುತ್ತಿಗೆದಾರರೊಬ್ಬರಿಗೆ ೩೦ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಇದೀಗ ಆತನ ವಿರುದ್ಧ ಕೊಲೆ ಬೆದರಿಕೆ ಹಾಕುವ ಜತೆಗೆ ದಲಿತ ಸಮುದಾಯ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರನ್ನು ಸರ್ಕಾರವೇ ಸುಮೋಟೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಒತ್ತಾಯಿಸಿದರು.

ನಗರದ ಕಾವೇರಿ ಸರ್ಕಲ್‌ನಲ್ಲಿ ದಲಿತ ಮತ್ತು ಒಕ್ಕಲಿಗ ಸಮುದಾಯಗಳ ಬಗ್ಗೆ ಕೀಳು ಮಟ್ಟದ ಭಾಷೆ ಪ್ರಯೋಗಿಸಿರುವ ಶಾಸಕ ಮುನಿರತ್ನ ಅವರ ನಡೆ ಖಂಡಿಸಿ ಹಾಗೂ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಹಾಗೂ ಸತ್ತೇಗಾಲ ಯೋಜನೆಯನ್ನು ಶೀಘ್ರವಾಗಿ ಮುಕ್ತಾಯ ಮಾಡುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ೩೪೬ನೇ ದಿನದ ಹೋರಾಟದಲ್ಲಿ ಅವರು ಮಾತನಾಡಿದರು.

ಬಿಬಿಎಂಪಿಯ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆದಾರ ಚಲುವರಾಜು ಅವರಿಗೆ ೩೦ ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿರುವ ಮುನಿರತ್ನ, ಈ ಹಣ ಕೊಡದಿದ್ದಕ್ಕೆ ದಲಿತ ಸಮುದಾಯದ ಮುಖಂಡರು ಹಾಗೂ ಮಹಿಳೆಯರ ವಿರುದ್ಧ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ಅವರು ಒಕ್ಕಲಿಗ ಸಮುದಾಯದ ಬಗ್ಗೆಯೂ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ಕೀಳುಮಟ್ಟದ ಪದ ಬಳಕೆ ಮಾಡಿ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುವ ಮುನಿರತ್ನ ಅವರನ್ನು ಸುಮೋಟೋ ಕಾಯ್ದೆಯಡಿ ಸರ್ಕಾರವೇ ದೂರು ದಾಖಲಿಸಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದಲ್ಲಿ ತಾಲೂಕಿನ ದಲಿತಪರ ಸಂಘಟನೆ, ರೈತ ಸಂಘಟನೆ, ಒಕ್ಕಲಿಗ ಸಮುದಾಯದ ಸಂಘಟನೆಗಳೊಂದಿಗೆ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಬಳಿ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿಎಸ್‌ಎಸ್ ಸಂಚಾಲಕ ವೆಂಕಟೇಶ್(ಸೇಟು) ಮಾತನಾಡಿ, ಶಾಸಕ ಮುನಿರತ್ನ ಅವರ ನಡೆ ಖಂಡನೀಯ. ಜಾತಿ ನಿಂದನೆಯ ಜತೆಗೆ ಮಹಿಳೆಯರ ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡಿರುವುದು ಘೋರ ಅಪರಾಧವಾಗಿದೆ. ರಾಜ್ಯಪಾಲರು ಇವರ ಶಾಸಕ ಸ್ಥಾನದಿಂದ ವಜಾ ಮಾಡಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ಶಾಸಕ ಮುನಿರತ್ನ ಅವರು ಈ ಹಿಂದೆ ವೋಟರ್ ಕಾರ್ಡ್‌ಗಳನ್ನು ನಕಲು ಮಾಡಿ ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿದುಕೊಂಡಿದ್ದರು. ಜತೆಗೆ ವಿವಿಧ ಸಮುದಾಯದ ಸ್ವಾಮೀಜಿಗಳ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರು. ಇದೀಗ ಓರ್ವ ವ್ಯಕ್ತಿಯನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿರುವುದು ಇವರ ಕೀಳುಮಟ್ಟದ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಇವರನ್ನು ಶಾಸಕ ಸ್ಥಾನದಿಂದ ವಜಾ ಮಾಡಿ ಕೂಡಲೇ ಬಂಧಿಸಿಬೇಕು ಎಂದು ಒತ್ತಾಯಿಸಿದರು.

ಈ ವೇಳೆ ನಿವೃತ್ತ ಪ್ರಾಂಶುಪಾಲ ನಿಂಗೇಗೌಡ(ಎನ್‌ಜಿ), ನೀಲಸಂದ್ರ ಸಿದ್ದರಾಮು, ಅಪ್ಪಗೆರೆ ಪ್ರದೀಪ್, ರವಿ, ರಾಜು, ಚಿಕ್ಕೇನಹಳ್ಳಿ ಸಿದ್ದಪ್ಪಾಜಿ ಇತರರಿದ್ದರು.

ಪೊಟೋ೧೪ಸಿಪಿಟಿ1:

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಬಂಧನಕ್ಕೆ ಆಗ್ರಹಿಸಿ ಕಕಜವೇ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

Share this article